ಮೇಘಾಲಯದ ಕ್ರಿಕೆಟಿಗ ಆಕಾಶ್ ಕುಮಾರ್ ಚೌಧರಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ ಎಂಟು ಸಿಕ್ಸರ್‌ಗಳನ್ನು ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ, ಅವರು ಕೇವಲ 11 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕವನ್ನೂ ಗಳಿಸಿದರು. ಅಷ್ಟಕ್ಕೂ ಯಾರು ಈ ಆಕಾಶ್ ಕುಮಾರ್ ಚೌಧರಿ?
ಸೂರತ್: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ ಎಂಟು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಮೇಘಾಲಯದ ಆಕಾಶ್ ಕುಮಾರ್ ಚೌಧರಿ ಪಾತ್ರರಾಗಿದ್ದಾರೆ. ಅರುಣಾಚಲ ಪ್ರದೇಶದ ವಿರುದ್ಧದ ಪ್ಲೇಟ್ ಗ್ರೂಪ್ ಪಂದ್ಯದಲ್ಲಿ ಆಕಾಶ್ ಈ ಅಪರೂಪದ ವಿಶ್ವದಾಖಲೆ ಮಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕವನ್ನೂ ಆಕಾಶ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಕೇವಲ 11 ಎಸೆತಗಳಲ್ಲಿ ಆಕಾಶ್ ಅರ್ಧಶತಕ ಪೂರೈಸಿದರು. ಸೂರತ್‌ನಲ್ಲಿ ನಡೆದ ಪಂದ್ಯದಲ್ಲಿ 14 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗಿ ಉಳಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಮೂರನೇ ಆಟಗಾರ ಎನ್ನುವ ಹೆಗ್ಗಳಿಕೆಗೂ ಆಕಾಶ್ ಕುಮಾರ್ ಚೌಧರಿ ಪಾತ್ರರಾಗಿದ್ದಾರೆ.
ಪಂದ್ಯದ ಎರಡನೇ ದಿನ ಆಕಾಶ್ ಈ ಸಾಧನೆ ಮಾಡಿದರು. ಎಡಗೈ ಸ್ಪಿನ್ನರ್ ಲಿಮರ್ ಡಾಬಿ ಅವರ ಓವರ್‌ನ ಎಲ್ಲಾ ಆರು ಎಸೆತಗಳನ್ನು ಆಕಾಶ್ ಸಿಕ್ಸರ್‌ಗೆ ಅಟ್ಟಿದ್ದರು. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ ಭಾರತದ ಎರಡನೇ ಹಾಗೂ ವಿಶ್ವದ ಮೂರನೇ ಬ್ಯಾಟರ್ ಎನ್ನುವ ಹಿರಿಮೆಗೆ ಆಕಾಶ್ ಪಾತ್ರರಾಗಿದ್ದಾರೆ. ಈ ಮೊದಲು ಭಾರತದ ರವಿಶಾಸ್ತ್ರಿ, ವೆಸ್ಟ್ ಇಂಡೀಸ್‌ನ ಗ್ಯಾರಿ ಸೋಬರ್ಸ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರು. ಹೌದು, 1984-85ರಲ್ಲಿ ಬಾಂಬೆ ಪರ ರವಿಶಾಸ್ತ್ರಿ ಬರೋಡಾ ವಿರುದ್ದ ರಣಜಿ ಟ್ರೋಫಿ ಟೂರ್ನಿಯಲ್ಲಿ ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದರು. ಇನ್ನು ವೆಸ್ಟ್ ಇಂಡೀಸ್‌ನ ಗ್ಯಾರಿ ಸೋಬರ್ಸ್ 1968ರಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಪರ ಒಂದೇ ಓವರ್‌ನಲ್ಲಿ ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದರು.
