Asianet Suvarna News Asianet Suvarna News

ರೋಹಿತ್ ಶರ್ಮಾ ಕಟ್ಟಿಹಾಕಲು ಪ್ಲಾನ್‌ ಮಾಡಿದ್ದೇವೆ: ನೇಥನ್ ಲಯನ್‌

ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ ಪಂದ್ಯಕ್ಕೆ ಟೀಂ ಇಂಡಿಯಾ ಕೂಡಿಕೊಂಡಿರುವ ರೋಹಿತ್ ಶರ್ಮಾ ಅವರನ್ನು ಕಟ್ಟಿಹಾಕಲು ರಣತಂತ್ರ ಹೆಣೆದಿರುವುದಾಗಿ ಆಸೀಸ್‌ ಅನುಭವಿ ಸ್ಪಿನ್ನರ್ ತಿಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

We will have our plans ready for Rohit Sharma Says Australian Spinner Nathan Lyon kvn
Author
Melbourne VIC, First Published Jan 4, 2021, 1:50 PM IST

ಮೆಲ್ಬರ್ನ್‌(ಜ.04): ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಕೊನೆಯ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ ಅವರನ್ನು ಕಟ್ಟಿಹಾಕಲು ವಿಭಿನ್ನ ರಣತಂತ್ರ ಹೆಣೆದಿದ್ದೇವೆ ಎಂದು ಆಸ್ಟ್ರೇಲಿಯಾ ಅನುಭವಿ ಸ್ಪಿನ್ನರ್ ನೇಥನ್ ಲಯನ್ ಹೇಳಿದ್ದಾರೆ.

ಫಿಟ್ನೆಸ್ ಸಮಸ್ಯೆಯಿಂದ ಆಸೀಸ್‌ ಎದುರಿನ ಸೀಮಿತ ಓವರ್‌ಗಳ ಸರಣಿ ಹಾಗೂ ಮೊದಲೆರಡು ಟೆಸ್ಟ್‌ ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಕೆಲ ದಿನಗಳ ಹಿಂದಷ್ಟೇ ಕಠಿಣ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಟೀಂ ಇಂಡಿಯಾ ಕೂಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್‌ ಶರ್ಮಾಗೆ ಇದೇ ಮೊದಲ ಬಾರಿಗೆ ಟೆಸ್ಟ್‌ ತಂಡದ ಉಪನಾಯಕ ಪಟ್ಟ ಕೂಡಾ ಕಟ್ಟಲಾಗಿದೆ. ಇದೀಗ ಜನವರಿ 07ರಿಂದ ಆರಂಭವಾಗಲಿರುವ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ಲಯನ್, ಖಂಡಿತ ರೋಹಿತ್ ಶರ್ಮಾ ಅವರೊಬ್ಬ ಅತ್ಯುತ್ತಮ ಆಟಗಾರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ರೋಹಿತ್ ಶರ್ಮಾಗೆ ಬೌಲಿಂಗ್‌ ಮಾಡುವುದು ಎದುರಾಳಿ ತಂಡಕ್ಕೆ ನಿಜಕ್ಕೂ ದೊಡ್ಡ ಸವಾಲೇ ಸರಿ. ಹೀಗಾಗಿ ನಾವು ರೋಹಿತ್ ಶರ್ಮಾ ಅವರನ್ನು ಕಟ್ಟಿಹಾಕಲು ನಮ್ಮದೇ ಆದ ರಣತಂತ್ರ ಹೆಣೆದಿದ್ದೇವೆ. ಆದ್ದರಿಂದ ರೋಹಿತ್ ಅವರನ್ನು ಆದಷ್ಟು ಬೇಗ ನಮ್ಮ ಬಲೆಗೆ ಕೆಡವಲು ಎದುರು ನೋಡುತ್ತಿದ್ದೇವೆ ಎಂದು ಲಯನ್ ಹೇಳಿದ್ದಾರೆ.

ಇಂಡೋ-ಆಸೀಸ್‌ ಎರಡೂ ಟೆಸ್ಟ್‌ ಸಿಡ್ನಿಯಲ್ಲೇ..?

ರೋಹಿತ್ ಶರ್ಮಾ ಫಾರ್ಮ್‌ ಸಮಸ್ಯೆಯಿಂದ ಬಳಲುತ್ತಿರುವ ಮಯಾಂಕ್ ಅಗರ್‌ವಾಲ್‌ ಬದಲಿಗೆ ಆರಂಭಿಕನಾಗಿ ತಂಡ ಕೂಡಿಕೊಳ್ಳಬಹುದು ಇಲ್ಲವೇ ಹನುಮ ವಿಹಾರಿ ಬದಲಿಗೆ ಹಿಟ್‌ಮ್ಯಾನ್ ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಬಹುದು. ಆಸ್ಟ್ರೇಲಿಯಾದಲ್ಲಿ ರೋಹಿತ್ ಶರ್ಮಾ ಇದುವರೆಗೂ 5 ಟೆಸ್ಟ್‌ ಪಂದ್ಯಗಳನ್ನಾಡಿದ್ದು ಕೇವಲ 31ರ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಹೀಗಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಬಡ್ತಿ ಪಡೆದ ಮೇಲೆ ರೋಹಿತ್ ಅಬ್ಬರಿಸುತ್ತಿದ್ದು, ಈ ಬಾರಿ ಹಿಟ್‌ಮ್ಯಾನ್‌ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
 

Follow Us:
Download App:
  • android
  • ios