ಜಮೈಕಾ(ನ.4): ವೆಸ್ಟ್ ಇಂಡೀಸ್‌ಗೆ 2 ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮರ್ಲಾನ್ ಸಾಮ್ಯುಯಲ್ಸ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮರ್ಲಾನ್ ಸಾಮ್ಯುಯಲ್ಸ್ 2012 ಹಾಗೂ 2016ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಕೆರಿಬಿಯನ್ನರು ಎರಡು ಟಿ20 ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

39 ವರ್ಷದ ಸಾಮ್ಯುಯಲ್ಸ್ 2018ರ ಡಿಸೆಂಬರ್‌ನಲ್ಲಿ ಕಡೆಯಬಾರಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ಸಾಮ್ಯುಯಲ್ಸ್ ನಿವೃತ್ತಿ ವಿಚಾರವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಾನಿ ಗ್ರೇವ್ ಖಚಿತಪಡಿಸಿದ್ದಾರೆ.

ಮರ್ಲಾನ್ ಸಾಮ್ಯುಯಲ್ಸ್ ಮಹತ್ವದ ಫೈನಲ್ ಪಂದ್ಯದಲ್ಲಿ ಅದ್ಭುತ ಆಟವನ್ನು ಆಡುತ್ತಿದ್ದರು. 2012ರಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾ ಎದುರೇ ತಂಡ ಸಂಕಷ್ಟದಲ್ಲಿದ್ದಾಗ 56 ಎಸೆತಗಳಲ್ಲಿ 78 ರನ್ ಬಾರಿಸಿ ತಂಡ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲಲು ನೆರವಾಗಿದ್ದರು. ಇದಾಗಿ 4 ವರ್ಷಗಳ ಬಳಿಕ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ವೇಳೆಯಲ್ಲೂ ಸಾಮ್ಯುಯಲ್ಸ್ ಕಮಾಲ್ ಮಾಡಿದ್ದರು. ಕೋಲ್ಕತದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 65 ಎಸೆತಗದಲ್ಲಿ ಅಜೇಯ 85 ರನ್ ಬಾರಿಸುವ ಮೂಲಕ ವಿಂಡೀಸ್ ಎರಡನೇ ಬಾರಿಗೆ ಕಪ್ ಹಿಡಿದು ಕೇಕೆ ಹಾಕುವಂತೆ ಮಾಡಿದ್ದರು.

ಐಪಿಎಲ್ 2020 ಲೀಗ್‌ ಹಂತದ ಮ್ಯಾಚ್ ಹೇಗಿದ್ವು..?

ವೆಸ್ಟ್ ಇಂಡೀಸ್ ಪರ ಮರ್ಲಾನ್ ಸಾಮ್ಯುಯಲ್ಸ್ 71 ಟೆಸ್ಟ್ 207 ಏಕದಿನ ಹಾಗೂ 67 ಟಿ20 ಪಂದ್ಯಗಳನ್ನಾಡಿ 17  ಶತಕ ಸಹಿತ 11,134 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 152 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ವಿವಾದದ ಕೂಸು ಸಾಮ್ಯುಯಲ್ಸ್: ಒರಟು ಸ್ವಭಾವದ ಮರ್ಲಾನ್ ಸಾಮ್ಯುಯಲ್ಸ್ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಆ ಪೈಕಿ 2008ರಲ್ಲಿ ಐಸಿಸಿಯಿಂದ 2 ವರ್ಷ ನಿಷೇಧದ ಶಿಕ್ಷೆಗೂ ಗುರಿಯಾಗಿದ್ದರು. ಇನ್ನು ಇತ್ತೀಚೆಗಷ್ಟೇ ಬೆನ್ ಸ್ಟೋಕ್ಸ್ ಟೀಕಿಸುವ ಭರದಲ್ಲಿ ಸ್ಟೋಕ್ಸ್ ಪತ್ನಿಯ ಅಶ್ಲೀಲವಾಗಿ ಮಾತನಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.