ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾ ಎದುರು ಗೆದ್ದು ಬೀಗಿದ ಭಾರತಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ ಶಫಾಲಿ ವರ್ಮಾಬಾಂಗ್ಲಾದೇಶ ವಿರುದ್ದ ಭಾರತಕ್ಕೆ 59 ರನ್‌ಗಳ ಜಯ

ಸೈಲೆಟ್‌(ಅ.08): ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ದ ಶಫಾಲಿ ವರ್ಮಾ ಅಮೋಘ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಭಾರತ ತಂಡ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ಯಾಟಿಂಗ್‌ನಲ್ಲಿ ಆಕರ್ಷಕ 55 ರನ್ ಚಚ್ಚಿದ್ದ ಶಫಾಲಿ ವರ್ಮಾ, ಬೌಲಿಂಗ್‌ನಲ್ಲಿ ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಎರಡು ವಿಕೆಟ್ ಉರುಳಿಸಿದರು. ಪರಿಣಾಮ ಬಾಂಗ್ಲಾದೇಶ ವಿರುದ್ದ ಹರ್ಮನ್‌ಪ್ರೀತ್ ಕೌರ್ ಪಡೆ 59 ರನ್‌ಗಳ ಗೆಲುವು ದಾಖಲಿಸಿ, ಬಹುತೇಕ ಸೆಮಿಫೈನಲ್‌ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.

ಕಳೆದ ಪಂದ್ಯದಲ್ಲಿ ಪಾಕಿಸ್ತಾನ ಎದುರು ಆಘಾತಕಾರಿ ಸೋಲು ಕಂಡಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡವು, ಇದೀಗ ಬಾಂಗ್ಲಾದೇಶ ಎದುರು ಗೆಲುವು ಸಾಧಿಸುವ ಮೂಲಕ, ಗೆಲುವಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ 96 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಮಂಧನಾ 47 ರನ್‌ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್‌ ಶಫಾಲಿ ವರ್ಮಾ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಆಕರ್ಷಕ 55 ರನ್ ಚಚ್ಚಿದರು. ಇನ್ನು ಜೆಮಿಯಾ ರೋಡ್ರಿಗಸ್‌ ಅಜೇಯ 35 ರನ್‌ ಗಳಿಸಿದರು. ದೀಪ್ತಿ ಶರ್ಮಾ 5 ಎಸೆತಗಳಲ್ಲಿ 10 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಲು ನೆರವಾದರು. ಅಂತಿಮವಾಗಿ ಭಾರತ ಮಹಿಳಾ ಕ್ರಿಕೆಟ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 159 ರನ್‌ ಕಲೆಹಾಕಿತು.

ಇನ್ನು ಭಾರತ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು ಎಚ್ಚರಿಕೆಯ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ಫರ್ಗಾನ್ ಹಕ್‌ ಹಾಗೂ ಮುರ್ಶಿದಾ ಖತುನ್‌ 45 ರನ್‌ಗಳ ಜತೆಯಾಟ ನಿಭಾಯಿಸಿತು. ಫರ್ಗಾನ್ ಹಕ್‌ (30), ಮುರ್ಶಿದಾ ಖತುನ್‌(21), ನಾಯಕಿ ನಿಗರ್ ಸುಲ್ತಾನಾ(36) ಭಾರತದ ಬೌಲಿಂಗ್ ಪಡೆಯೆದರು ದಿಟ್ಟ ಪ್ರದರ್ಶನ ತೋರಿದರಾದರು, ದೀಪ್ತಿ ಶರ್ಮಾ, ಶಫಾಲಿ ವರ್ಮಾ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡವು 7 ವಿಕೆಟ್ ಕಳೆದುಕೊಂಡು ಕೇವಲ 100 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತ ಪರ ಶಫಾಲಿ ವರ್ಮಾ 10 ರನ್‌ ನೀಡಿ 2 ವಿಕೆಟ್‌ ಪಡೆದರೆ, ದೀಪ್ತಿ ಶರ್ಮಾ 13 ರನ್ ನೀಡಿ 2 ಬಲಿ ಪಡೆದರು. ಇನ್ನು ರೇಣುಕಾ ಸಿಂಗ್ ಹಾಗೂ ಸ್ನೆಹ್ ರಾಣಾ ತಲಾ ಒಂದೊಂದು ವಿಕೆಟ್ ಉರುಳಿಸಿದರು.