ಆಕಾಶ್ ಚೌಧರಿ ಬಾರಿಸಿದ 8 ಸಿಕ್ಸರ್‌ಗಳು ಹೀಗಿವೆ ನೋಡಿ:
ಮೇಘಾಲಯ ಪರ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಆಕಾಶ್, ಒಂದು ಡಾಟ್ ಬಾಲ್ ಮತ್ತು ಎರಡು ಸಿಂಗಲ್ಸ್‌ನೊಂದಿಗೆ ಪ್ರಾರಂಭಿಸಿ, ನಂತರದ ಎಂಟು ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಬಾರಿಸಿದರು. ಇತಿಹಾಸದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಸತತ ಆರು ಸಿಕ್ಸರ್‌ಗಳಿಗಿಂತ ಹೆಚ್ಚು ಬಾರಿಸಿಲ್ಲ. 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಆಕಾಶ್ ಹೊಸ ವಿಶ್ವದಾಖಲೆ ನಿರ್ಮಿಸಿದರು. ಈ ಮೂಲಕ ಇಂಗ್ಲೆಂಡ್‌ನ ಲೀಚೆಸ್ಟರ್‌ಶೈರ್ ಬ್ಯಾಟರ್ ವೇಯ್ನ್ ವೈಟ್ ಅವರ ಹೆಸರಿನಲ್ಲಿದ್ದ ಅತಿವೇಗದ ಅರ್ಧಶತಕ(12)ದ ವಿಶ್ವದಾಖಲೆಯನ್ನು ಆಕಾಶ್ ಬ್ರೇಕ್ ಮಾಡಿದರು.
ಅತಿ ವೇಗದ ಅರ್ಧಶತಕದ ದಾಖಲೆಯನ್ನು ಆಕಾಶ್ ತಮ್ಮ ಹೆಸರಿಗೆ ಬರೆಸಿಕೊಂಡರೂ, ಸಮಯದ ಆಧಾರದಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಎಂಟು ನಿಮಿಷಗಳಲ್ಲಿ ಈ ಸಾಧನೆ ಮಾಡಿದ ಇನ್ಮನ್ ಮೊದಲ ಸ್ಥಾನದಲ್ಲಿದ್ದಾರೆ. ಆಕಾಶ್ ಒಂಬತ್ತು ನಿಮಿಷಗಳನ್ನು ತೆಗೆದುಕೊಂಡರು.
ಆಕಾಶ್ ಕುಮಾರ್ ಚೌಧರಿ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಮೇಘಾಲಯ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 628 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಾದ ಬಳಿಕ ಇನ್ನಿಂಗ್ಸ್ ಆರಂಭಿಸಿದ ಅರುಣಾಚಲ ಪ್ರದೇಶ ತಂಡವು ಕೇವಲ 73 ರನ್‌ಗಳಿಗೆ ಸರ್ವಪತನ ಕಂಡಿತು. ಆಕಾಶ್ ಕುಮಾರ್ ಚೌಧರಿ ಒಂದು ವಿಕೆಟ್ ಕಬಳಿಸಿದರು.
ಯಾರು ಈ ಆಕಾಶ್ ಕುಮಾರ್ ಚೌಧರಿ?
ವೇಗದ ಬೌಲರ್ ಆಗಿ ಗುರುತಿಸಿಕೊಂಡಿರುವ 25 ವರ್ಷದ ಆಕಾಶ್ ಕುಮಾರ್ ಚೌಧರಿ, ಇದುವರೆಗೂ 30 ಪ್ರಥಮ ದರ್ಜೆ ಪಂದ್ಯಗಳನ್ನಾಡಿ ಎರಡು ಅರ್ಧಶತಕ ಸಹಿತ 14.37ರ ಬ್ಯಾಟಿಂಗ್ ಸರಾಸರಿಯಲ್ಲಿ 503 ರನ್ ಗಳಿಸಿದ್ದಾರೆ. ಇದಷ್ಟೇ ಅಲ್ಲದೇ ಆಕಾಶ್ ಕುಮಾರ್ ಚೌಧರಿ, 28 ಲಿಸ್ಟ್ 'ಎ' ಹಾಗೂ 30 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಹಿಂದಿನ ಬಿಹಾರ ಎದುರಿನ ಪಂದ್ಯದಲ್ಲಿ ಆಕಾಶ್ ಕುಮಾರ್ ಚೌಧರಿ, ಸತತ 4 ಸಿಕ್ಸರ್ ಸಹಿತ ಅಜೇಯ 60 ರನ್ ಸಿಡಿಸಿ ಮಿಂಚಿದ್ದರು.
ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಕಾಶ್ ಕುಮಾರ್ ಚೌಧರಿ ಇದವರೆಗೂ 87 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದಷ್ಟೇ ಅಲ್ಲದೇ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 37 ಹಾಗೂ ಟಿ20ಯಲ್ಲಿ 28 ವಿಕೆಟ್ ಕಬಳಿಸಿದ್ದಾರೆ.
