Asianet Suvarna News Asianet Suvarna News

ಅಶ್ವಿನ್ ದಾಳಿಗೆ ವಿಂಡೀಸ್ ಧೂಳೀಪಟ; ಬ್ಯಾಟಿಂಗ್‌ನಲ್ಲಿ ರೋಹಿತ್-ಯಶಸ್ವಿ ಶೈನಿಂಗ್..!

ವೆಸ್ಟ್ ಇಂಡೀಸ್ ಎದುರು ಭರ್ಜರಿ ಆರಂಭ ಪಡೆದ ಟೀಂ ಇಂಡಿಯಾ
ವಿಂಡೀಸ್‌ ತಂಡವನ್ನು 150 ರನ್‌ಗೆ ಕಟ್ಟಿಹಾಕಿದ ಟೀಂ ಇಂಡಿಯಾ ಬೌಲರ್‌
ಬ್ಯಾಟಿಂಗ್‌ನಲ್ಲಿ ಮಿಂಚಿದ ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ

West Indies 150 all out after Ashwin fifer Team India good start in Batting kvn
Author
First Published Jul 13, 2023, 9:10 AM IST

ರೋಸೀ(ಡೊಮಿನಿಕಾ): ಭಾರತದ ಸ್ಪಿನ್‌ ದಾಳಿಯನ್ನು ಎದುರಿಸಲು ಆರಂಭದಲ್ಲೇ ಪರದಾಟ ನಡೆಸಿದ ವೆಸ್ಟ್‌ಇಂಡೀಸ್‌, ಮೊದಲ ಟೆಸ್ಟ್‌ನ ಮೊದಲ ದಿನವೇ ಪೆವಿಲಿಯನ್‌ ಪರೇಡ್‌ ನಡೆಸಿದೆ. ಇಲ್ಲಿನ ವಿಂಡ್ಸರ್‌ ಪಾರ್ಕ್‌ನಲ್ಲಿ ಆರಂಭಗೊಂಡ ಪಂದ್ಯದಲ್ಲಿ ಆತಿಥೇಯ ವಿಂಡಿಸ್‌ ತಂಡವು ಮೊದಲ ಇನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಗೆ ಸರ್ವಪತನ ಕಂಡಿದೆ. ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ 5 ವಿಕೆಟ್ ಗೊಂಚಲು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ, ಮೊದಲ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 80 ರನ್ ಗಳಿಸಿದ್ದು, ಇನ್ನು ಕೇವಲ 70 ರನ್ ಹಿನ್ನಡೆಯಲ್ಲಿದೆ.

ವೆಸ್ಟ್ ಇಂಡೀಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಭರ್ಜರಿ ಆರಂಭವನ್ನೇ ಪಡೆದಿದೆ. ಟೆಸ್ಟ್‌ಗೆ ಪಾದಾರ್ಪಣೆ ಮಾಡಿರುವ ಯಶಸ್ವಿ ಜೈಸ್ವಾಲ್ ಮೊದಲ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಯಶಸ್ವಿ 73 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ ಅಜೇಯ 40 ರನ್ ಬಾರಿಸಿದ್ದಾರೆ. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುತ್ತಿರುವ ನಾಯಕ ರೋಹಿತ್ ಶರ್ಮಾ 65 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 30 ರನ್ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಇನ್ನು ಇದಕ್ಕೂ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ವಿಂಡೀಸ್‌ ನಿರ್ಧಾರ ಆರಂಭದಲ್ಲೇ ತಲೆಕೆಳಗಾಯಿತು. ವಿಕೆಟ್‌ ನಷ್ಟವಿಲ್ಲದೇ 31 ರನ್‌ ಸೇರಿಸಿದ್ದ ನಾಯಕ ಕ್ರೇಗ್‌ ಬ್ರಾಥ್‌ವೇಟ್‌ ಹಾಗೂ ತೇಜ್‌ನಾರಾಯಣ್‌ ಚಂದ್ರಪಾಲ್‌ ಜೋಡಿ ಬಳಿಕ ಆರ್‌.ಅಶ್ವಿನ್‌ಗೆ ಬಲಿಯಾಗುವುದರೊಂದಿಗೆ ತಂಡದ ಪತನ ಆರಂಭಗೊಂಡಿತು. ಬ್ರಾಥ್‌ವೇಟ್‌ 20, ಚಂದ್ರಪಾಲ್‌ 12 ರನ್‌ಗೆ ನಿರ್ಗಮಿಸಿದರು. ಬಳಿಕ ಕ್ರೀಸ್‌ಗೆ ಬಂದ ರೇಮನ್‌ ರೀಫರ್‌ ಕೇವಲ 2 ರನ್‌ ಗಳಿಸಿ ಶಾರ್ದೂಲ್‌ ಠಾಕೂರ್‌ಗೆ ವಿಕೆಟ್‌ ಒಪ್ಪಿಸಿದರು. ಜೆರ್ಮೈನ್‌ ಬ್ಲಾಕ್‌ವುಡ್‌(14)ಗೆ ರವೀಂದ್ರ ಜಡೇಜಾ ಪೆವಿಲಿಯನ್‌ ಹಾದಿ ತೋರಿಸಿದರು. 

