ಮುಂಬೈ ಇಂಡಿಯನ್ಸ್ ವುಮೆನ್ಸ್ ಪ್ರೀಮಿಯರ್ ಲೀಗ್‌ನ 3ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಆಯಿತು. ಡೆಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ 20 ಓವರ್‌ಗಳಲ್ಲಿ 149 ರನ್ ಗಳಿಸಿತು. ಹರ್ಮನ್‌ಪ್ರೀತ್ ಕೌರ್ 66 ರನ್ ಗಳಿಸಿದರು. ಡೆಲ್ಲಿ 20 ಓವರ್‌ಗಳಲ್ಲಿ 141 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಮುಂಬೈ ಇಂಡಿಯನ್ಸ್ ಫ್ರಾಂಚೈಸ್‌ಗೆ 7ನೇ ಟ್ರೋಫಿಯಾಗಿದೆ.
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಅದೃಷ್ಟ ಮತ್ತೆ ಕೈಕೊಟ್ಟಿದೆ. ಮುಂಬೈ ಇಂಡಿಯನ್ಸ್ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶನಿವಾರ ಮುಕ್ತಾಯಗೊಂಡ 3ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಲ್ಲಿ ಮುಂಬೈ ಟ್ರೋಫಿ ಮುಡಿಗೇರಿಸಿಕೊಂಡಿದೆ. ಫೈನಲ್‌ನಲ್ಲಿ ಡೆಲ್ಲಿ ತಂಡವನ್ನು 08 ರನ್‌ಗಳಿಂದ ಬಗ್ಗುಬಡಿದ ಮುಂಬೈ 2ನೇ ಟ್ರೋಫಿ ಗೆದ್ದರೆ, ಡೆಲ್ಲಿ ಸತತ 3ನೇ ಫೈನಲ್‌ನಲ್ಲೂ ಸೋಲುವ ಮೂಲಕ ಚೊಚ್ಚಲ ಕಪ್ ಕನಸು ಭಗ್ನಗೊಳಿಸಿತು.
ಟಾಸ್ ಗೆದ್ದ ಡೆಲ್ಲಿ ಆಯ್ಕೆ ಮಾಡಿಕೊಂಡಿದ್ದು ಫೀಲ್ಡಿಂಗ್. ಫೈನಲ್‌ನ ಒತ್ತಡ ಹಿಮ್ಮೆಟ್ಟಿಸಿ ಗುರಿ ಬೆನ್ನತ್ತಿ ಗೆಲ್ಲುವ ಯೋಜನೆ ಡೆಲ್ಲಿಯದ್ದಾಗಿತ್ತು. ಇದಕ್ಕೆ ತಕ್ಕಂತೆ ಡೆಲ್ಲಿ ಆರಂಭದಲ್ಲಿ ಬೆಂಕಿ ದಾಳಿ ಸಂಘಟಿಸಿದರೂ, ಮುಂಬೈ 20 ಓವರಲ್ಲಿ 7 ವಿಕೆಟ್‌ಗೆ 149 ರನ್ ಕಲೆಹಾಕಿತು. ಮಹತ್ವದ ಪಂದ್ಯದಲ್ಲಿ ಇದು ಸ್ಪರ್ಧಾತ್ಮಕ ಮೊತ್ತವೇ ಆಗಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 141 ರನ್ ಗಳಿಸುವ ಮೂಲಕ ಕೇವಲ 8 ರನ್ ಅಂತರದ ರೋಚಕ ಸೋಲು ಅನುಭವಿಸಿತು.
ಇದನ್ನೂ ಓದಿ: ಐಪಿಎಲ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಟಾಪ್ 5 ಡೇಂಜರಸ್ ಬ್ಯಾಟರ್‌ಗಳಿವರು!
