ಮ್ಯಾಂಚೆಸ್ಟರ್‌(ಜು.24): ಐತಿಹಾಸಿಕ ಟೆಸ್ಟ್‌ ಸರಣಿ ಜಯದ ಮೇಲೆ ಕಣ್ಣಿಟ್ಟಿರುವ ವೆಸ್ಟ್‌ ಇಂಡೀಸ್‌, ಶುಕ್ರವಾರದಿಂದ ಇಲ್ಲಿ ಆರಂಭವಾಗಲಿರುವ 3ನೇ ಹಾಗೂ ನಿರ್ಣಾಯಕ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. 

ಮೊದಲ ಟೆಸ್ಟ್‌ನಲ್ಲಿ ವಿಂಡೀಸ್‌ 4 ವಿಕೆಟ್‌ಗಳ ಗೆಲುವು ಸಾಧಿಸಿದ್ದರೆ, 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 113 ರನ್‌ಗಳ ಜಯ ಪಡೆದಿತ್ತು. ಹೀಗಾಗಿ 3 ಪಂದ್ಯಗಳ ಸರಣಿ 1-1 ರಿಂದ ಸಮಬಲವಾಗಿದೆ. ವೇಗಿ ಆರ್ಚರ್‌ ಹಾಗೂ ಆ್ಯಂಡರ್ಸನ್‌ ಈ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ ಸೇರಿಕೊಂಡಿದ್ದು, ಮತ್ತಷ್ಟು ಬಲಿಷ್ಠವಾಗಿದೆ.

ನಾನು ಜನಾಂಗೀಯ ನಿಂದನೆ ಎದುರಿಸಿದ್ದೇನೆಂದ ಇಂಗ್ಲೆಂಡ್ ಮಾರಕ ವೇಗಿ..!

ಆಲ್ರೌಂಡರ್‌ಗಳ ನಡುವಿನ ಕಾದಾಟ: ಈ ಸರಣಿಯಲ್ಲಿ ಉಭಯ ತಂಡಗಳ ಆಲ್ರೌಂಡರ್‌ಗಳು ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಅದರಲ್ಲೂ ಟೆಸ್ಟ್ ಆಲ್ರೌಂಡರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಬೆನ್ ಸ್ಟೋಕ್ಸ್ ಹಾಗೂ ವಿಂಡೀಸ್ ನಾಯಕ ನಾಯಕ ಜೇಸನ್ ಹೋಲ್ಡರ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮೊದಲ ಪಂದ್ಯದಲ್ಲಿ 6 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ನಾಯಕ ಹೋಲ್ಡರ್ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಬೆನ್ ಸ್ಟೋಕ್ಸ್ ಎರಡನೇ ಟೆಸ್ಟ್ ಪಂದ್ಯದಲ್ಲಿ 176&78* ರನ್ ಚಚ್ಚುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದಿತ್ತಿದ್ದರು. ಹೀಗಾಗಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ.

ಇಂಗ್ಲೆಂಡ್ ನೆಲದಲ್ಲಿ 32 ವರ್ಷಗಳಿಂದ ಸರಣಿ ಗೆದ್ದಿಲ್ಲ ವಿಂಡೀಸ್: ಒಂದು ಕಾಲದಲ್ಲಿ ದೈತ್ಯ ಪ್ರತಿಭೆಯಾಗಿ ಮೆರೆದಿದ್ದ ವೆಸ್ಟ್ ಇಂಡೀಸ್ 1988ರಿಂದೀಚೆಗೆ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. 32 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ಪಡೆಗೆ ಅಂತಹದ್ದೊಂದು ಸದವಾಕಾಶ ಒಲಿದು ಬಂದಿದ್ದು, ಟೆಸ್ಟ್ ಸರಣಿ ಗೆದ್ದು ಇತಿಹಾಸ ಬರೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್‌