ದಕ್ಷಿಣ ಆಫ್ರಿಕಾದ ವಿಯಾನ್ ಮುಲ್ಡರ್ ಜಿಂಬಾಬ್ವೆ ವಿರುದ್ಧ ನಾಯಕನಾಗಿ ಮೊದಲ ಟೆಸ್ಟ್‌ನಲ್ಲಿ ಅಜೇಯ ತ್ರಿಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಹಾಶೀಂ ಆಮ್ಲಾ ನಂತರ ತ್ರಿಶತಕ ಬಾರಿಸಿದ ಎರಡನೇ ದಕ್ಷಿಣ ಆಫ್ರಿಕಾ ಆಟಗಾರ ಮುಲ್ಡರ್. ಎರಡನೇ ಅತಿವೇಗದ ತ್ರಿಶತಕ ಸಿಡಿಸಿದ ಕೀರ್ತಿಯೂ ಮುಲ್ಡರ್ ಪಾಲಾಗಿದೆ.
ಬುಲಾವೆಯೋ: ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ಹಂಗಾಮಿ ನಾಯಕ ವಿಯಾನ್ ಮುಲ್ಡರ್ ಜಿಂಬಾಬ್ವೆ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಜೇಯ ತ್ರಿಶತಕ ಸಿಡಿಸುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ನಾಯಕನಾದ ಮೊದಲ ಟೆಸ್ಟ್ ಪಂದ್ಯದಲ್ಲೇ ತ್ರಿಶತಕ ಸಿಡಿಸಿದ ಜಗತ್ತಿನ ಮೊದಲ ಬ್ಯಾಟರ್ ಎನ್ನುವ ಹಿರಿಮೆಗೆ ಆಲ್ರೌಂಡರ್ ವಿಯಾನ್ ಮುಲ್ಡರ್ ಪಾತ್ರರಾಗಿದ್ದಾರೆ. ಇದರ ಜತೆಗೆ ಹಾಶೀಂ ಆಮ್ಲಾ ಬಳಿಕ ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
13 ವರ್ಷಗಳ ಹಿಂದೆ ಅಂದರೆ 2012ರಲ್ಲಿ ಇಂಗ್ಲೆಂಡ್ ಎದುರು ಹಾಶೀಂ ಆಮ್ಲಾ ಆಕರ್ಷಕ 311 ರನ್ ಸಿಡಿಸುವ ಮೂಲಕ ಗಮನ ದಾಖಲೆ ನಿರ್ಮಿಸಿದ್ದರು. ಇದೀಗ ವಿಯಾನ್ ಮುಲ್ಡರ್, ಜಿಂಬಾಬ್ವೆ ಎದುರು 334 ಎಸೆತಗಳನ್ನು ಎದುರಿಸಿ 49 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 367 ರನ್ ಸಿಡಿಸಿ ಮಿಂಚಿದ್ದಾರೆ. ಎರಡನೇ ಟೆಸ್ಟ್ ಪಂದ್ಯಕ್ಕೆ ಕೇಶವ್ ಮಹಾರಾಜ ಅಲಭ್ಯರಾಗಿದ್ದರಿಂದ ವಿಯಾನ್ ಮುಲ್ಡರ್ ಎರಡನೇ ಟೆಸ್ಟ್‌ಗೆ ಹರಿಣಗಳ ಹಂಗಾಮಿ ನಾಯಕರಾಗಿ ನೇಮಕವಾಗಿದ್ದಾರೆ. ಇದೀಗ ಮುಲ್ಡರ್ ನಾಯಕನಾಗಿ ತಾವಾಡಿದ ಮೊದಲ ಟೆಸ್ಟ್‌ನಲ್ಲೇ ತ್ರಿಶತಕ ಸಿಡಿಸಿದ ಕ್ಯಾಪ್ಟನ್ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ದಾಖಲಿಸಿದ ಸಾಧನೆಯೂ ಮುಲ್ಡರ್ ಪಾಲಾಗಿದೆ.
