* ವೆಸ್ಟ್ ಇಂಡೀಸ್ ಎದುರು ಮೊದಲ ಟಿ20 ಪಂದ್ಯದಲ್ಲಿ ಆಸೀಸ್‌ಗೆ ಮುಖಭಂಗ* ಸುಲಭ ಗೆಲುವನ್ನು ಕೈಚೆಲ್ಲಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ* 5 ಪಂದ್ಯಗಳ ಸರಣಿಯಲ್ಲಿ ವಿಂಡೀಸ್‌ಗೆ 1-0 ಮುನ್ನಡೆ
ಸೇಂಟ್ ಲೂಸಿಯಾ(ಜು.10): ಆ್ಯಂಡ್ರೆ ರಸೆಲ್ ಸ್ಪೋಟಕ ಬ್ಯಾಟಿಂಗ್ ಹಾಗೂ ವೇಗಿ ಒಬೆಡ್ ಮೆಕಾಯ್ ಮಾರಕ ಬೌಲಿಂಗ್ ನೆರವಿನಿಂದ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡದೆದುರು ವೆಸ್ಟ್ ಇಂಡೀಸ್ ತಂಡವು ಮೊದಲ ಟಿ20 ಪಂದ್ಯದಲ್ಲಿ 18 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ 1-0 ಮುನ್ನಡೆ ಸಾಧಿಸಿದೆ.
ಗೆಲ್ಲಲು 146 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಸುಲಭವಾಗಿಯೇ ಗುರಿ ಮುಟ್ಟಲಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. 116 ರನ್‌ಗಳವರೆಗೆ ಕೇವಲ 5 ವಿಕೆಟ್ ಕಳೆದುಕೊಂಡಿದ್ದ ಕಾಂಗರೂ ಪಡೆ ಆ ಬಳಿಕ ತನ್ನ ಖಾತೆಗೆ ಕೇವಲ 10 ರನ್ ಸೇರಿಸುವಷ್ಟರಲ್ಲಿ ಇನ್ನುಳಿದ 5 ವಿಕೆಟ್ ಕಳೆದುಕೊಂಡು ಆಘಾತಕಾರಿ ಸೋಲು ಅನುಭವಿಸಿತು. ಹೇಡನ್ ವಾಲ್ಷ್ 23 ರನ್ ನೀಡಿ 3 ವಿಕೆಟ್ ಪಡೆದರೆ, ಮೆಕಾಯ್ 26 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಆ್ಯರೋನ್ ಫಿಂಚ್ ಪಡೆಗೆ ಶಾಕ್ ನೀಡಿದರು.
ಪಂದ್ಯ ಸೋತರೂ ಅಭಿಮಾನಿಗಳ ಹೃದಯ ಗೆದ್ದ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್..!
ಕೇವಲ 19 ರನ್‌ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿದ್ದು ನಿಜಕ್ಕೂ ಬೇಸರ ತರಿಸಿದೆ ಎಂದು ಪಂದ್ಯ ಸೋಲಿನ ಬಳಿಕ ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಜೋಸ್ ಹೇಜಲ್‌ವುಡ್ ಮಾರಕ ದಾಳಿ ನಡೆಸುವ ಮೂಲಕ ಕೆರಿಬಿಯನ್ನರು ಸ್ಪೋಟಕ ಬ್ಯಾಟಿಂಗ್ ನಡೆಸದಂತೆ ನೋಡಿಕೊಂಡರು. ಹೇಜಲ್‌ವುಡ್ 4 ಓವರ್ ಬೌಲಿಂಗ್ ಮಾಡಿ ಕೇವಲ 12 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿ ಮಿಂಚಿದರು. ಆದರೆ ಆ್ಯಂಡ್ರೆ ರಸೆಲ್ 28 ಎಸೆತಗಳಲ್ಲಿ 51 ರನ್ ಬಾರಿಸುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಅಂದಹಾಗೆ ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆ್ಯಂಡ್ರೆ ರಸೆಲ್ ಬಾರಿಸಿದ ಮೊದಲ ಅರ್ಧಶತಕ ಎನ್ನುವುದು ಅಚ್ಚರಿ ಎನಿಸಿದರೂ ಸತ್ಯ.