West Indies vs India: ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌, ಟೀಮ್‌ ಇಂಡಿಯಾ ಪರ ಇಬ್ಬರ ಪಾದಾರ್ಪಣೆ!

ಎಲಿಕ್‌ ಅಥನಾಜೆ(47) ಭಾರತೀಯ ಬೌಲರ್‌ಗಳೆದುರು ಕೊಂಚ ಪ್ರತಿರೋಧ ತೋರಿದರು. ಇವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಅಶ್ವಿನ್ ಯಶಸ್ವಿಯಾದರು. ಜೇಸನ್‌ ಹೋಲ್ಡರ್(18) ಹಾಗೂ ರಾಕೀಂ ಕಾರ್ನೆವಾಲ್‌(19*) ಹೊರತುಪಡಿಸಿ ಮಧ್ಯಮ ಕ್ರಮಾಂಕದಲ್ಲಿ ಭಾರತ ಬೌಲರ್‌ಗಳ ಸವಾಲು ಎದುರಿಸಲು ವಿಂಡೀಸ್ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು.

ಅಶ್ವಿನ್‌ಗೆ 5 ವಿಕೆಟ್ ಗೊಂಚಲು: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಬೆಂಚ್ ಕಾಯಿಸಿದ್ದ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌, ಮತ್ತೊಮ್ಮೆ ಮಾರಕ ದಾಳಿ ನಡೆಸುವ ಮೂಲಕ 5 ವಿಕೆಟ್ ಗೊಂಚಲು ಪಡೆಯುವಲ್ಲಿ ಯಶಸ್ವಿಯಾದರು. ಅಶ್ವಿನ್‌ 24.3 ಓವರ್ ಬೌಲಿಂಗ್ ಮಾಡಿ 6 ಮೇಡನ್ ಓವರ್ ಸಹಿತ 60 ರನ್ ನೀಡಿ 5 ವಿಕೆಟ್ ಕಬಳಿಸುವಲ್ಲಿ ಸಫಲರಾದರು. 

ತಂದೆ-ಮಗನ ವಿಕೆಟ್‌ ಕಿತ್ತು ಅಶ್ವಿನ್‌ ದಾಖಲೆ!

ತಾರಾ ಸ್ಪಿನ್ನರ್‌ ಆರ್‌.ಆಶ್ವಿನ್‌, ವಿಂಡೀಸ್‌ನ ತೇಜ್‌ನಾರಾಯಣ್‌ ಚಂದ್ರಪಾಲ್‌ ವಿಕೆಟ್‌ ಕಬಳಿಸುವುದರೊಂದಿಗೆ ಟೆಸ್ಟ್‌ನಲ್ಲಿ ತಂದೆ-ಮಗನ ವಿಕೆಟ್‌ ಕಿತ್ತ ಭಾರತದ ಮೊದಲ, ಒಟ್ಟಾರೆ 5ನೇ ಬೌಲರ್‌ ಎಂಬ ಖ್ಯಾತಿಗೆ ಪಾತ್ರರಾದರು. ಈ ಮೊದಲು 2011ರಲ್ಲಿ ತೇಜ್‌ನಾರಾಯಣ್‌ ಅವರ ತಂದೆ, ದಿಗ್ಗಜ ಶಿವನಾರಾಯಣ್‌ ಚಂದ್ರಪಾಲ್‌ ಅವರನ್ನು ಅಶ್ವಿನ್‌ ಔಟ್‌ ಮಾಡಿದ್ದರು. ಅಶ್ವಿನ್‌ ಹೊರತುಪಡಿಸಿ ಇಂಗ್ಲೆಂಡ್‌ನ ಇಯಾನ್‌ ಬೋಥಂ, ಪಾಕಿಸ್ತಾನದ ಇಮ್ರಾನ್‌ ಖಾನ್‌, ಆಸ್ಟ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌ ಹಾಗೂ ದ.ಆಫ್ರಿಕಾದ ಸಿಮೋನ್‌ ಹಾರ್ಮರ್‌ ಈ ಸಾಧನೆ ಮಾಡಿದ್ದರು.

ಸ್ಕೋರ್‌: 

ವೆಸ್ಟ್‌ಇಂಡೀಸ್‌:150/10 
(ಎಲಿಕ್‌ ಅಥನಾಜೆ: 47, ಕ್ರೆಗ್ ಬ್ರಾಥ್‌ವೇಟ್‌ 20, ಅಶ್ವಿನ್‌ 5-60)

ಭಾರತ: 80/0
ಯಶಸ್ವಿ ಜೈಸ್ವಾಲ್: 40
ರೋಹಿತ್ ಶರ್ಮಾ: 30
(* ಮೊದಲ ದಿನದಾಟ ಮುಕ್ತಾಯದ ವೇಳೆಗೆ)

Follow Us:
Download App:
  • android
  • ios