* ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ* ಥಾಯ್ಲೆಂಡ್‌ ವಿರುದ್ದ ಸೆಮಿಫೈನಲ್‌ನಲ್ಲಿ 74 ರನ್‌ಗಳ ಜಯಭೇರಿ* ಮತ್ತೊಮ್ಮೆ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ ಹರ್ಮನ್‌ಪ್ರೀತ್ ಕೌರ್

ಸೈಲೆಟ್‌(ಅ.13): ಶಫಾಲಿ ವರ್ಮಾ ಸ್ಪೋಟಕ ಬ್ಯಾಟಿಂಗ್ ಹಾಗೂ ದೀಪ್ತಿ ಶರ್ಮಾ ಮಿಂಚಿನ ಬೌಲಿಂಗ್ ನೆರವಿನಿಂದ ಮಹಿಳಾ ಏಷ್ಯಾಕಪ್ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ ತಂಡವನ್ನು 74 ರನ್‌ಗಳಿಂದ ಮಣಿಸಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡವು ಉತ್ತಮ ಆರಂಭ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಜೋಡಿ 4.3 ಓವರ್‌ಗಳಲ್ಲಿ 38 ರನ್‌ಗಳ ಜತೆಯಾಟ ನಿಭಾಯಿಸಿತು. ಸ್ಮೃತಿ ಮಂಧನಾ 14 ಎಸೆತಗಳಲ್ಲಿ 3 ಬೌಂಡರಿ ಸಹಿತ 13 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಶಫಾಲಿ ವರ್ಮಾ, 28 ಎಸೆತಗಳಲ್ಲಿ5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 42 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಜೆಮಿಯಾ ರೋಡ್ರಿಗಸ್‌(27) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್(36) ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್(2) ಹೆಚ್ಚು ಕಮಾಲ್‌ ಮಾಡಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಆಲ್ರೌಂಡರ್ ಪೂಜಾ ವಸ್ತ್ರಾಕರ್ ಕೇವಲ 13 ಎಸೆತಗಳಲ್ಲಿ 1 ಆಕರ್ಷಕ ಸಿಕ್ಸರ್ ಸಹಿತ 17 ರನ್‌ ಬಾರಿಸಿ ಅಜೇಯರಾಗುಳಿದರು. ಅಂತಿಮವಾಗಿ ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 148 ರನ್‌ ಬಾರಿಸಿತು.

Scroll to load tweet…

ಇನ್ನು ಭಾರತ ನೀಡಿದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಥಾಯ್ಲೆಂಡ್‌ ತಂಡವು 3ನೇ ಓವರ್‌ನಲ್ಲಿ ಮೊದಲ ವಿಕೆಟ್‌ ಕಳೆದುಕೊಂಡಿತು. ದೀಪ್ತಿ ಶರ್ಮಾ ಆರಂಭದಲ್ಲೇ ಥಾಯ್ಲೆಂಡ್‌ ಬ್ಯಾಟರ್‌ಗಳನ್ನು ಬಲಿ ಪಡೆಯುವ ಮೂಲಕ ಶಾಕ್ ನೀಡಿದರು. ಥಾಯ್ಲೆಂಡ್ ನಾಯಕಿ ನರುಮೊಲ್‌ ಚೈವೈ(21), ನತ್ತಯಾ ಬೋಚ್ಚತ್ತಮ್(21) ಹೊರತುಪಡಿಸಿ ಉಳಿದ್ಯಾವ ಆಟಗಾರ್ತಿಯರು ಭಾರತದ ಎದುರು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

ದಕ್ಷಿಣ ಆಫ್ರಿಕಾ 3 ಪಂದ್ಯಗಳಿಗೆ 3 ಕ್ಯಾಪ್ಟನ್‌; ಭಾರತದ ಪಾಲಾದ ಸರಣಿ

ಭಾರತ ತಂಡದ ಪರ ದೀಪ್ತಿ ಶರ್ಮಾ 7 ರನ್ ನೀಡಿ 3 ವಿಕೆಟ್ ಪಡೆದರೆ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ 10 ರನ್ ನೀಡಿ 2 ವಿಕೆಟ್‌ ಉರುಳಿಸಿದರು. ಇನ್ನು ರೇಣುಕಾ ಶರ್ಮಾ, ಶಫಾಲಿ ವರ್ಮಾ ಹಾಗೂ ಸ್ನೆಹ್ ರಾಣಾ ತಲಾ ಒಂದೊಂದು ವಿಕೆಟ್ ಪಡೆದರು. ಆಲ್ರೌಂಡ್ ಪ್ರದರ್ಶನ ತೋರಿದ ಶಫಾಲಿ ವರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಂದು ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಜಯಶಾಲಿಯಾಗುವ ತಂಡವು, ಅಕ್ಟೋಬರ್ 15ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ವಿರುದ್ದ ಪ್ರಶಸ್ತಿಗಾಗಿ ಕಾದಾಡಲಿದ್ದಾರೆ.