ಆಸ್ಟ್ರೇಲಿಯಾ ಎದುರು ಎರಡನೇ ಟೆಸ್ಟ್‌ನಲ್ಲಿ ಸೋಲುಂಡ ದಕ್ಷಿಣ ಆಫ್ರಿಕಾದಕ್ಷಿಣ ಆಫ್ರಿಕಾ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಕನಸು ಜೀವಂತಭಾರತ-ಆಸೀಸ್‌ ನಡುವೆ ಫೆಬ್ರವರಿ-ಮಾರ್ಚ್‌ನಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ಜರುಗಲಿದೆ

ಮೆಲ್ಬರ್ನ್‌(ಡಿ.30): ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನ ಮೂಲಕ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಆಸ್ಪ್ರೇಲಿಯಾ ಫೈನಲ್‌ ಆಡುವುದು ಬಹುತೇಕ ಖಚಿತಗೊಂಡಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಸೋಲಿನಿಂದ ಭಾರತಕ್ಕೆ ಲಾಭವಾಗಿದ್ದು, ಫೈನಲ್‌ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗಿದೆ. ಸದ್ಯ ಎಲ್ಲರ ಕಣ್ಣು ಭಾರತ-ಆಸೀಸ್‌ ನಡುವೆ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಟೆಸ್ಟ್‌ ಸರಣಿ ಮೇಲೆ ನೆಟ್ಟಿದೆ.

ಭಾರತದ ಹಾದಿ ಹೇಗೆ?

1. ಭಾರತ ಸದ್ಯ ಶೇ.58.93 ಗೆಲುವಿನ ಪ್ರತಿಶತ ಹೊಂದಿದ್ದು, ಆಸೀಸ್‌ ವಿರುದ್ಧ ತವರಿನ ಸರಣಿಯಲ್ಲಿ 4-0, 3-1 ಅಥವಾ 3-0 ಅಂತರದಲ್ಲಿ ಗೆಲ್ಲಬೇಕು. ಹೀಗಾದರೆ ಭಾರತ ಫೈನಲ್‌ಗೇರುವುದು ಖಚಿತ.

2. ಆಸೀಸ್‌ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆ ಟೆಸ್ಟ್‌ನಲ್ಲೂ ಗೆದ್ದರೆ, ದಕ್ಷಿಣ ಆಫ್ರಿಕಾ ಬಹುತೇಕ ಹೊರಬೀಳಲಿದೆ. ಒಂದು ವೇಳೆ ಭಾರತ 2-0 ಅಥವಾ 1-0ಯಿಂದ ಆಸೀಸ್‌ ವಿರುದ್ಧ ಗೆದ್ದರೆ, ನ್ಯೂಜಿಲೆಂಡ್‌ ವಿರುದ್ಧ ಶ್ರೀಲಂಕಾ 2-0ಯಲ್ಲಿ ಗೆಲ್ಲಬಾರದು.

3. ಭಾರತ-ಅಸೀಸ್‌ ಸರಣಿ 2-2, 1-1 ಡ್ರಾಗೊಂಡರೂ ಭಾರತದ ಫೈನಲ್‌ ಭವಿಷ್ಯ ಕಿವೀಸ್‌-ಲಂಕಾ ಸರಣಿಯಲ್ಲಿ ನಿರ್ಧಾರವಾಗಲಿದೆ. ದಕ್ಷಿಣ ಆಫ್ರಿಕಾ ಬಾಕಿ ಇರುವ 3 ಟೆಸ್ಟ್‌ಗಳಲ್ಲಿ ಗೆದ್ದರೆ ಆ ತಂಡಕ್ಕೂ ಅವಕಾಶವಿರಲಿದೆ. ದಕ್ಷಿಣ ಆಫ್ರಿಕಾ, ಆಸೀಸ್‌ ವಿರುದ್ಧ 1, ತವರಿನಲ್ಲಿ ವಿಂಡೀಸ್‌ ವಿರುದ್ಧ 2 ಟೆಸ್ಟ್‌ ಆಡಲಿದೆ.

4. ಆಸೀಸ್‌ ವಿರುದ್ಧ 0-4ರಿಂದ ಸೋತರೆ ಭಾರತ ತಂಡ ಇಂಗ್ಲೆಂಡ್‌ಗಿಂತಲೂ ಕೆಳಕ್ಕೆ ಕುಸಿಯಲಿದ್ದು, ಫೈನಲ್‌ಗೇರುವ ಅವಕಾಶ ಕಳೆದುಕೊಳ್ಳಲಿದೆ. ಆಗ ಶ್ರೀಲಂಕಾ ಅಥವಾ ದಕ್ಷಿಣ ಆಫ್ರಿಕಾಕ್ಕೆ ಫೈನಲ್‌ಗೇರುವ ಅವಕಾಶ ಸಿಗಲಿದೆ.

ಬಿಸಿಸಿಐ ಆಯ್ಕೆ ಮುಖ್ಯಸ್ಥ ಹುದ್ದೆಗೆ ರಾಜ್ಯದ ವೆಂಕಿ?

