ಭಾರತದ ಸ್ಪಿನ್ ಖೆಡ್ಡಾಗೆ ಬಿದ್ದ ಕಾಂಗರೂ ಪಡೆ, ಭಾರತಕ್ಕೆ ಗೆಲ್ಲಲು ಸಾಧಾರಣ ಗುರಿ..!
ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಆರಂಭದಲ್ಲೇ ಕಾಂಗರೂ ಪಡೆಗೆ ಶಾಕ್ ನೀಡುವಲ್ಲಿ ವೇಗಿ ಬುಮ್ರಾ ಯಶಸ್ವಿಯಾದರು. ಮಿಚೆಲ್ ಮಾರ್ಷ್ ಖಾತೆ ತೆರೆಯುವ ಮುನ್ನವೇ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಚೆನ್ನೈ(ಅ.08): ಭಾರತದ ತ್ರಿವಳಿ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ಚಾಣಾಕ್ಷ ಬೌಲಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡವು 199 ರನ್‌ಗಳ ಸಾಧಾರಣ ಮೊತ್ತಕ್ಕೆ ಸರ್ವಪತನ ಕಂಡಿದೆ. ಈ ಮೂಲಕ ಭಾರತಕ್ಕೆ ಗೆಲ್ಲಲು ಸುಲಭ ಗುರಿ ಸಿಕ್ಕಿದೆ.
ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಆರಂಭದಲ್ಲೇ ಕಾಂಗರೂ ಪಡೆಗೆ ಶಾಕ್ ನೀಡುವಲ್ಲಿ ವೇಗಿ ಬುಮ್ರಾ ಯಶಸ್ವಿಯಾದರು. ಮಿಚೆಲ್ ಮಾರ್ಷ್ ಖಾತೆ ತೆರೆಯುವ ಮುನ್ನವೇ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ವಾರ್ನರ್-ಸ್ಮಿತ್ ಆಸರೆ: ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆಸೀಸ್‌ಗೆ ಎರಡನೇ ವಿಕೆಟ್‌ಗೆ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ 69 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಕೊನೆಗೂ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. ವಾರ್ನರ್ 52 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 41 ರನ್ ಬಾರಿಸಿ ಕುಲ್ದೀಪ್ ಯಾದವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಸ್ಟೀವ್ ಸ್ಮಿತ್ ಅವರ ಬಲಿ ಪಡೆಯುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು. ಸ್ಮಿತ್ ವಿಕೆಟ್ ಒಪ್ಪಿಸುವ ಮುನ್ನ 71 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 46 ರನ್ ಗಳಿಸಿದರು.
ಎಬಿಡಿ, ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅಪರೂಪದ ವಿಶ್ವಕಪ್ ದಾಖಲೆ ಅಳಿಸಿ ಹಾಕಿದ ಡೇವಿಡ್ ವಾರ್ನರ್..!
ಸ್ಪಿನ್ನರ್‌ಗಳ ಕೈಚಳಕ: ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಅದ್ಭುತ ಕೈಚಳಕ ತೋರಿದ ಭಾರತದ ಸ್ಪಿನ್ನರ್‌ಗಳು 6 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದರು. ರವೀಂದ್ರ ಜಡೇಜಾ 10 ಓವರ್ ಬೌಲಿಂಗ್ ಮಾಡಿ 2 ಮೇಡನ್ ಓವರ್ ಸಹಿತ ಕೇವಲ 28 ರನ್ ನೀಡಿ 3 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 42 ರನ್‌ಗಳಿಗೆ 2 ವಿಕೆಟ್ ಪಡೆದರು. ಇನ್ನು ಅಶ್ವಿನ್ 34 ರನ್ ನೀಡಿ ಒಂದು ವಿಕೆಟ್ ಕಬಳಿಸಿದರು.
ಇನ್ನುಳಿದಂತೆ ವೇಗಿ ಬುಮ್ರಾ 35 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಮತ್ತೋರ್ವ ವೇಗಿ ಸಿರಾಜ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 199/10(49.3)
ಸ್ಟೀವ್ ಸ್ಮಿತ್: 46
ಡೇವಿಡ್ ವಾರ್ನರ್ 41
ರವೀಂದ್ರ ಜಡೇಜಾ: 28/3
(* ಆಸ್ಟ್ರೇಲಿಯಾದ ಇನಿಂಗ್ಸ್ ಮುಕ್ತಾಯದ ವೇಳೆಗೆ)