ಎರಡನೇ ಅತಿವೇಗದ ತ್ರಿಶತಕ ಸಿಡಿಸಿದ ಮುಲ್ಡರ್: ಜಿಂಬಾಬ್ವೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ವಿಯಾನ್ ಮುಲ್ಡರ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಎರಡನೇ ಅತಿವೇಗದ ತ್ರಿಶತಕ ಸಿಡಿಸಿ ಮಿಂಚಿದ್ದಾರೆ. ಮುಲ್ಡರ್ 297 ಎಸೆತಗಳನ್ನು ಎದುರಿಸಿ ತ್ರಿಶತಕ ಪೂರೈಸಿದರು. ಇನ್ನು ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ವಿರುದ್ದ 2008ರಲ್ಲಿ ಟೀಂ ಇಂಡಿಯಾ ಸ್ಪೋಟಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಕೇವಲ 278 ಎಸೆತಗಳನ್ನು ಎದುರಿಸಿ ತ್ರಿಶತಕ ಪೂರೈಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ತ್ರಿಶತಕ ಸಾಧನೆ ಇಂದಿಗೂ ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿದೆ.
ಬ್ರಿಯಾನ್ ಲಾರಾ ದಾಖಲೆ ಮತ್ತೆ ಸೇಫ್: ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯನ್ ಲಾರಾ ಅವರ ಹೆಸರಿನಲ್ಲಿದೆ. 2004ರಲ್ಲಿ ಇಂಗ್ಲೆಂಡ್ ಎದುರು ಒಂದೇ ಇನ್ನಿಂಗ್ಸ್‌ನಲ್ಲಿ ಬ್ರಿಯನ್ ಲಾರಾ 400 ರನ್ ಸಿಡಿಸಿದ್ದರು. ಇನ್ನು ವಿಯಾನ್ ಮುಲ್ಡರ್ ಇಂದು, ಲಾರಾ ದಾಖಲೆ ಬ್ರೇಕ್ ಮಾಡುವ ಎಲ್ಲಾ ಅವಕಾಶಗಳಿದ್ದವು. ಹೀಗಿದ್ದೂ ಎರಡನೇ ದಿನದಾಟದ ಲಂಚ್ ಬ್ರೇಕ್ ಬಳಿಕ ದಕ್ಷಿಣ ಆಫ್ರಿಕಾ ನಾಯಕ ಮುಲ್ಡರ್ ಅಚ್ಚರಿ ರೀತಿಯಲ್ಲಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬ್ರಿಯನ್ ಲಾರಾ ಟೆಸ್ಟ್ ರೆಕಾರ್ಡ್ ಬ್ರೇಕ್ ಮಾಡಲು ಮುಲ್ಡರ್‌ಗೆ ಕೇವಲ 34 ರನ್‌ಗಳ ಅಗತ್ಯವಿತ್ತು.
ದಕ್ಷಿಣ ಆಫ್ರಿಕಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಮುಲ್ಡರ್ ಬಾರಿಸಿದ ಅಜೇಯ(367) ತ್ರಿಶತಕ, ಬೆಡಿಂಗ್‌ಹ್ಯಾಮ್(82) ಮತ್ತು ಲೂನ್ ಡ್ರೇ ಪ್ರಿಟೋರಿಯಸ್(78) ಅರ್ಧಶತಕಗಳ ನೆರವಿನಿಂದ 5 ವಿಕೆಟ್ ಕಳೆದುಕೊಂಡು 626 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಜಿಂಬಾಬ್ವೆ ಆರಂಭಿಕ ಆಘಾತ ಅನುಭವಿಸಿದ್ದು, 4 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿದೆ.
ಜಿಂಬಾಬ್ವೆ ಎದುರಿನ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು 328 ರನ್ ಅಂತರದ ಗೆಲುವು ಸಾಧಿಸಿತ್ತು. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು.
