ಆರ್‌ಸಿಬಿ ಎದುರು ಸ್ಪೋಟಕ ಅರ್ಧಶತಕ ಸಿಡಿಸಿದ ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ಮೊದಲು ಬ್ಯಾಟ್‌ ಮಾಡಿ 223 ರನ್ ಕಲೆಹಾಕಿದ ಡೆಲ್ಲಿ ಕ್ಯಾಪಿಟಲ್ಸ್‌ಆರ್‌ಸಿಬಿ ಬೌಲರ್‌ಗಳ ಮೇಲೆ ಡೆಲ್ಲಿ ಬ್ಯಾಟರ್ ಸವಾರಿ

ಮುಂಬೈ(ಮಾ.05): ಆರಂಭಿಕ ಬ್ಯಾಟರ್‌ಗಳಾದ ಶಫಾಲಿ ವರ್ಮಾ(84) ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್‌(72) ಸಿಡಿಲಬ್ಬರದ ಅರ್ಧಶತಕ ಹಾಗೂ ಮಾರಿಜಾನ್ ಕಾಪ್‌ ಮತ್ತು ಜೆಮಿಮಾ ರೋಡ್ರಿಗ್ಸ್‌ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಕೇವಲ 2 ವಿಕೆಟ್ ಕಳೆದುಕೊಂಡು 223 ರನ್ ಬಾರಿಸಿದ್ದು, ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಕಠಿಣ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನಾಯಕಿ ಮೆಗ್‌ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ವಿಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲ ಓವರ್‌ನಲ್ಲಿ ಕೊಂಚ ಎಚ್ಚರಿಕೆಯ ಆಟವಾಡಿದ ಡೆಲ್ಲಿ ಜೋಡಿ, ಇದಾದ ಬಳಿಕ ಎರಡನೇ ಓವರ್‌ನಿಂದಲೇ ಮೈಚಳಿ ಬಿಟ್ಟು ಬ್ಯಾಟ್ ಬೀಸಲಾರಂಭಿಸಿದರು. ಪವರ್‌ ಪ್ಲೇನ ಮೊದಲ 6 ಓವರ್‌ನಲ್ಲಿ ಈ ಜೋಡಿ 57 ರನ್‌ಗಳ ಜತೆಯಾಟವಾಡಿತು. ಇದಾದ ಬಳಿಕವೂ ಮಧ್ಯ ಓವರ್‌ಗಳಲ್ಲೂ ರನ್‌ ವೇಗಕ್ಕೆ ಮತ್ತಷ್ಟು ಚುರುಕು ಮುಟ್ಟಿಸಿತು. ಪರಿಣಾಮ ಮೊದಲ 10 ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 105 ರನ್‌ ಕಲೆಹಾಕಿತು.

ಆರಂಭಿಕರಿಬ್ಬರು ಸ್ಪೋಟಕ ಅರ್ಧಶತಕ: ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್ ಪೈಪೋಟಿಗೆ ಬಿದ್ದವರಂತೆ ಬೌಂಡರಿ ಬಾರಿಸುವ ಮೂಲಕ ಆರ್‌ಸಿಬಿ ಬೌಲರ್‌ಗಳು ಕಂಗಾಲಾಗುವಂತೆ ಮಾಡಿದರು. ಶಫಾಲಿ ವರ್ಮಾ ಕೇವಲ 31 ಎಸೆತಗಳನ್ನು ಎದುರಿಸಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಮೆಗ್‌ ಲ್ಯಾನಿಂಗ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 14.3 ಓವರ್‌ಗಳಲ್ಲಿ 162 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿ ಕೊಟ್ಟಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಹೀಥರ್ ನೈಟ್‌ ಯಶಸ್ವಿಯಾದರು. 43 ಎಸೆತಗಳಲ್ಲಿ 14 ಬೌಂಡರಿ ಸಹಿತ 72 ರನ್ ಗಳಿಸಿ ಮುನ್ನುಗ್ಗುತ್ತಿದ್ದ ಮೆಗ್ ಲ್ಯಾನಿಂಗ್‌ ಅವರನ್ನು ಕ್ಲೀನ್ ಬೌಲ್ಡ್‌ ಮಾಡುವಲ್ಲಿ ಹೀಥರ್ ನೈಟ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಶಫಾಲಿ ವರ್ಮಾ ಕೂಡಾ ಅದೇ ಓವರ್‌ನಲ್ಲಿ ವಿಕೆಟ್‌ ಕೀಪರ್ ರಿಚಾ ಘೋಷ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಶಫಾಲಿ 45 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

200ರ ಗಡಿ ದಾಟಿಸಿದ ಕಾಪ್-ರೋಡ್ರಿಗ್ಸ್‌: 163 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗಿಳದಿ ಮಾರಿಜಾನ್ ಕಾಪ್‌ ಹಾಗೂ ಜೆಮಿಮಾ ರೋಡ್ರಿಗ್ಸ್‌ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಜೆಮಿಮಾ 15 ಎಸೆತಗಳಲ್ಲಿ 3 ಬೌಂಡರಿ ಸಹಿತ ಅಜೇಯ 22 ರನ್ ಬಾರಿಸಿದರೆ, ಮಾರಿಜಾನ್ ಕಾಪ್‌ ಕೇವಲ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 39 ರನ್ ಚಚ್ಚಿದರು.