WTC FInal: ಟೀಂ ಇಂಡಿಯಾದ ಆಯ್ಕೆಯಲ್ಲಿ ತಪ್ಪಾಯಿತು: ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆದ ಪ್ರಮಾದ ಒಪ್ಪಿಕೊಂಡ ಬಿಸಿಸಿಐ ಅಧ್ಯಕ್ಷ
ನಮ್ಮ ತಂಡದ ಆಯ್ಕೆಯಲ್ಲಿ ಎಡವಿದೆವು ಎಂದ ರೋಜರ್ ಬಿನ್ನಿ
ಟೆಸ್ಟ್ ವಿಶ್ವಕಪ್ ಫೈನಲ್‌ನ ಮೊದಲ ದಿನ ಭಾರತ ತಂಡ ಸರಿಯಾಗಿ ಆಡಲಿಲ್ಲ
ಚಾಮರಾಜನಗರ(ಜೂ.17): ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್‌ನಲ್ಲಿ ತಂಡದ ಆಯ್ಕೆಯಲ್ಲಿ ನಾವು ಎಡವಿದೆವು ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ. ಬಂಡೀಪುರ ಬಳಿ ಕೃಷಿ ಮಾಡುತ್ತಿರುವ ಬಿನ್ನಿ, ಶುಕ್ರವಾರ ಇಲ್ಲಿ ಟ್ರ್ಯಾಕ್ಟರ್ ಖರೀದಿಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದರು.
‘ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್ ಆಡುವಾಗ ಪಿಚ್ ಹೇಗೆ ವರ್ತಿಸಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಅಸ್ಪ್ರೇಲಿಯಾ ವಿರುದ್ಧದ ಟೆಸ್ಟ್ ವಿಶ್ವಕಪ್ ಫೈನಲ್‌ನ ಮೊದಲ ದಿನ ಭಾರತ ತಂಡ ಸರಿಯಾಗಿ ಆಡಲಿಲ್ಲ. ತಂಡದ ಆಯ್ಕೆಯಲ್ಲೂ ಕೆಲ ಎಡವಟ್ಟುಗಳು ಆದವು. ಹೀಗಾಗಿ ಸೋಲನುಭವಿಸಬೇಕಾಯಿತು’ ಎಂದರು.
ಇದೇ ವೇಳೆ ಐಪಿಎಲ್‌ನಿಂದಾಗಿ ಟೆಸ್ಟ್ ಕ್ರಿಕೆಟ್‌ನತ್ತ ಆಟಗಾರರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಕೆಲ ಮಾಜಿ ಕ್ರಿಕೆಟಿಗರ ಅಭಿಪ್ರಾಯ ಸರಿಯಲ್ಲ. ಐಪಿಎಲ್‌ಗೂ ಟೆಸ್ಟ್ ಪ್ರದರ್ಶನಕ್ಕೂ ಸಂಬಂಧವಿಲ್ಲ ಎಂದು ಬಿನ್ನಿ ಹೇಳಿದರು.
ಟೆಸ್ಟ್ ಫೈನಲ್‌ಗೆ ಆಯ್ಕೆ ಮಾಡದ್ದಕ್ಕೆ ಅಶ್ವಿನ್ ಬೇಸರ!
ನವದೆಹಲಿ: ವಿಶ್ವದ ನಂ.1 ಟೆಸ್ಟ್ ಬೌಲರ್ ಆಗಿದ್ದರೂ ತಂಡದಲ್ಲಿ ಪದೇ ಪದೇ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದಕ್ಕೆ ಹಾಗೂ ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಮ್ಮನ್ನು ಆಯ್ಕೆ ಮಾಡದ್ದಕ್ಕೆ ಭಾರತದ ಆರ್.ಅಶ್ವಿನ್ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೌಲರ್ ಆಗಿರುವುದಕ್ಕೆ ತಮಗೆ ವಿಷಾದವಿದೆ ಎಂದಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿರುವ ಅವರು, ‘ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಆಡುವ ಬಯಕೆಯಿತ್ತು. ತಂಡ ಫೈನಲ್ ತಲುಪಿಸಲು ನನ್ನ ಕೊಡುಗೆಯೂ ಇದೆ. ಕಳೆದ ಆವೃತ್ತಿ ಫೈನಲ್ನಲ್ಲೂ 4 ವಿಕೆಟ್ ತೆಗೆದಿದ್ದೆ. 2018-19ರಿಂದಲೂ ವಿದೇಶಿ ಪಿಚ್ಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದೇನೆ ಮತ್ತು ಹಲವು ಪಂದ್ಯಗಳಲ್ಲಿ ಗೆಲ್ಲಿಸಿದ್ದೇನೆ. ತಂಡದ ನಾಯಕ, ಕೋಚ್ ಯಾವ ಸಂಯೋಜನೆಯೊಂದಿಗೆ ಆಡಿದರೆ ಸೂಕ್ತ ಎನ್ನುವುದನ್ನು ನಿರ್ಧರಿಸುತ್ತಾರೆ. ಈ ಮೊದಲು ಅವಕಾಶ ಸಿಗದಿದ್ದಾಗ ಆಘಾತಕ್ಕೊಳಗಾಗುತ್ತಿದೆ. ಆದರೆ ಈಗ ಅಭ್ಯಾಸವಾಗಿದೆ. ಟೆಸ್ಟ್ ಫೈನಲ್‌ನಲ್ಲಿ ನಾನು ಆಡುವುದಿಲ್ಲ ಎಂದು ನನಗೆ 48 ಗಂಟೆ ಮೊದಲೇ ಗೊತ್ತಿತ್ತು’ ಎಂದಿದ್ದಾರೆ.
