Asianet Suvarna News Asianet Suvarna News

ಹಶ್ಮತುಲ್ಲಾ ಶಾಹಿದಿ ನಾಯಕನ ಆಟ, ಭಾರತಕ್ಕೆ ಸವಾಲಿನ ಗುರಿ ನೀಡಿದ ಆಫ್ಘಾನ್‌..!

ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ 39 ರನ್ ನೀಡಿ 4 ವಿಕೆಟ್ ಪಡೆದರೆ, ಬರ್ತ್‌ಡೇ ಬಾಯ್ ಹಾರ್ದಿಕ್ ಪಾಂಡ್ಯ 2, ಕುಲ್ದೀಪ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು.

World Cup 2023 Jasprit Bumrah 4 Wicket Haul Helps India Restrict Afghanistan To 272 for 8 kvn
Author
First Published Oct 11, 2023, 6:07 PM IST

ನವದೆಹಲಿ(ಅ.11): ಜಸ್ಪ್ರೀತ್ ಬುಮ್ರಾ ಮಾರಕ ದಾಳಿಯ ಹೊರತಾಗಿಯೂ, ನಾಯಕ ಹಶ್ಮತುಲ್ಲಾ ಶಾಹಿದಿ ಹಾಗೂ ಅಜ್ಮತುಲ್ಲಾ ಒಮರ್‌ಝೈ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಆಫ್ಘಾನಿಸ್ತಾನ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 272 ರನ್ ಬಾರಿಸಿದ್ದು, ಭಾರತಕ್ಕೆ ಸವಾಲಿನ ಗುರಿ ನೀಡಿದೆ.

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆಫ್ಘಾನಿಸ್ತಾನ ತಂಡವು ಎಚ್ಚರಿಕೆಯ ಆರಂಭ ಪಡೆಯಿತು. ರೆಹಮನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್‌ ಮೊದಲ ವಿಕೆಟ್‌ಗೆ 32 ರನ್‌ಗಳ ಜತೆಯಾಟವಾಡಿದರು. ಇನ್ನು ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಇಬ್ರಾಹಿಂ ಜದ್ರಾನ್ 22 ರನ್ ಬಾರಿಸಿ ರಾಹುಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಗುರ್ಬಾಜ್ ಅವರಿಗೆ ಹಾರ್ದಿಕ್ ಪಾಂಡ್ಯ ಪೆವಿಲಿಯನ್ ಹಾದಿ ತೋರಿಸಿದರು. ರೆಹಮತ್ ಶಾ 16 ರನ್ ಗಳಿಸಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಶಾಹಿದಿ-ಒಮರ್‌ಝೈ ಜುಗಲ್ಬಂದಿ: ಕೇವಲ 63 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆಫ್ಘಾನಿಸ್ತಾನ ತಂಡಕ್ಕೆ ನಾಯಕ ಹಶ್ಮತುಲ್ಲಾ ಶಾಹಿದಿ ಹಾಗೂ ಅಜ್ಮತುಲ್ಲಾ ಒಮರ್‌ಝೈ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 128 ಎಸೆತಗಳನ್ನು ಎದುರಿಸಿ 121 ರನ್‌ಗಳ ಜತೆಯಾಟ ನಿಭಾಯಿಸಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. 88 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 80 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಶಾಹಿದಿಯನ್ನು ಕುಲ್ದೀಪ್ ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ ಒಮರ್‌ಝೈ 62 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.

ಗಿಲ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು ನಿಜ, ಆದ್ರೆ..? ಇಲ್ಲಿದೆ ಶುಭ್‌ಮನ್ ಹೆಲ್ತ್‌ ಬಗ್ಗೆ ಲೇಟೆಸ್ಟ್‌ ಅಪ್‌ಡೇಟ್

ಇನ್ನುಳಿದಂತೆ ಕೊನೆಯಲ್ಲ ಮೊಹಮ್ಮದ್ ನಬಿ(19), ರಶೀದ್ ಖಾನ್(16) ಹಾಗೂ ಮುಜೀಬ್ ಉರ್ ರೆಹಮಾನ್(10*) ಉಪಯುಕ್ತ ರನ್ ಕಾಣಿಕೆ ನೀಡುವ ಮೂಲಕ ಆಫ್ಘಾನಿಸ್ತಾನ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.

ಇನ್ನುಳಿದಂತೆ ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ 39 ರನ್ ನೀಡಿ 4 ವಿಕೆಟ್ ಪಡೆದರೆ, ಬರ್ತ್‌ಡೇ ಬಾಯ್ ಹಾರ್ದಿಕ್ ಪಾಂಡ್ಯ 2, ಕುಲ್ದೀಪ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು.
 

Follow Us:
Download App:
  • android
  • ios