1.5 ಓವರ್‌ಗಳಲ್ಲಿ 15 ರನ್ ಗಳಿಸಿದ್ದ ಡೆಲ್ಲಿ ಬಳಿಕ ಅಕ್ಷರಶಃ ಪತನ ಕಂಡಿತು. ಬಳಿಕ 3.1 ಓವರ್‌ಗಳಲ್ಲಿ 7 ರನ್ ಗಳಿಸಿ 2 ವಿಕೆಟ್‌ಗಳನ್ನೂ ಕಳೆದುಕೊಂಡಿತು. ಮೆಗ್ ಲ್ಯಾನಿಂಗ್(13), ಶಫಾಲಿ ವರ್ಮಾ(4) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಿಲಿಲ್ಲ. ಬಳಿಕ 10 ಓವರ್‌ಗಳಲ್ಲಿ ತಂಡ 4 ವಿಕೆಟ್‌ಗೆ 58 ರನ್ ಗಳಿಸಿದ್ದ ತಂಡ, 15 ಓವರ್ ಆಗುವಾಗ 98ಕ್ಕೆ 6 ವಿಕೆಟ್ ಕಳೆದುಕೊಂಡಿತ್ತು. ಇನ್ನೇನು ಸೋತೇ ಬಿಟ್ಟಿತು ಅಂದುಕೊಳ್ಳುವಷ್ಟರಲ್ಲಿ ಮಾರಿಯಾನ್ ಕಾಪ್ ತಂಡಕ್ಕೆ ಅಗತ್ಯ ಆಕ್ಸಿಜನ್ ನೀಡಿದರು. 16ನೇ ಓವರ್‌ನಲ್ಲಿ 2 ಬೌಂಡರಿ, 1 ಸಿಕ್ಸರ್ ಸಿಡಿಸಿದ ಕಾಪ್ ಗೆಲುವಿನ ಕನಸು ಜೀವಂತವಾಗಿರಿಸಿಕೊಂಡರು. ಆದರೆ 18ನೇ ಓವರ್‌ನ 4ನೇ ಎಸೆತದಲ್ಲಿ ಕಾಪ್ ವಿಕೆಟ್ ಕಿತ್ತ ಸ್ಕೀವರ್ ಬ್ರಂಟ್ ಪಂದ್ಯ ಮುಂಬೈನ ಕೈ ಜಾರದಂತೆ ನೋಡಿಕೊಂಡರು. ಕಾಪ್ 26 ಎಸೆತಗಳಲ್ಲಿ 40 ರನ್ ಸಿಡಿಸಿದರು. ಕರ್ನಾಟಕದ ನಿಕಿ ಪ್ರಸಾದ್(25) ಕೊನೆವರೆಗೆ ಕ್ರೀಸ್‌ನಲ್ಲಿದ್ದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಟಿ20 ಕ್ರಿಕೆಟ್ ಲೀಗ್, ಐಪಿಎಲ್ ಟೂರ್ನಿಗೆ ಕ್ಷಣಗಣನೆ!
ಹರ್ಮನ್ ಆರ್ಭಟ: ಇದಕ್ಕೂ ಮುನ್ನ, ಮುಂಬೈ ಆರಂಭ ಕೂಡಾ ತೀರಾ ಕಳಪೆಯಾಗಿತ್ತು. ಟೂರ್ನಿಯುದ್ದಕ್ಕೂ ತಂಡಕ್ಕೆ ಆಸರೆಯಾಗಿದ್ದ ಹೇಲಿ ಮ್ಯಾಥ್ಯೂಸ್ 3 ರನ್‌ಗೆ ಔಟಾದರು. ಪವರ್-ಪ್ಲೇ ಮುಕ್ತಾಯಕ್ಕೆ ತಂಡದ ಸ್ಕೋರ್ 2 ವಿಕೆಟ್‌ಗೆ 22. ಕಾಪ್ 4 ಓವರ್‌ಗಳಲ್ಲಿ ಕೇವಲ 11 ರನ್‌ಗೆ 2 ವಿಕೆಟ್ ಕಿತ್ತರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕ್ರೀಸ್‌ಗಿಳಿಯುತ್ತಲೇ ತಂಡದ ಚಿತ್ರಣವೇ ಬದಲಾಯಿತು. ಸ್ಫೋಟಕ ಆಟವಾಡಿದ ಹರ್ಮನ್ 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 66 ರನ್ ಸಿಡಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಸ್ಕೀವರ್ ಬ್ರಂಟ್ 30 ರನ್ ಗಳಿಸಿದರು. ಕೊನೆಯಲ್ಲಿ ಅಮನ್‌ಜೋತ್ 14 ರನ್ ಗಳಿಸಿ ತಂಡವನ್ನು 150ರ ಸನಿಹಕ್ಕೆ ತಂದರು.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ಐಪಿಎಲ್ 973 ರನ್ ದಾಖಲೆ ಈ ಐವರಲ್ಲಿ ಯಾರು ಮುರಿಯಬಹುದು?
ಸ್ಕೋರ್: ಮುಂಬೈ 20 ಓವರಲ್ಲಿ 149/7 (ಹರ್ಮನ್‌ಪ್ರೀತ್ 66, ಸ್ಕೀವರ್ 30, ಕಾಪ್ 2-11), ಡೆಲ್ಲಿ 20 ಓವರಲ್ಲಿ 141/9 (ಕಾಪ್ 40, ಜೆಮಿಮಾ 30, ಸ್ಕೀವರ್ 3-25)
ಐಪಿಎಲ್, ಡಬ್ಲ್ಯುಪಿಎಲ್‌ನಲ್ಲಿ ಮುಂಬೈಗೆ 7ನೇ ಟ್ರೋಫಿ!
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಿದು ಒಟ್ಟಾರೆ 7ನೇ ಟ್ರೋಫಿ. ಮುಂಬೈ ತಂಡ ಐಪಿಎಲ್‌ನಲ್ಲಿ 5 ಬಾರಿ(2013, 2015, 2017, 2019, 2020) ಚಾಂಪಿಯನ್ ಆಗಿದೆ. ಮಹಿಳಾ ತಂಡ 2023, 2025ರಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿದೆ.
