ಮೆಲ್ಬರ್ನ್(ಜ.04)‌: ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ 4ನೇ ಟೆಸ್ಟ್‌ ಪಂದ್ಯ ಸಹ ಸಿಡ್ನಿಯಲ್ಲೇ ನಡೆಯುವ ಸಾಧ್ಯತೆ ಇದೆ. ನಿಗದಿತ ವೇಳಾಪಟ್ಟಿ ಪ್ರಕಾರ 3ನೇ ಟೆಸ್ಟ್‌ ಸಿಡ್ನಿಯಲ್ಲಿ, 4ನೇ ಟೆಸ್ಟ್‌ ಬ್ರಿಸ್ಬೇನ್‌ನಲ್ಲಿ ನಡೆಯಬೇಕಿದೆ. ಆದರೆ ನ್ಯೂ ಸೌತ್‌ ವೇಲ್ಸ್‌ ರಾಜ್ಯದಲ್ಲಿರುವ ಸಿಡ್ನಿಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಲ್ಲಿಂದ ಬರುವ ಪ್ರಯಾಣಿಕರು ಕ್ವೀನ್ಸ್‌ಲೆಂಡ್‌ನಲ್ಲಿ ಪ್ರವೇಶ ನಿರ್ಬಂಧ ಹೇರಲಾಗಿದೆ. ಆದರೆ ಆಟಗಾರರಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆಯಾದರೂ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಬೇಕು ಎಂದು ಅಲ್ಲಿನ ಆಡಳಿತ ನಿಯಮ ರಚಿಸಿದೆ.

ಐಪಿಎಲ್‌ ಸೇರಿ ಹೆಚ್ಚೂ ಕಡಿಮೆ 5-6 ತಿಂಗಳಿಂದ ಬಯೋ ಸೆಕ್ಯೂರ್‌ ವಾತಾವರಣದೊಳಗಿರುವ ಭಾರತೀಯ ಆಟಗಾರರು, ತಿಂಗಳುಗಟ್ಟಲೇ ಕ್ವಾರಂಟೈನ್‌ ವಾಸ ಅನುಭವಿಸಿದ್ದಾರೆ. ಇದೀಗ ಮತ್ತೊಮ್ಮೆ ಬ್ರಿಸ್ಬೇನ್‌ನಲ್ಲಿ ಕ್ವಾರಂಟೈನ್‌ನಲ್ಲಿರಲು ಸಾಧ್ಯವಿಲ್ಲ ಎಂದು ಭಾರತ ತಂಡದ ಅಧಿಕಾರಿ ತಿಳಿಸಿರುವುದಾಗಿ ಭಾರತೀಯ ಹಾಗೂ ಆಸ್ಪ್ರೇಲಿಯಾದ ಕೆಲ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ, ಕ್ರಿಕೆಟ್‌ ಆಸ್ಪ್ರೇಲಿಯಾ ಸಿಡ್ನಿಯಲ್ಲೇ 4ನೇ ಪಂದ್ಯವನ್ನೂ ಆಡುವಂತೆ ಬಿಸಿಸಿಐ ಮನವೊಲಿಸುವ ಸಾಧ್ಯತೆ ಇದೆ.

ನಿಯಮ ಪಾಲಿಸಲು ಆಗಲ್ಲ ಅಂದ್ರೆ ಇಲ್ಲಿಗೆ ಬರಬೇಡಿ; ಟೀಂ ಇಂಡಿಯಾ ಆಟಗಾರರಿಗೆ ಖಡಕ್ ವಾರ್ನಿಂಗ್

ಬ್ರಿಸ್ಬೇನ್‌ಗೆ ಬರಬೇಡಿ!: ಭಾರತೀಯ ಆಟಗಾರರು ಕ್ವಾರಂಟೈನ್‌ಗೆ ಒಪ್ಪುತ್ತಿಲ್ಲ ಎನ್ನುವ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ವೀನ್ಸ್‌ಲೆಂಡ್‌ನ ಆರೋಗ್ಯ ಸಚಿವೆ ರೋಸ್‌ ಬೇಟ್ಸ್‌, ‘4ನೇ ಟೆಸ್ಟ್‌ ಆಡಲು ಬ್ರಿಸ್ಬೇನ್‌ಗೆ ಬರಲಿರುವ ಭಾರತೀಯ ಕ್ರಿಕೆಟಿಗರು ಕ್ವಾರಂಟೈನ್‌ ನಿಯಮವನ್ನು ಸಡಿಲಗೊಳಿಸುವಂತೆ ಕೇಳಿದ್ದಾರೆ ಎನ್ನುವ ವಿಚಾರ ತಿಳಿಯಿತು. ನಿಯಮ ಎಲ್ಲರಿಗೂ ಒಂದೇ. ಅವುಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ ಭಾರತೀಯರು ಬರುವುದೇ ಬೇಡ’ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.

4ನೇ ಪಂದ್ಯವನ್ನು ರದ್ದುಗೊಳಿಸಿದರೆ ಕ್ರಿಕೆಟ್‌ ಆಸ್ಪ್ರೇಲಿಯಾಗೆ ಭಾರೀ ನಷ್ಟಉಂಟಾಗಲಿದೆ. ಸದ್ಯದ ಆರ್ಥಿಕ ಸ್ಥಿತಿಯಲ್ಲಿ ಕ್ರಿಕೆಟ್‌ ಆಸ್ಪ್ರೇಲಿಯಾ ಅಂತಹ ನಿರ್ಧಾರ ಕೈಗೊಳ್ಳುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಕ್ವೀನ್ಸ್‌ಲೆಂಡ್‌ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕ್ವಾರಂಟೈನ್‌ ನಿಯಮ ಸಡಿಲಗೊಳಿಸುವುದು ಒಂದು ಆಯ್ಕೆಯಾದರೆ, ಸಿಡ್ನಿಯಲ್ಲೇ ಸತತ 2 ಪಂದ್ಯಗಳನ್ನು ಆಡಿಸುವುದು ಮತ್ತೊಂದು ಆಯ್ಕೆಯಾಗಿದೆ.