ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್‌ಗೆ ಶರಣಾದ ಭಾರತಟಿ20 ಕ್ರಿಕೆಟ್‌ನಲ್ಲಿ 6 ವರ್ಷಗಳ ಬಳಿಕ ಪಾಕ್‌ ಎದುರು ಭಾರತಕ್ಕೆ ಮೊದಲ ಸೋಲುಭಾರತ ವಿರುದ್ದ ಪಾಕಿಸ್ತಾನ ತಂಡಕ್ಕೆ 13 ರನ್‌ಗಳ ರೋಚಕ ಜಯ

ಸೈಲೆಟ್‌(ಅ.07): ಅನುಭವಿ ಬ್ಯಾಟರ್ ನಿದಾ ಧರ್ ಬಾರಿಸಿದ ಸಮಯೋಚಿತ ಅರ್ಧಶತಕ ಹಾಗೂ ನಸ್ರಾ ಸಂಧು ಮಿಂಚಿನ ಬೌಲಿಂಗ್ ನೆರವಿನಿಂದ ಭಾರತ ಎದುರು ಪಾಕಿಸ್ತಾನ ಮಹಿಳಾ ತಂಡವು 13 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನವು ಸೆಮೀಸ್‌ಗೇರುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ.

ಪಾಕಿಸ್ತಾನ ತಂಡವು ನೀಡಿದ್ದ 138 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡವು ಎಚ್ಚರಿಕೆಯ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ಶಬ್ಬಿನೇನಿ ಮೇಘನಾ ಹಾಗೂ ಸ್ಮೃತಿ ಮಂಧನಾ ಜೋಡಿ 23 ರನ್‌ಗಳ ಜತೆಯಾಟ ನಿಭಾಯಿಸಿತು. ಮೇಘನಾ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಜೆಮಿಯಾ ರೋಡ್ರಿಗಸ್‌ 2 ರನ್‌ ಬಾರಿಸಿ ಪೆವಿಲಿಯನ್ ಸೇರಿದರು. ಇನ್ನು ಸ್ಮೃತಿ ಮಂಧನಾ(17) ಹಾಗೂ ಡಯಲನ್ ಹೇಮಲತಾ(20) ಕೆಲಕಾಲ ಪ್ರತಿರೋಧ ತೋರಿದರು. ಇನ್ನು ಆಲ್ರೌಂಡರ್ ಪೂಜಾ ವಸ್ತ್ರಾಕರ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಬಲೆಗೆ ಬಿದ್ದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ(16), ಹರ್ಮನ್‌ಪ್ರೀತ್ ಕೌರ್(12) ಹಾಗೂ ರಿಚಾ ಘೋಷ್(26) ಸ್ಪೋಟಕ ಬ್ಯಾಟಿಂಗ್ ನಡೆಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ತಂಡವು 19.4 ಓವರ್‌ಗಳಲ್ಲಿ 124 ರನ್‌ಗಳಿಗೆ ಸರ್ವಪತನ ಕಂಡಿತು.

Women's Asia Cup: ಬಲಿಷ್ಠ ಭಾರತಕ್ಕಿಂದು ಪಾಕ್‌ ಸವಾಲು..!

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡವು 33 ರನ್‌ ಗಳಿಸುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಲ್ಕನೇ ವಿಕೆಟ್‌ಗೆ ನಾಯಕಿ ಮರೂಪ್ ಹಾಗೂ ನಿದಾ ಧರ್ ಜೋಡಿ 66 ರನ್‌ಗಳ ಜತೆಯಾಟ ನಿಭಾಯಿಸಿತು. ಮರೂಪ್ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಿದಾ ಧರ್ ಅಜೇಯ 56 ರನ್ ಬಾರಿಸುವ ಮೂಲಕ ಪಾಕಿಸ್ತಾನ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ನೆರವಾದರು. 

Scroll to load tweet…

ಭಾರತ ಕ್ರಿಕೆಟ್ ತಂಡದ ಪರ ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ 27 ರನ್‌ ನೀಡಿ 3 ವಿಕೆಟ್ ಪಡೆದರೆ, ಪೂಜಾ ವಸ್ತ್ರಾಕರ್ 2 ಹಾಗೂ ರೇಣುಕಾ ಸಿಂಗ್ ಒಂದು ವಿಕೆಟ್ ಪಡೆದರು.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಈ ಪಂದ್ಯಕ್ಕೂ ಮುನ್ನ ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು. ಇದೀಗ ಪಾಕಿಸ್ತಾನ ವಿರುದ್ದ ಭಾರತ ಸೋಲಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದರೆ, ಪಾಕಿಸ್ತಾನ ತಂಡವು ಎರಡನೇ ಸ್ಥಾನದಲ್ಲಿದೆ. ಲೀಗ್ ಹಂತದ ಅಂತ್ಯದ ವೇಳೆಗೆ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಡಲಿವೆ.