ಉದಯೋನ್ಮುಖರ ಏಷ್ಯಾ ಕಪ್‌ ಟೂರ್ನಿಗೆ ಭಾರತ 'ಎ' ತಂಡ ಪ್ರಕಟಭಾರತ 'ಎ' ತಂಡದಲ್ಲಿ ಸ್ಥಾನ ಪಡೆದ ರಾಜ್ಯದ ಪ್ರತಿಭಾನ್ವಿತ ಕ್ರಿಕೆಟಿಗ ನಿಕಿನ್ ಜೋಸ್ಅಂಡರ್‌-19 ವಿಶ್ವಕಪ್‌ ವಿಜೇತ ತಂಡದ ನಾಯಕ ಯಶ್‌ ಧುಳ್‌ ತಂಡ ಮುನ್ನಡೆಸಲಿದ್ದಾರೆ

ನವದೆಹಲಿ(ಜು.05): ಇದೇ ಜುಲೈ 13ರಿಂದ 23ರ ವರೆಗೂ ಶ್ರೀಲಂಕಾದಲ್ಲಿ ನಡೆಯಲಿರುವ ಉದಯೋನ್ಮುಖರ ಏಷ್ಯಾ ಕಪ್‌ಗೆ ಭಾರತ ‘ಎ’ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ನಿಕಿನ್‌ ಜೋಸ್‌ ಆಯ್ಕೆಯಾಗಿದ್ದಾರೆ. ಅಂಡರ್‌-19 ವಿಶ್ವಕಪ್‌ ವಿಜೇತ ತಂಡದ ನಾಯಕ ಯಶ್‌ ಧುಳ್‌ ತಂಡ ಮುನ್ನಡೆಸಲಿದ್ದು, ಅಭಿಷೇಕ್‌ ಶರ್ಮಾಗೆ ಉಪನಾಯಕ ಪಟ್ಟ ಕಟ್ಟಲಾಗಿದೆ.

ಐಪಿಎಲ್‌ ತಾರೆಯರಾದ ಸಾಯಿ ಸುದರ್ಶನ್‌, ಅಭಿಷೇಕ್‌ ಶರ್ಮಾ, ಪ್ರಭ್‌ಸಿಮ್ರನ್‌, ಧೃವ್ ಜುರೆಲ್‌, ರಿಯಾನ್‌ ಪರಾಗ್, ನೇಹಲ್‌ ವಧೇರಾಗೆ ಸ್ಥಾನ ನೀಡಲಾಗಿದೆ. 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆ ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು. 

ಭಾರತ ತಂಡವು ‘ಎ’ ಗುಂಪಿನಲ್ಲಿ ಯುಎಇ, ಪಾಕಿಸ್ತಾನ, ನೇಪಾಳ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಭಾರತ ಜು.13ಕ್ಕೆ ಯುಎಇ, ಜು.15ಕ್ಕೆ ಪಾಕಿಸ್ತಾನ, ಜು.18ಕ್ಕೆ ನೇಪಾಳ ವಿರುದ್ಧ ಆಡಲಿದೆ. ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾ ಹಾಗೂ ಒಮಾನ್‌ ತಂಡಗಳಿವೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆವ ತಂಡಗಳು ಸೆಮೀಸ್‌ಗೇರಲಿವೆ. ಜು.23ಕ್ಕೆ ಫೈನಲ್‌ ನಡೆಯಲಿದೆ.

ಉದಯೋನ್ಮುಖ ಏಷ್ಯಾಕಪ್ ಟೂರ್ನಿಗೆ ಭಾರತ 'ಎ' ತಂಡ ಹೀಗಿದೆ:

ಸಾಯಿ ಸುದರ್ಶನ್‌, ಅಭಿಷೇಕ್ ಶರ್ಮಾ(ಉಪನಾಯಕ), ನಿಕಿನ್ ಜೋಸ್, ಪ್ರದೋಶ್‌ ರಂಜನ್ ಪೌಲ್, ಯಶ್ ಧುಳ್(ನಾಯಕ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಪ್ರಭ್‌ಸಿಮ್ರನ್ ಸಿಂಗ್(ವಿಕೆಟ್ ಕೀಪರ್), ಧೃವ್ ಜ್ವರೆಲ್(ವಿಕೆಟ್ ಕೀಪರ್), ಮಾನವ್ ಸುತಾರ್, ಯುವರಾಜ್ ಸಿಂಗ್ ದೋಢಿಯಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗಾರ್‌ಗೆಕರ್.

