ಇಂದಿನಿಂದ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌-ಗುಜರಾತ್ ಜೈಂಟ್ಸ್‌ ಕಾದಾಟಪ್ರಶಸ್ತಿಗಾಗಿ 5 ಮಹಿಳಾ ತಂಡಗಳ ನಡುವೆ ಕಾದಾಟ

ಮುಂಬೈ(ಮಾ.04): ಬಹು​ನಿ​ರೀ​ಕ್ಷಿತ ಚೊಚ್ಚಲ ಆವೃ​ತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಡ​ಬ್ಲ್ಯು​ಪಿ​ಎ​ಲ್‌​)ಗೆ ಶನಿ​ವಾ​ರ ಮುಂಬೈ​ನಲ್ಲಿ ಅದ್ಧೂರಿ ಚಾಲನೆ ಸಿಗ​ಲಿದೆ. ಮಹಿಳಾ ಐಪಿ​ಎಲ್‌ ಎಂದೇ ಕರೆ​ಸಿ​ಕೊ​ಳ್ಳು​ತ್ತಿ​ರುವ ಟೂರ್ನಿಯ ರೋಚಕ ಕಾದಾ​ಟಕ್ಕೆ ಈ ಬಾರಿ ಮುಂಬೈನ ಬ್ರೆಬೋರ್ನ್‌ ಹಾಗೂ ನವಿ ಮುಂಬೈನ ಡಿ.ವೈ.ಪಾಟೀಲ್‌ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ.

23 ದಿನಗಳ ಕಾಲ ನಡೆಯಲಿರುವ ಟೂರ್ನಿ​ಯಲ್ಲಿ 5 ತಂಡ​ಗಳು ಪಾಲ್ಗೊ​ಳ್ಳ​ಲಿದ್ದು, ಫೈನಲ್‌ ಸೇರಿ ಒಟ್ಟು 22 ಪಂದ್ಯ​ಗಳು ನಡೆ​ಯ​ಲಿವೆ. ಮಾರ್ಚ್‌ 26ಕ್ಕೆ ಫೈನಲ್‌ ನಿಗದಿಯಾಗಿದೆ. ಶನಿ​ವಾರ ಡಿ.ವೈ.​ಪಾ​ಟೀಲ್‌ ಕ್ರೀಡಾಂಗ​ಣ​ದಲ್ಲಿ ನಡೆ​ಯ​ಲಿ​ರುವ ಉದ್ಘಾ​ಟನಾ ಪಂದ್ಯ​ದಲ್ಲಿ ಗುಜ​ರಾತ್‌ ಜೈಂಟ್ಸ್‌ ಹಾಗೂ ಮುಂಬೈ ಇಂಡಿ​ಯನ್ಸ್‌ ತಂಡ​ಗಳು ಸೆಣ​ಸಾ​ಡ​ಲಿವೆ. ರಾಯಲ್‌ ಚಾಲೆಂಜ​ರ್ಸ್‌ ಬೆಂಗ​ಳೂ​ರು​(​ಆ​ರ್‌​ಸಿ​ಬಿ) ಭಾನು​ವಾರ ಡೆಲ್ಲಿ ಕ್ಯಾಪಿ​ಟಲ್ಸ್‌ ವಿರುದ್ಧ ಆಡುವ ಮೂಲಕ ಅಭಿ​ಯಾನ ಆರಂಭಿ​ಸ​ಲಿದೆ.

ಟೂರ್ನಿ​ಯಲ್ಲಿ 4 ಡಬಲ್‌ ಹೆಡ​ರ್‌​(​ದಿ​ನಕ್ಕೆ 2 ಪಂದ್ಯ​)​ಗ​ಳಿದ್ದು, ಆ ದಿನ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭ​ವಾ​ಗ​ಲಿದೆ. ಒಂದೇ ಪಂದ್ಯ​ವಿ​ರುವ ದಿನ ಸಂಜೆ 7.30ಕ್ಕೆ ಪಂದ್ಯ ಆರಂಭ​ಗೊ​ಳ್ಳ​ಲಿ​ದೆ.

