ಅಹಮದಾಬಾದ್‌(ಫೆ.26): ಭಾರತ-ಇಂಗ್ಲೆಂಡ್‌ ನಡುವಿನ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ಕೇವಲ ಎರಡನೇ ದಿನಕ್ಕೆ ಮುಕ್ತಾಯವಾದ ಬೆನ್ನಲ್ಲೇ ನರೇಂದ್ರ ಮೋದಿ ಪಿಚ್‌ ಬಗ್ಗೆ ಇಂಗ್ಲೆಂಡ್ ನಾಯಕ ಜೋ ರೂಟ್ ವ್ಯಂಗ್ಯವಾಡಿದ್ದಾರೆ. ನೀವು ಇಂಗ್ಲೆಂಡ್‌ಗೆ ಬಂದಾಗ ನಾವು ತುಂಬಾ ಒಳ್ಳೆಯ ಪಿಚ್‌ ನಿರ್ಮಿಸುತ್ತೇವೆ ಎಂದು ರೂಟ್‌ ಹೇಳಿದ್ದಾರೆ.

ಭಾರತ ತಂಡವು ಆಗಸ್ಟ್ ತಿಂಗಳಿನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಇಂಗ್ಲೆಂಡ್‌ ಒಳ್ಳೆಯ ಪಿಚ್‌ ನಿರ್ಮಿಸಲಿದ್ದು, ಇಲ್ಲಿ ಭಾರತೀಯ ವೇಗಿಗಳು ಪ್ರಾಬಲ್ಯ ಮೆರೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ 30 ವಿಕೆಟ್‌ಗಳು ಪತನಗೊಂಡಿದ್ದವು. ಈ ಪೈಕಿ 28 ವಿಕೆಟ್‌ಗಳು ಸ್ಪಿನ್ನರ್ ಪಾಲಾಗಿದ್ದವು. 2 ತಂಡಗಳು ನಾಲ್ಕು ಇನಿಂಗ್ಸ್‌ಗಳ ಪೈಕಿ ಒಮ್ಮೆಯ 150 ರನ್‌ ಗಡಿ ದಾಟುವಲ್ಲಿ ವಿಫಲವಾಗಿದ್ದವು.

ಮೊಟೇರಾ ಬೌಲಿಂಗ್‌ ಎಂಡ್‌ಗೆ ಅದಾನಿ, ರಿಲಯನ್ಸ್‌ ಹೆಸರಿಟ್ಟಿದ್ದೇಕೆ..?

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಜೋ ರೂಟ್‌, ಭಾರತ ತಂಡ ಇಂಗ್ಲೆಂಡ್‌ಗೆ ಬಂದಾಗ ನಾವು ಒಳ್ಳೆಯ ವಿಕೆಟ್‌ ಸಿದ್ದಪಡಿಸುತ್ತೇವೆ. ಒಂದೊಳ್ಳೆಯ ತಂಡವನ್ನು ಕಟ್ಟಿ ಜಗತ್ತಿನ ಮೂಲೆ ಮೂಲೆಗಳಲ್ಲಿ ಉತ್ತಮ ಪ್ರದರ್ಶನ ತೋರಬೇಕಿದ್ದರೆ, ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಬೇಕು. ಇಂಗ್ಲೆಂಡ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪಿಚ್‌ ನಿರ್ಮಿಸಲಿದ್ದೇವೆ ಎಂದು ಹೇಳುವ ಮೂಲಕ ಅಹಮದಾಬಾದ್‌ ಟೆಸ್ಟ್‌ ಪಂದ್ಯದ ಪಿಚ್‌ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

ಜೋ ರೂಟ್‌ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಂತಹ ಪ್ರದರ್ಶನ ತೋರಿಲ್ಲದಿದ್ದರೂ ಬೌಲಿಂಗ್‌ನಲ್ಲಿ ಕೇವಲ 8 ರನ್‌ ನೀಡಿ ಭಾರತದ 5 ವಿಕೆಟ್‌ ಕಬಳಿಸುವ ಮೂಲಕ ಭಾರತ  ಮೊದಲ ಇನಿಂಗ್ಸ್‌ನಲ್ಲಿ ಕೇವಲ 145 ರನ್‌ಗಳಿಗೆ ಆಲೌಟ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.