CBSE ಟಾಪರ್, ಐಎಎಫ್ ಕೆಲಸ, ಎಲ್ಲವನ್ನೂ ಬಿಟ್ಟು ಈಕೆ ಆಯ್ಕೆ ಮಾಡಿಕೊಂಡಿದ್ದು ಕ್ರಿಕೆಟ್!
ಇದೇ ವೇಳೆ ಬೌಲರ್ ಆಗಿದ್ದರ ಬಗ್ಗೆ ಮಾತನಾಡಿರುವ ಅಶ್ವಿನ್, ‘ನಾನು ಚಿಕ್ಕವನಿದ್ದಾಗ ಕ್ರಿಕೆಟ್ ನೋಡುತ್ತಿದ್ದೆ. ಆಗ ಸಚಿನ್ ತೆಂಡುಲ್ಕರ್ ಹೋರಾಡಿ ತಂಡಕ್ಕೆ ರನ್ ಕಲೆಹಾಕುತ್ತಿದ್ದರು. ಆದರೆ ಬೌಲರ್‌ಗಳು ಸುಲಭವಾಗಿ ಎದುರಾಳಿಗೆ ರನ್ ಬಿಟ್ಟುಕೊಡುತ್ತಿದ್ದರಿಂದ ನಾವು ಪಂದ್ಯ ಸೋಲುತ್ತಿದ್ದೆವು. ಅದನ್ನು ನೋಡಿ ನಾನು ಒಬ್ಬ ಬೌಲರ್ ಆಗಬೇಕು. ಎಲ್ಲರಿಗಿಂತ ಉತ್ತಮವಾಗಿ ಬೌಲ್ ಮಾಡಬೇಕು ಎಂದು ನಿರ್ಧರಿಸಿದ್ದೆ. ಆದರೆ ನಿವೃತ್ತಿ ವೇಳೆ ನನಗೆ ಬ್ಯಾಟರ್ ಆಗದೇ ಇರುವುದಕ್ಕೆ ವಿಷಾದ ಉಂಟಾಗಬಹುದು. ನಾನು ಬೌಲರ್ ಆಗಲೇ ಬಾರದಿತ್ತು ಅನಿಸುತ್ತದೆ’ ಎಂದಿದ್ದಾರೆ.
ಸಹ ಆಟಗಾರರ ನಡುವಿನ ಸಂಬಂಧದ ಬಗ್ಗೆಯೂ ಬೇಸರದಿಂದಲೇ ಮಾತನಾಡಿರುವ ಅಶ್ವಿನ್, ‘ಈ ಹಿಂದೆ ಸಹ ಆಟಗಾರರು ಸ್ನೇಹಿತರಾಗಿದ್ದರು. ಈಗ ಸಹೋದ್ಯೋಗಿಗಳಾಗಿದ್ದಾರೆ. ಈಗ ಎಲ್ಲರೂ ಮತ್ತೊಬ್ಬರನ್ನು ಹಿಂದಿಕ್ಕಿ ಮುನ್ನುಗ್ಗುವುದರಲ್ಲೇ ಬ್ಯುಸಿಯಾಗಿದ್ದಾರೆ. ಒಬ್ಬರನ್ನೊಬ್ಬರು ಹೇಗಿದ್ದೀರಾ ಎಂದು ಕೇಳುವಷ್ಟೂ ಯಾರಿಗೂ ಸಮಯವಿಲ್ಲ’ ಎಂದಿದ್ದಾರೆ.
ಲಂಡನ್‌ನ ದಿ ಓವಲ್ ಮೈದಾನದಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 209 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಮೂಲಕ ಸತತ ಎರಡನೇ ಬಾರಿಗೆ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಕ್ರಿಕೆಟ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.