ವೆಸ್ಟ್ ಇಂಡೀಸ್‌ ಟೆಸ್ಟ್‌ ತಂಡದ ನೂತನ ನಾಯಕನಾಗಿ ಕ್ರೆಗ್‌ ಬ್ರಾಥ್‌ವೇಟ್‌ ನೇಮಕವಾಗಿದ್ದಾರೆ, ಇದರೊಂದಿಗೆ ಜೇಸನ್‌ ಹೋಲ್ಡರ್ ತಲೆದಂಡವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಜಮೈಕಾ(ಮಾ.12): ವಿಂಡೀಸ್‌ ಮಂಡಳಿ ಕ್ರೆಗ್‌ ಬ್ರಾಥ್‌ವೇಟ್‌ಗೆ ಟೆಸ್ಟ್‌ ತಂಡದ ನಾಯಕತ್ವ ಪಟ್ಟ ಕಟ್ಟುವುದರೊಂದಿಗೆ ಜೇಸನ್‌ ಹೋಲ್ಡರ್‌ ಅವರ ಐದೂವರೆ ವರ್ಷಗಳ ಅವಧಿಯ ವೆಸ್ಟ್‌ ಇಂಡೀಸ್‌ ಟೆಸ್ಟ್‌ ತಂಡದ ನಾಯಕತ್ವಕ್ಕೆ ತೆರೆ ಬಿದ್ದಿದೆ. ಇನ್ನು ಮುಂದೆ ಕ್ರೆಗ್ ಬ್ರಾಥ್‌ವೇಟ್‌ ವೆಸ್ಟ್ ಇಂಡೀಸ್‌ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವಿಂಡೀಸ್‌ ಕ್ರಿಕೆಟ್ ಮಂಡಳಿ ಖಚಿತ ಪಡಿಸಿದೆ.

ಕ್ರೆಗ್ ಬ್ರಾಥ್‌ವೇಟ್‌ ವೆಸ್ಟ್‌ ಇಂಡೀಸ್‌ ಟೆಸ್ಟ್ ತಂಡದ 37ನೇ ನಾಯಕ ಎನ್ನುವ ಗೌರವಕ್ಕೆ ಭಾಜನರಾಗಿದ್ದು, ಆಯ್ಕೆ ಸಮಿತಿ ಮುಖ್ಯಸ್ಥ ರೋಜರ್‌ ಹಾರ್ಪರ್‌ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಡಿದ್ದಾರೆ. ನಮ್ಮ ಟೆಸ್ಟ್ ತಂಡವನ್ನು ಮುನ್ನಡೆಸಲು ಕ್ರೆಗ್‌ ಬ್ರಾಥ್‌ವೇಟ್‌ ಸರಿಯಾದ ಆಯ್ಕೆ ಎಂದು ನಾವು ನಂಬಿದ್ದೇವೆ, ಹಾಗೂ ನಮ್ಮ ನಿರ್ಧಾರವನ್ನು ಅವರು ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಯಲ್ಲಿ ಬ್ರಾಥ್‌ವೇಟ್‌ ಎಲ್ಲಾ ಆಟಗಾರರನ್ನು ಹುರಿದುಂಬಿಸಿದ ರೀತಿ, ಯಶಸ್ಸಿನತ್ತ ತಂಡವನ್ನು ಮುನ್ನಡೆಸಿದ ರೀತಿ ನಿಜಕ್ಕೂ ಅನನ್ಯ ಎಂದು ಹಾರ್ಪರ್ ಬಣ್ಣಿಸಿದ್ದಾರೆ.

Scroll to load tweet…

ಇದೀಗ ವೆಸ್ಟ್ ಇಂಡೀಸ್‌ ನೂತನ ನಾಯಕ ಬ್ರಾಥ್‌ವೇಟ್‌ ಮುಂದಿರುವ ಮೊದಲ ಸವಾಲು ಎಂದರೆ ತವರಿನಲ್ಲಿ ಶ್ರೀಲಂಕಾ ವಿರುದ್ದದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಬೇಕಿದೆ. ಲಂಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯವು ಮಾರ್ಚ್ 21ರಿಂದ ಆರಂಭವಾಗಲಿದೆ. 

ಟೆಸ್ಟ್‌ ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೇರಿದ ರವಿಚಂದ್ರನ್ ಅಶ್ವಿನ್‌!

ದಿನೇಶ್ ರಾಮ್ದಿನ್‌ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕ 2015ರಲ್ಲಿ ಜೇಸನ್‌ ಹೋಲ್ಡರ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಹೋಲ್ಡರ್ ನಾಯಕತ್ವದಲ್ಲಿ ವಿಂಡೀಸ್‌ 37 ಟೆಸ್ಟ್ ಪಂದ್ಯಗಳನ್ನಾಡಿ 11 ಗೆಲುವು, 5 ಡ್ರಾ ಹಾಗೂ 21 ಸೋಲುಗಳನ್ನು ಕಂಡಿತ್ತು. ಇನ್ನು ಹೋಲ್ಡರ್‌ ಇದವರೆಗೂ 45 ಟೆಸ್ಟ್ ಪಂದ್ಯಗಳನ್ನಾಡಿದ್ದು, 32.05ರ ಸರಾಸರಿಯಲ್ಲಿ 2115 ರನ್ ಹಾಗೂ 116 ವಿಕೆಟ್ ಕಬಳಿಸಿದ್ದಾರೆ.