ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗಾಯಗೊಂಡ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಡೆಲ್ಲಿ ಮೂಲದ ಯುವ ಬ್ಯಾಟರ್ ಆಯುಷ್ ಬದೋನಿಗೆ ಭಾರತ ತಂಡದಲ್ಲಿ ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ.
ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಪಕ್ಕೆಲುಬಿನ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಇನ್ನುಳಿದ ಏಕದಿನ ಪಂದ್ಯಗಳಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಇದೀಗ ಡೆಲ್ಲಿ ಮೂಲದ ಪ್ರತಿಭಾನ್ವಿತ ಬ್ಯಾಟರ್ ಆಯುಷ್ ಬದೋನಿ ಇದೇ ಮೊದಲ ಬಾರಿಗೆ ಭಾರತ ತಂಡ ಕೂಡಿಕೊಂಡಿದ್ದಾರೆ. ಇನ್ನುಳಿದ ಎರಡು ಏಕದಿನ ಪಂದ್ಯಗಳಿಗಾಗಿ ಆಯುಷ್ ಬದೋನಿ ಭಾರತ ತಂಡ ಕೂಡಿಕೊಂಡಿದ್ದಾರೆ.
ಟೀಂ ಇಂಡಿಯಾ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆಯಲ್ಲಿ ಪಕ್ಕೆಲುಬಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದಾದ ಬಳಿಕ ಕೇವಲ 5 ಓವರ್ ಬೌಲಿಂಗ್ ಮಾಡಿ ಮೈದಾನ ತೊರೆದಿದ್ದರು. ಇನ್ನು ಪಂದ್ಯ ಮುಕ್ತಾಯದ ಬಳಿಕ ವಾಷಿಂಗ್ಟನ್ ಸುಂದರ್ ಸ್ಕ್ಯಾನ್‌ಗೆ ಒಳಗಾಗಿದ್ದರು. ಗಾಯದ ಸಮಸ್ಯೆಯನ್ನು ವಿಶ್ಲೇಷಿಸಿದ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳು, ಕೆಲಕಾಲ ವಿಶ್ರಾಂತಿಗೆ ಸೂಚಿಸಿದರು. ಹೀಗಾಗಿ ಕಿವೀಸ್ ಎದುರಿನ ಏಕದಿನ ಸರಣಿಯಿಂದ ವಾಷಿಂಗ್ಟನ್ ಸುಂದರ್ ಹೊರಬಿದ್ದಿದ್ದಾರೆ.
ಬೌಲಿಂಗ್‌ನಲ್ಲಿ ಐದು ಓವರ್ ಬೌಲಿಂಗ್ ಮಾಡಿ 27 ರನ್ ನೀಡಿದ್ದರು. ಇನ್ನು ನಿರ್ಣಾಯಕ ಘಟ್ಟದಲ್ಲಿ ಕೆ ಎಲ್ ರಾಹುಲ್ ಜತೆ 27 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಲು ಸುಂದರ್ ಆಸರೆಯಾದರು. ತಮಿಳುನಾಡು ಮೂಲದ ವಾಷಿಂಗ್ಟನ್ ಸುಂದರ್ ಏಳು ಎಸೆತಗಳಲ್ಲಿ ಅಜೇಯ 7 ರನ್ ಬಾರಿಸಿ, ರಾಹುಲ್‌ಗೆ ಉತ್ತಮ ಸಾಥ್ ನೀಡಿದರು.
ಆಯುಷ್ ಬದೋನಿಗೆ ಬಿಸಿಸಿಐ ಬುಲಾವ್:
ವಾಷಿಂಗ್ಟನ್ ಸುಂದರ್ ಏಕದಿನ ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಡೆಲ್ಲಿ ಮೂಲದ ಪ್ರತಿಭಾನ್ವಿತ ಬ್ಯಾಟರ್ ಆಯುಷ್ ಬದೋನಿಗೆ ಬಿಸಿಸಿಐ ಬುಲಾವ್ ನೀಡಿದೆ. 26 ವರ್ಷದ ಆಯುಷ್ ಬದೋನಿ ಇದುವರೆಗೂ 27 ಲಿಸ್ಟ್ 'ಎ' ಪಂದ್ಯಗಳನ್ನಾಡಿ ಒಂದು ಶತಕ ಹಾಗೂ ಐದು ಅರ್ಧಶತಕ ಸಹಿತ 693 ರನ್ ಸಿಡಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 18 ವಿಕೆಟ್ ಕಬಳಿಸಿದ್ದಾರೆ.
ಇನ್ನು 2022ರಿಂದಲೂ ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಆಯುಷ್ ಬದೋನಿ, ಬ್ಯಾಟಿಂಗ್‌ನಲ್ಲಿ 963 ರನ್ ಹಾಗೂ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಮೊದಲ ಪಂದ್ಯದಲ್ಲಿ ಭರ್ಜರಿ ಶುಭಾರಂಭ ಮಾಡಿರುವ ಟೀಂ ಇಂಡಿಯಾ:
ಭಾರತ-ನ್ಯೂಜಿಲೆಂಡ್ ತಂಡಗಳು 2026ರಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಟಾಸ್ ಸೋತು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 8 ವಿಕೆಟ್ ಕಳೆದುಕೊಂಡು 300 ರನ್ ಕಲೆಹಾಕಿತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡವು ವಿರಾಟ್ ಕೊಹ್ಲಿ(93) ಶತಕವಂಚಿತ ಬ್ಯಾಟಿಂಗ್ ನೆರವಿನಿಂದ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ನಾಲ್ಕು ವಿಕೆಟ್ ಸುಲಭ ಗೆಲುವು ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಏಕದಿನ ಪಂದ್ಯವು ಜನವರಿ 14ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ.
ನ್ಯೂಜಿಲೆಂಡ್ ಎದುರಿನ ಇನ್ನುಳಿದ ಎರಡು ಏಕದಿನ ಪಂದ್ಯಗಳಿಗೆ ಪರಿಷ್ಕೃತ ಭಾರತ ತಂಡ ಹೀಗಿದೆ:
ಶುಭ್‌ಮನ್ ಗಿಲ್(ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ಉಪನಾಯಕ), ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ದ್ ಕೃಷ್ಣ, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅರ್ಶದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ಆಯುಷ್ ಬದೋನಿ.


