ಪರ್ತ್(ಫೆ.24) ಶೆಫಾಲಿ ವರ್ಮಾ(39) ಹಾಗೂ ಜೆಮಿಮಾ ರೋಡ್ರಿಗಜ್‌(34) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ 6 ವಿಕೆಟ್ ಕಳೆದುಕೊಂಡು 142 ರನ್ ಕಲೆ ಹಾಕಿದೆ. ಈ ಮೂಲಕ ಬಾಂಗ್ಲಾದೇಶಕ್ಕೆ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಮಂಧನಾ ವಿಶ್ರಾಂತಿ ಪಡೆದಿದ್ದರಿಂದ ಭಾರತ ಪರ ತಾನಿಯಾ ಭಾಟಿಯಾ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಭಾಟಿಯಾ ಕೇವಲ 2 ರನ್ ಬಾರಿಸಿ ಸ್ಟಂಪೌಟ್ ಆದರು. ಆದರೆ ಆ ಬಳಿಕ ಜತೆಯಾದ ಶೆಫಾಲಿ ವರ್ಮಾ ಹಾಗೂ ಜೆಮಿಮಾ ರೋಡ್ರಿಗಜ್‌ ಆಕರ್ಷಕ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಮತ್ತೊಮ್ಮೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರಂತೆ ಸ್ಟೋಟಕ ಬ್ಯಾಟಿಂಗ್ ನಡೆಸಿದ 16 ವರ್ಷದ ಶೆಫಾಲಿ ವರ್ಮಾ, ಕೇವಲ 17 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಮನಮೋಹಕ ಸಿಕ್ಸರ್‌ಗಳ ನೆರವಿನಿಂದ 39 ರನ್ ಚಚ್ಚಿದರು. ಇನ್ನು ಜೆಮಿಮಾ ರೋಡ್ರಿಗಜ್‌ 37 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 34 ರನ್ ಬಾರಿಸಿ ರನೌಟ್ ಆದರು.

 
ಕೊನೆಯಲ್ಲಿ ಅಬ್ಬರಿಸಿದ ವೇದಾ: ಇನ್ನು ಕೊನೆಯಲ್ಲಿ ಕನ್ನಡತಿ ವೇದಾ ಕೃಷ್ಣಮೂರ್ತಿ 11 ಎಸೆತಗಳಲ್ಲಿ 4 ಬೌಂಡರಿ ಸಹಿತ 20 ರನ್ ಬಾರಿಸಿ ಅಜೇಯರಾಗುಳಿದರು. ಈ ಮೂಲಕ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು.