ಟೀಮ್ ಇಂಡಿಯಾದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗದಿರುವ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಮೌನ ಮುರಿದಿದ್ದಾರೆ. ಸದ್ಯ ತಂಡವು ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ಆರಂಭಿಕ ಜೋಡಿಯನ್ನು ಬೆಂಬಲಿಸುತ್ತಿದ್ದು, ವೈಭವ್ ಇನ್ನೂ ಕಾಯಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಂಬೈ: ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್, ಯುವ ಆಟಗಾರ ವೈಭವ್ ಸೂರ್ಯವಂಶಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶಕ್ಕಾಗಿ ಇನ್ನೂ ಕಾಯಬೇಕಾಗುತ್ತದೆ ಎಂದು ಹೇಳಿದ್ದಾರೆ. ಮ್ಯಾನೇಜ್‌ಮೆಂಟ್ ಸದ್ಯ ತಂಡಕ್ಕಾಗಿ ಸ್ಥಿರ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಓಪನಿಂಗ್ ಜೋಡಿಯನ್ನು ಬೆಂಬಲಿಸುತ್ತಿದೆ ಎಂದು ಶ್ರೇಯಸ್ ಸ್ಪಷ್ಟಪಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ಹಂಚಿಕೊಂಡರು.

ರಾಜಸ್ಥಾನ ರಾಯಲ್ಸ್ ಪರ ಐಪಿಎಲ್‌ನಲ್ಲಿ 776 ರನ್ ಸಿಡಿಸಿ ಆರೆಂಜ್ ಕ್ಯಾಪ್ ಗೆದ್ದ 15 ವರ್ಷದ ವೈಭವ್ ಸೂರ್ಯವಂಶಿ ಭಾರತೀಯ ಟಿ20 ತಂಡಕ್ಕೆ ಆಯ್ಕೆಯಾಗಿದ್ದರು. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಕೇವಲ ಎಂಟು ಪಂದ್ಯಗಳಲ್ಲಿ ಮಾತ್ರ ವೈಭವ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಜಿಂಬಾಬ್ವೆ ಪ್ರವಾಸದಲ್ಲಿ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿ ಗೆದ್ದಿದ್ದರೂ, ಗೌತಮ್ ಗಂಭೀರ್ ಕೋಚ್ ಆದ ಬಳಿಕ ಮ್ಯಾನೇಜ್ಮೆಂಟ್ ವೈಭವ್‌ಗೆ ಬಹಳ ಕಡಿಮೆ ಪಂದ್ಯಗಳಲ್ಲಿ ಅವಕಾಶ ನೀಡಿದೆ.

ವೈಭವ್ ಸೂರ್ಯವಂಶಿ ಬಗ್ಗೆ ಮೌನ ಮುರಿದ ಶ್ರೇಯಸ್ ಅಯ್ಯರ್:

ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಲ್ಲಿ ಮ್ಯಾನೇಜ್ಮೆಂಟ್ ವೈಭವ್‌ಗೆ ಒಂದೇ ಒಂದು ಪಂದ್ಯದಲ್ಲೂ ಅವಕಾಶ ನೀಡಿರಲಿಲ್ಲ. ಈ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ನಾಯಕ ಶ್ರೇಯಸ್ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ. "ನಿನಗೆ ಖಂಡಿತಾ ಅವಕಾಶ ಸಿಗುತ್ತದೆ ಎಂದು ನಾನು ವೈಭವ್‌ಗೆ ಪದೇ ಪದೇ ಹೇಳುತ್ತಿರುತ್ತೇನೆ. ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ, ಸ್ಥಿರವಾಗಿ ರನ್ ಗಳಿಸುತ್ತಿರುವ ಇಬ್ಬರು ಅತ್ಯುತ್ತಮ ಓಪನರ್‌ಗಳು ನಮ್ಮಲ್ಲಿದ್ದಾರೆ. ಹಾಗಾಗಿ ಈಗಲೇ ಅವಕಾಶದ ಬಗ್ಗೆ ಹೆಚ್ಚು ಯೋಚಿಸಿ ಒತ್ತಡಕ್ಕೆ ಒಳಗಾಗಬೇಡ ಎಂದು ಅವನಿಗೆ ಹೇಳಿದ್ದೇನೆ. ಒಂದು ಅದ್ಭುತ ಐಪಿಎಲ್ ಸೀಸನ್ ಬಳಿಕ ತಂಡದಿಂದ ಹೊರಗುಳಿಯಬೇಕಾದಾಗ ಅವನ ಮನಸ್ಸಿನ ಭಾವನೆ ನನಗೆ ಅರ್ಥವಾಗುತ್ತದೆ. ಆದರೆ ಕೆಲವೊಮ್ಮೆ ಕಾಯಲೇಬೇಕಾಗುತ್ತದೆ" ಎಂದು ಶ್ರೇಯಸ್ ಅಯ್ಯರ್ ಮೌನ ಮುರಿದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಶ್ರೇಷ್ಠ ಆಟಗಾರನಾಗಿ ಆಯ್ಕೆಯಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ನೀಡುತ್ತಿರುವ ಭರ್ಜರಿ ಆರಂಭವೇ ಸದ್ಯ ಭಾರತ ತಂಡದ ದೊಡ್ಡ ಶಕ್ತಿ. ಹಾಗಾಗಿ ಟೀಂ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಶ್ರೇಯಸ್ ಅಯ್ಯರ್ ಮಾತುಗಳು ಸೂಚಿಸುತ್ತಿವೆ.