ನವದೆಹಲಿ: ಬಿಸಿಸಿಐ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ಭಾರತದ ಮಾಜಿ ವೇಗದ ಬೌಲರ್‌, ಕರ್ನಾಟಕದ ವೆಂಕಟೇಶ್‌ ಪ್ರಸಾದ್‌ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮುಂದಿನ ವಾರ ನೂತನ ಸಮಿತಿ ನೇಮಕಗೊಳ್ಳುವ ನಿರೀಕ್ಷೆಯಲ್ಲಿದ್ದು, ಹಾಲಿ ಅಧ್ಯಕ್ಷ ಚೇತನ್‌ ಶರ್ಮಾ ಸದಸ್ಯರಾಗಿ ಮುಂದುವರಿಯುವ ಸಾಧ್ಯತೆ ಇದೆ. 

ಭಾರತ ಪರ 33 ಟೆಸ್ಟ್‌, 161 ಏಕದಿನ ಪಂದ್ಯಗಳನ್ನಾಡಿರುವ ಪ್ರಸಾದ್‌, ದಕ್ಷಿಣ ವಲಯ ಪ್ರತಿನಿಧಿಯಾಗಿ ಅರ್ಜಿ ಸಲ್ಲಿಸಿದ್ದು, ಹೆಚ್ಚು ಟೆಸ್ಟ್‌ ಪಂದ್ಯಗಳನ್ನಾಡಿದ ಆಧಾರದ ಮೇಲೆ ಚೇತನ್‌ರನ್ನು ಹಿಂದಿಕ್ಕಿ ಮುಖ್ಯಸ್ಥ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಕೇಂದ್ರ ವಲಯದ ಹರ್ವಿಂದರ್‌ ಸಿಂಗ್‌, ಪೂರ್ವ ವಲಯದ ಶಿವಸುಂದರ್‌ ದಾಸ್‌, ಪಶ್ವಿಮ ವಲಯದ ಸಲೀಲ್‌ ಅಂಕೋಲಾ ಕೂಡಾ ರೇಸ್‌ನಲ್ಲಿದ್ದಾರೆ ಎಂದು ವರದಿಯಾಗಿದೆ.

ವರ್ಷದ ಟಿ20 ಆಟಗಾರ ಪ್ರಶಸ್ತಿ ರೇಸಲ್ಲಿ ಸೂರ್ಯಕುಮಾರ್ ಯಾದವ್

ದುಬೈ: ಭಾರತದ ತಾರಾ ಬ್ಯಾಟರ್‌ಗಳಾದ ಸೂರ‍್ಯಕುಮಾರ್‌ ಯಾದವ್‌, ಸ್ಮೃತಿ ಮಂಧನಾ ಗುರುವಾರ ಐಸಿಸಿ ಟಿ20 ವರ್ಷದ ಕ್ರಿಕೆಟಿಗರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ವಿಶ್ವ ನಂ.1 ಸೂರ‍್ಯ 2022ರಲ್ಲಿ ಅಭೂತಪೂರ್ವ ಪ್ರದರ್ಶನ ತೋರಿದ್ದು, 187.43ರ ಸ್ಟ್ರೈಕ್‌ರೇಟ್‌ನಲ್ಲಿ 1164 ರನ್‌ ಕಲೆ ಹಾಕಿದ್ದಾರೆ. 

Aus vs SA ದ್ವಿಶತಕ ಸಂಭ್ರಮಿಸುವಾಗ ಗಾಯಗೊಂಡ ಡೇವಿಡ್ ವಾರ್ನರ್‌!

ಅವರ ಜೊತೆ ಪುರುಷರ ಪ್ರಶಸ್ತಿ ರೇಸ್‌ನಲ್ಲಿ ಪಾಕಿಸ್ತಾನದ ಮೊಹಮದ್‌ ರಿಜ್ವಾನ್‌, ಜಿಂಬಾಬ್ವೆಯ ಸಿಕಂದರ್‌ ರಾಜಾ, ಇಂಗ್ಲೆಂಡ್‌ನ ಸ್ಯಾಮ್‌ ಕರ್ರನ್‌ ಕೂಡಾ ಪೈಪೋಟಿ ನಡೆಸಲಿದ್ದಾರೆ. ಇನ್ನು, ಕಳೆದ ವರ್ಷ ಟಿ20 ಮಹಿಳಾ ಆಟಗಾರ್ತಿ ಪ್ರಶಸ್ತಿ ಗೆದ್ದಿದ್ದ ಮಂಧನಾ ಸತತ 2ನೇ ಬಾರಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಪಾಕಿಸ್ತಾನದ ನಿದಾ ದಾರ್‌, ನ್ಯೂಜಿಲೆಂಡ್‌ನ ಸೋಫೀ ಡಿವೈನ್‌, ಆಸ್ಪ್ರೇಲಿಯಾ ತಹಿಲಾ ಮೆಗ್ರಾಥ್‌ ಕೂಡ ರೇಸ್‌ನಲ್ಲಿದ್ದಾರೆ. ವರ್ಷದ ಏಕದಿನ ಆಟಗಾರ ಹಾಗೂ ಆಟಗಾರ್ತಿ ಪ್ರಶಸ್ತಿಗೆ ಯಾವುದೇ ಭಾರತೀಯರು ನಾಮನಿರ್ದೇಶನಗೊಂಡಿಲ್ಲ.