ಟೂರ್ನಿ ಮಾದರಿ ಹೇಗೆ?

ಡಬಲ್‌ ರೌಂಡ್‌ ರಾಬಿನ್‌ ಮಾದ​ರಿ​ಯಲ್ಲಿ ಲೀಗ್‌ ಹಂತ ನಡೆ​ಯ​ಲಿದ್ದು, ಪ್ರತಿ ತಂಡ ಇತರ 4 ತಂಡ​ಗಳ ವಿರುದ್ಧ ತಲಾ 2 ಬಾರಿ ಸೆಣ​ಸಲಿದೆ. ಲೀಗ್‌ ಹಂತ​ದಲ್ಲಿ ಅಗ್ರ​ಸ್ಥಾನ ಪಡೆದ ತಂಡ ನೇರ​ವಾಗಿ ಫೈನಲ್‌ ಪ್ರವೇ​ಶಿ​ಸ​ಲಿದ್ದು, 2 ಮತ್ತು 3ನೇ ಸ್ಥಾನ ಪಡೆವ ತಂಡ​ಗಳು ಎಲಿ​ಮಿ​ನೇ​ಟ​ರ್‌​ನಲ್ಲಿ ಸೆಣ​ಸ​ಲಿ​ವೆ.

WPL 2023 ಮಹಿಳಾ ಐಪಿಎಲ್ ಅದ್ಧೂರಿ ಒಪನಿಂಗ್ ಸೆರಮನಿ, ಕೃತಿ, ಕಿಯಾರ ವರ್ಣರಂಜಿತ ಕಾರ್ಯಕ್ರಮ!

ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳು& ನಾಯಕಿಯರು

ರಾಯಲ್ ಚಾಲೆಂಜರ್ಸ್‌ ಬೆಂಗಳೂರು- ಸ್ಮೃತಿ ಮಂಧನಾ
ಮುಂಬೈ ಇಂಡಿಯನ್ಸ್‌ - ಹರ್ಮನ್‌ಪ್ರೀತ್ ಕೌರ್
ಡೆಲ್ಲಿ ಕ್ಯಾಪಿಟಲ್ಸ್‌ - ಮೆಗ್‌ ಲ್ಯಾನಿಂಗ್
ಯುಪಿ ವಾರಿಯರ್ಸ್‌- ಎಲಿಸಾ ಹೀಲಿ
ಗುಜರಾತ್ ಜೈಂಟ್ಸ್‌ - ಬೆಥ್ ಮೂನಿ

ಅದ್ಧೂರಿ ಉದ್ಘಾ​ಟ​ನಾ ಸಮಾ​ರಂಭ

ಟೂರ್ನಿಯ ಉದ್ಘಾ​ಟನಾ ಸಮಾ​ರಂಭ ಅದ್ಧೂ​ರಿ​ಯಾಗಿ ಆಯೋ​ಜಿ​ಸಲು ಬಿಸಿ​ಸಿಐ ನಿರ್ಧ​ರಿ​ಸಿದ್ದು, ಶನಿ​ವಾರ ಸಂಜೆ 5.30ರಿಂದ ಡಿ.ವೈ.​ಪಾ​ಟೀಲ್‌ ಕ್ರೀಡಾಂಗ​ಣ​ದಲ್ಲಿ ಕಾರ‍್ಯ​ಕ್ರಮ ನಡೆ​ಯ​ಲಿ​ದೆ. ಬಾಲಿ​ವುಡ್‌ ತಾರೆ​ಗ​ಳಾದ ಕಿಯಾರ ಅಡ್ವಾನಿ, ಕೃತಿ ಸನೋನ್‌, ಗಾಯಕ ಎಪಿ ಧಿಲ್ಲೋನ್‌ ಸೇರಿ​ದಂತೆ ಪ್ರಮು​ಖರು ಪ್ರದ​ರ್ಶನ ನೀಡ​ಲಿ​ದ್ದಾರೆ. ಸುಮಾರು ಒಂದೂವರೆ ಗಂಟೆ ಕಾಲ ಸಮಾರಂಭ ನಡೆಯಲಿದೆ.