ಒಂದು ಕಾಲದಲ್ಲಿ ಭಾರತದ ಭರವಸೆಯ ಆಟಗಾರನಾಗಿದ್ದ ಹರ್ಮೀತ್ ಸಿಂಗ್ ಈಗ ಅಮೆರಿಕ ತಂಡದ ಪರ ಆಡುತ್ತಿದ್ದಾರೆ. ಮುಂಬೈನ ರೈಲ್ವೇ ಪ್ಲಾಟ್‌ಫಾರ್ಮ್‌ಗೆ ಕಾರು ಚಲಾಯಿಸಿದ್ದು ಸೇರಿದಂತೆ ಹಿಂದಿನ ವಿವಾದಗಳ ನಡುವೆಯೂ, ಅವರು ಅಮೆರಿಕನ್ ಕ್ರಿಕೆಟ್‌ನಲ್ಲಿ ಯಶಸ್ಸು ಕಂಡಿದ್ದಾರೆ.

ಮುಂಬೈ: ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್‌ನ ಭರವಸೆಯ ಆಟಗಾರನಾಗಿದ್ದ ಹರ್ಮೀತ್ ಸಿಂಗ್, ಈಗ ಅಮೆರಿಕ ತಂಡದ ಪರ ಆಡುತ್ತಿದ್ದಾರೆ. ಇತ್ತೀಚೆಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹರ್ಮೀತ್, ಯುಎಸ್‌ಎ ತಂಡದಲ್ಲಿದ್ದರು. ಈ ಪಂದ್ಯದಲ್ಲಿ 4 ಓವರ್‌ಗಳಲ್ಲಿ ಅವರು ಕೇವಲ 26 ರನ್ ನೀಡಿ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಅವರ ಪ್ರಮುಖ ವಿಕೆಟ್‌ಗಳನ್ನು ಪಡೆದರು. ಅಂದಹಾಗೆ ಹರ್ಮೀತ್ ಸಿಂಗ್‌ಗೆ ಮುಂಬೈನ ವಾಂಖೇಡೆ ಮೈದಾನ ಒಂದು ರೀತಿಯ ತವರಿನ ಮೈದಾನ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

ಮುಂಬೈನಲ್ಲಿ ಹುಟ್ಟಿ ಬೆಳೆದ ಹರ್ಮೀತ್ ಸಿಂಗ್

ಮುಂಬೈನಲ್ಲಿ ಹುಟ್ಟಿ ಬೆಳೆದ ಹರ್ಮೀತ್, 2012ರಲ್ಲಿ ಭಾರತ ಅಂಡರ್-19 ವಿಶ್ವಕಪ್ ಗೆದ್ದ ತಂಡದ ಪ್ರಮುಖ ಸದಸ್ಯರಾಗಿದ್ದರು. ನಂತರ ಐಪಿಎಲ್‌ನಲ್ಲೂ ಆಡಿದ್ದ ಅವರು, ತಮ್ಮ ವೃತ್ತಿಜೀವನದಲ್ಲಿ ಎದುರಾದ ಸಂಕಷ್ಟದಿಂದ ಹೊರಬರಲು ಅಮೆರಿಕಕ್ಕೆ ವಲಸೆ ಹೋದರು. 2024ರಲ್ಲಿ ಯುಎಸ್‌ಎ ತಂಡಕ್ಕೆ ಪಾದಾರ್ಪಣೆ ಮಾಡಿದ ಅವರು, ಈಗ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಇಲ್ಲಿಯವರೆಗೆ ಯುಎಸ್‌ಎ ಪರ 22 ಏಕದಿನ ಮತ್ತು 25 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ನಡುವೆ, ಹರ್ಮೀತ್‌ಗೆ ಸಂಬಂಧಿಸಿದ ಒಂದು ವಿವಾದಾತ್ಮಕ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡುತ್ತಿದೆ.

ಮುಂಬೈ ಪೊಲೀಸರಿಂದ ಅರೆಸ್ಟ್ ಆಗಿದ್ದ ಹರ್ಮೀತ್

ವಾಂಖೆಡೆಯಲ್ಲಿ ಹರ್ಮೀತ್ ಬೌಲಿಂಗ್ ಮಾಡುವುದನ್ನು ನೋಡಿದ ಅಭಿಮಾನಿಗಳು, ಹಳೆಯ ವಿವಾದವೊಂದನ್ನು ಕೆದಕಿದ್ದಾರೆ. 2017ರಲ್ಲಿ ಮುಂಬೈನ ಅಂಧೇರಿ ರೈಲ್ವೇ ಸ್ಟೇಷನ್ ಪ್ಲಾಟ್‌ಫಾರ್ಮ್‌ಗೆ ಹರ್ಮೀತ್ ತಮ್ಮ ಕಾರನ್ನು ಓಡಿಸಿಕೊಂಡು ಹೋಗಿದ್ದು ದೊಡ್ಡ ಸುದ್ದಿಯಾಗಿತ್ತು. ಬೆಳಗ್ಗೆ ಜನರಿಂದ ತುಂಬಿದ್ದ ಪ್ಲಾಟ್‌ಫಾರ್ಮ್‌ಗೆ ಕಾರ್ ನುಗ್ಗಿಸಿದ್ದಕ್ಕಾಗಿ ಪೊಲೀಸರು ಅವರನ್ನು ಬಂಧಿಸಿದ್ದರು. ರೈಲ್ವೇ ಹಳಿಗಳ ಸಮೀಪವೇ ಕಾರು ನಿಂತಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿತ್ತು.

Scroll to load tweet…

ಅಷ್ಟೇ ಅಲ್ಲ, 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲೂ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ, ನಂತರ ಅವರನ್ನು ದೋಷಮುಕ್ತಗೊಳಿಸಲಾಗಿತ್ತು. ಈ ಎಲ್ಲಾ ವಿವಾದಗಳನ್ನು ಮೆಟ್ಟಿನಿಂತು ಹರ್ಮೀತ್, ಇಂದು ಅಮೆರಿಕನ್ ಕ್ರಿಕೆಟ್‌ನಲ್ಲಿ ಸೂಪರ್‌ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

Scroll to load tweet…

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಭಾರತ:

ಹಾಲಿ ಚಾಂಪಿಯನ್‌ ಭಾರತ, 2026ರ ಐಸಿಸಿ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಸೋಲುವ ಭೀತಿಯಿಂದ ಪಾರಾಗಿದೆ. ಯುಎಸ್‌ಎ ಎದುರಿನ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ 29 ರನ್ ಅಂತರದ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮುಂಬೈನ ವಾಂಖೇಡೆ ಮೈದಾನದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಭಾರತ 77 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಭಿಷೇಕ್‌ 0, ಕಿಶನ್‌ 20, ದುಬೆ 0, ರಿಂಕು 6, ಹಾರ್ದಿಕ್‌ 5 ನಿರಾಸೆ ಮೂಡಿಸಿದರು. ತಿಲಕ್‌ 25 ರನ್‌ ಕೊಡುಗೆ ನೀಡಿದರೂ, ನಾಯಕನ ಜೊತೆ ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. 7ನೇ ವಿಕೆಟ್‌ ಪತನಗೊಂಡಾಗ ತಂಡದ ಮೊತ್ತ 118 ರನ್‌. ಆದರೆ, ಸೂರ್ಯಕುಮಾರ್‌ ತಮ್ಮ ಅನುಭವ ಬಳಸಿ 49 ಎಸೆತದಲ್ಲಿ 10 ಬೌಂಡರಿ, 4 ಸಿಕ್ಸರ್‌ನೊಂದಿಗೆ ಔಟಾಗದೆ 84 ರನ್‌ ಸಿಡಿಸಿ ತಂಡವನ್ನು ಸುರಕ್ಷಿತ ಮೊತ್ತ ತಲುಪಿಸಿದರು. ಭಾರತ 20 ಓವರಲ್ಲಿ 9 ವಿಕೆಟ್‌ಗೆ 161 ರನ್‌ ಕಲೆಹಾಕಿತು.

ಇನ್ನು ಸವಾಲಿನ ಗುರಿ ಬೆನ್ನತ್ತಿದ ಯುಎಸ್‌ಎ ಅರ್ಶದೀಪ್ ಸಿಂಗ್ ಹಾಗೂ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಯುಎಸ್‌ಎ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಇನ್ನು ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್ ತಲಾ ಎರಡು ಹಾಗೂ ವರುಣ್ ಚಕ್ರವರ್ತಿ ಒಂದು ವಿಕೆಟ್ ಪಡೆದರು.