ಟಿ20 ಸರಣಿ ಹಂಚಿಕೊಂಡ ಉಭಯ ತಂಡಗಳು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರನ್‌ ಹೊಳೆಯನ್ನು ನಿರೀಕ್ಷಿಸಿದ್ದ ಕ್ರಿಕೆಟ್‌ ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ. ಅವರ ಆಸೆಗೆ ಮಳೆರಾಯ ತಣ್ಣೀರೆರಚಿದ್ದು, ಭಾರತ ಹಾಗೂ ವೆಸ್ಟ್‌ಇಂಡೀಸ್‌ 5ನೇ ಟಿ20 ಪಂದ್ಯ ಫಲಿತಾಂಶ ಕಾಣದೆ ರದ್ದುಗೊಂಡಿತು. ಇದರೊಂದಿಗೆ ಸರಣಿಯಲ್ಲಿ ಉಭಯ ತಂಡಗಳು 2-2 ಅಂತರದಲ್ಲಿ ಸಮಬಲ ಸಾಧಿಸಿ, ಟ್ರೋಫಿ ಹಂಚಿಕೊಂಡವು.

2ನೇ ಸಲ ಬೆಂಗ್ಳೂರಲ್ಲಿ ಭಾರತದ ‘ಫೈನಲ್‌’ ಪಂದ್ಯ ಮಳೆಗೆ ರದ್ದು!

ಭಾರತ-ವಿಂಡೀಸ್‌ 5ನೇ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡು ಸರಣಿ 2-2ರಲ್ಲಿ ಮುಕ್ತಾಯಗೊಂಡಿತ್ತು. ಈ ಪಂದ್ಯ ಎರಡೂ ತಂಡಗಳಿಗೆ ಸರಣಿಯ "ಫೈನಲ್‌" ಎನಿಸಿಕೊಂಡಿತ್ತು. ಭಾರತದ ಟಿ20 ಸರಣಿಯ ನಿರ್ಣಾಯಕ ಪಂದ್ಯ ಬೆಂಗಳೂರಿನಲ್ಲಿ ಮಳೆಗೆ ರದ್ದಾಗಿದ್ದು ಇದು ಮೊದಲೇನಲ್ಲ. 2022ರಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಕೊನೆ ಪಂದ್ಯ ಚಿನ್ನಸ್ವಾಮಿಯಲ್ಲಿ ಮಳೆಯಿಂದ ರದ್ದುಗೊಂಡಿತ್ತು. ಹೀಗಾಗಿ ಉಭಯ ತಂಡಗಳು 2-2 ಅಂತರದಲ್ಲಿ ಟ್ರೋಫಿ ಹಂಚಿಕೊಂಡಿದ್ದವು.

ಈ ವರ್ಷ ಅಭಿಷೇಕ್ 70 ಸಿಕ್ಸರ್‌: ದಾಖಲೆ

ಅಭಿಷೇಕ್‌ ಶರ್ಮಾ ಈ ವರ್ಷ ಅಂತಾರಾಷ್ಟ್ರೀಯ ಟಿ20ಯಲ್ಲಿ 70 ಸಿಕ್ಸರ್ ಸಿಡಿಸಿದ್ದಾರೆ. ಇದು ಕ್ಯಾಲೆಂಡರ್‌ ವರ್ಷದಲ್ಲಿ ಯಾವುದೇ ಆಟಗಾರರ ಪೈಕಿ ಗರಿಷ್ಠ. ಈವರೆಗೂ ವರ್ಷದಲ್ಲಿ ಗರಿಷ್ಠ ಸಿಕ್ಸರ್‌ ದಾಖಲೆ ಸೂರ್ಯಕುಮಾರ್‌ ಹೆಸರಲ್ಲಿತ್ತು. ಅವರು 2022ರಲ್ಲಿ ಭಾರತ ಪರ 68 ಸಿಕ್ಸರ್ ಸಿಡಿಸಿದ್ದರು. ಇನ್ನು, ಈ ವರ್ಷ ಇಶಾನ್‌ ಕಿಶನ್‌ 55, 2025ರಲ್ಲಿ ಅಭಿಷೇಕ್‌ 54 ಹಾಗೂ ಈ ವರ್ಷ ವಿಂಡೀಸ್‌ನ ಹೆಟ್ಮೇಯರ್‌ 48 ಸಿಕ್ಸರ್ ಬಾರಿಸಿದ್ದಾರೆ.