* ಕಾಮನ್‌ವೆಲ್ತ್ ಗೇಮ್ಸ್ ಸಾಧಕರ ಜತೆ ಪ್ರಧಾನಿ ಮೋದಿ ಮಾತುಕತೆ* ತಮ್ಮ ಅಧಿಕೃತ ನಿವಾಸದಲ್ಲಿ ಕಾಮನ್‌ವೆಲ್ತ್ ಸಾಧಕರನ್ನು ಭೇಟಿ ಮಾಡಿದ ಮೋದಿ* ಮೋದಿ ಭೇಟಿಯ ಬಗ್ಗೆ ಸಂತಸ ಹಂಚಿಕೊಂಡ ಹರ್ಮನ್‌ಪ್ರೀತ್ ಕೌರ್

ನವದೆಹಲಿ(ಆ.14): ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಪ್ರಧಾನಿ ನರೇಂದ್ರ ಮೋದಿಯವರ ಜತೆ ಮಾತನಾಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸ್ಪೂರ್ತಿಯ ಚಿಲುಮೆಯಾಗಿದ್ದು, ಅವರು ಕ್ರೀಡೆಯಲ್ಲಿ ಕಷ್ಟಪಟ್ಟು ಮೇಲೆ ಬಂದವರನ್ನು ಗುರುತಿಸುವ ರೀತಿ ಅನನ್ಯವಾದದ್ದು ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ಶನಿವಾರ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್‌ಗೆ ಅವಕಾಶ ಕಲ್ಪಿಸಲಾಗಿತ್ತು. ಚೊಚ್ಚಲ ಪ್ರಯತ್ನದಲ್ಲೇ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿತ್ತು. ಭಾರತ ಮಹಿಳಾ ಕ್ರಿಕೆಟ್ ತಂಡ ಕೂಡಾ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಭೇಟಿ ನೀಡಿತ್ತು. ಇದರ ಬೆನ್ನಲ್ಲೇ ಎಎನ್‌ಐ ಸುದ್ದಿಸಂಸ್ಥೆ ಜತೆ ಹರ್ಮನ್‌ಪ್ರೀತ್ ಕೌರ್, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಂದ ಸ್ಪೂರ್ತಿಯನ್ನು ಪಡೆದುಕೊಂಡಿದ್ದು ಸಾಕಷ್ಟು ಮಹತ್ವದ್ದೆನಿಸಿದೆ. ಪ್ರಧಾನಿ ನಮ್ಮ ಜೊತೆ ಮಾತನಾಡುತ್ತಿದ್ದಾಗ, ಇಡೀ ದೇಶವೇ ನಮ್ಮನ್ನು ಬೆಂಬಲಿಸುತ್ತಿದೆ ಎನ್ನುವಂತಹ ಭಾವನೆ ಉಂಟಾಗುತ್ತಿತ್ತು ಹಾಗೂ ಪ್ರತಿಯೊಬ್ಬರು ನಮ್ಮ ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು. ಇದು ನಮ್ಮ ಕ್ರಿಕೆಟ್ ತಂಡದ ದೊಡ್ಡ ಸಾಧನೆಯಾಗಿದೆ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.

Scroll to load tweet…

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳ ಜತೆಗೆ ಸಂಬಂಧಪಟ್ಟ ಕೋಚ್‌ಗಳು, ಸಿಬ್ಬಂದಿಗಳು ಹಾಗೂ ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ಹಾಜರಿದ್ದರು. 

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತವು 22 ಚಿನ್ನ, 15 ಬೆಳ್ಳಿ ಹಾಗೂ 23 ಕಂಚಿನ ಪದಕಗಳ ಸಹಿತ ಒಟ್ಟು 61 ಪದಕಗಳೊಂದಿಗೆ ಒಟ್ಟಾರೆ ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಈ ಮೂಲಕ ಕಾಮನ್‌ವೆಲ್ತ್‌ ಗೇಮ್ಸ್‌ ಇತಿಹಾಸದಲ್ಲಿ ಭಾರತ 5ನೇ ಅತ್ಯುತ್ತಮ ಪ್ರದರ್ಶನ ತೋರಿದೆ. 2010ರಲ್ಲಿ ಭಾರತದಲ್ಲೇ(ಡೆಲ್ಲಿಯಲ್ಲಿ) ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ 101 ಪದಕಗಳನ್ನು ಗೆದ್ದು ಶ್ರೇಷ್ಠ ಪ್ರದರ್ಶನ ತೋರಿತ್ತು.

ನಿಮ್ಮೆಲ್ಲರ ಪರಿಶ್ರಮದಿಂದ ಸ್ಪೂರ್ತಿದಾಯಕ ಸಾಧನೆ ಮಾಡಿದ್ದೀರ: ಕಾಮನ್‌ವೆಲ್ತ್ ಸಾಧಕರಿಗೆ ಮೋದಿ ಶಹಬ್ಬಾಶ್

ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಶೂಟಿಂಗ್‌ ಸ್ಪರ್ಧೆಗೆ ಅವಕಾಶ ನೀಡಿರಲಿಲ್ಲ. ಹೀಗಿದ್ದೂ ಭಾರತ 61 ಪದಕಗಳನ್ನು ಗೆಲ್ಲುವ ಮೂಲಕ ಭರ್ಜರಿ ಪ್ರದರ್ಶನವನ್ನೇ ತೋರಿದೆ. ಯಾಕೆಂದರೇ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತೀಯ ಶೂಟರ್‌ಗಳು ಇದುವರೆಗೂ 135 ಪದಕಗಳನ್ನು ಜಯಿಸಿದ್ದರು. ಆದರೆ ಈ ಬಾರಿ ಶೂಟಿಂಗ್‌ಗೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಅವಕಾಶವಿರಲಿಲ್ಲ. ಹೀಗಿದ್ದೂ ಭಾರತ ಕಾಮನ್‌ವೆಲ್ತ್‌ ಕೂಟದಲ್ಲಿ ಪದಕ ಗೆಲ್ಲುವ ರೇಸ್‌ನಲ್ಲಿ ಹಿಂದೆ ಬಿದ್ದಿಲ್ಲ. 2018ರ ಗೋಲ್ಡ್‌ಕೋಸ್ಟ್‌ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ 7 ಚಿನ್ನ ಸೇರಿ 16 ಪದಕಗಳನ್ನು ಭಾರತೀಯ ಶೂಟರ್‌ಗಳ ಕೊಳ್ಳೆ ಹೊಡೆದಿದ್ದರು.