ಅಗರ್ಕರ್‌ ಬಿಸಿಸಿಐ ಪ್ರಧಾನ ಆಯ್ಕೆಗಾರ

ಮುಂಬೈ: ಭಾರತದ ಮಾಜಿ ವೇಗಿ ಅಜಿತ್‌ ಅಗರ್ಕರ್‌ ಭಾರತ ಹಿರಿಯ ಪುರುಷರ ತಂಡದ ಪ್ರಧಾನ ಆಯ್ಕೆಗಾರರಾಗಿ ನೇಮಕಗೊಂಡಿದ್ದಾರೆ. ಮಂಗಳವಾರ ಅಶೋಕ್‌ ಮಲ್ಹೋತ್ರಾ, ಜತಿನ್‌ ಪರಂಜಪೆ, ಸುಲಕ್ಷಣ ನಾಯ್ಕ್‌ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ) ಅಗರ್ಕರ್‌ರ ಸಂದರ್ಶನ ನಡೆಸಿ, ಅವರ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿತು. ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಅಗರ್ಕರ್‌ರ ಹೆಸರನ್ನು ಘೋಷಿಸಿದರು.

ಮಗಳ ಜತೆ ಕ್ರಿಕೆಟ್ ಪ್ರಾಕ್ಟೀಸ್‌; ಮುದ್ದಾದ ವಿಡಿಯೋ ಹಂಚಿಕೊಂಡ ಕೇನ್ ವಿಲಿಯಮ್ಸನ್‌..!

ಭಾರತ ಪರ 26 ಟೆಸ್ಟ್‌, 191 ಏಕದಿನ, 4 ಟಿ20 ಪಂದ್ಯಗಳನ್ನು ಆಡಿರುವ ಅಗರ್ಕರ್‌, ಮುಂಬೈ ತಂಡದ ಪ್ರಧಾನ ಆಯ್ಕೆಗಾರರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಹಾಯಕ ಕೋಚ್‌ ಸಹ ಆಗಿದ್ದರು. ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಶಿವ ಸುಂದರ್‌ ದಾಸ್‌, ಸುಬ್ರತೋ ಬ್ಯಾನರ್ಜಿ, ಸಲೀಲ್‌ ಅಂಕೋಲಾ, ಎಸ್‌.ಶರತ್ ಇದ್ದಾರೆ.

2024ರ ಐಪಿಎಲ್‌ನಲ್ಲಿ ಪಾಕ್‌ ವೇಗಿ ಅಮೀರ್‌ ಕಣಕ್ಕೆ?

ಲಂಡನ್‌: ಪಾಕಿಸ್ತಾನ ಆಟಗಾರರಿಗೆ ಐಪಿಎಲ್‌ನಲ್ಲಿ ಆಡುವುದಕ್ಕೆ ನಿಷೇಧವಿದ್ದರೂ ಮುಂದಿನ ವರ್ಷದ ಟೂರ್ನಿಯಲ್ಲಿ ಪಾಕ್‌ ವೇಗಿ ಮೊಹಮದ್‌ ಅಮೀರ್‌ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಪಾಕ್‌ ಪರ 147 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅಮೀರ್‌ 2020ರಿಂದಲೂ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಹೀಗಾಗಿ ಮುಂದಿನ ವರ್ಷ ಅವರಿಗೆ ಬ್ರಿಟನ್‌ ಪೌರತ್ವ ಸಿಗುವ ನಿರೀಕ್ಷೆಯಿದೆ. ‘ಭವಿಷ್ಯದಲ್ಲಿ ಏನಾಗುತ್ತೆ ಹೇಳಲಾಗದು. ಆದರೆ 2024ರಲ್ಲಿ ಐಪಿಎಲ್‌ನಲ್ಲಿ ಆಡುವ ಬಗ್ಗೆ ಚಿಂತಿಸುತ್ತಿದ್ದೇನೆ. ಆದರೆ ಇಂಗ್ಲೆಂಡ್‌ ತಂಡದಲ್ಲಿ ಅವಕಾಶ ಬಯಸುವುದಿಲ್ಲ’ ಎಂದು ಅಮೀರ್‌ ಹೇಳಿದ್ದಾರೆ.