Asianet Suvarna News Asianet Suvarna News

ಪಾಕ್ ಬೌಲರ್‌ಗಳನ್ನು ಚೆಂಡಾಡಿದ ವಾರ್ನರ್-ಮಾರ್ಷ್‌: ಪಾಕ್‌ಗೆ ಬೆಂಗಳೂರು ಪಂದ್ಯ ಗೆಲ್ಲಲು ಕಠಿಣ ಗುರಿ ನೀಡಿದ ಆಸೀಸ್

ಬರ್ತ್‌ಡೇ ಬಾಯ್ ಮಿಚೆಲ್ ಮಾರ್ಷ್‌ ಹಾಗೂ ಡೇವಿಡ್‌ ವಾರ್ನರ್, ಪಾಕಿಸ್ತಾನದ ಎಲ್ಲಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಡೇವಿಡ್ ವಾರ್ನರ್ ಕೇವಲ 85 ಎಸೆತಗಳನ್ನು ಎದುರಿಸಿ ಶತಕ ಪೂರೈಸುವಲ್ಲಿ ಯಶಸ್ವಿಯಾದರು. ಈ ಮೂಲಕ ಪಾಕಿಸ್ತಾನ ಎದುರು ಸತತ 4 ಏಕದಿನ ಪಂದ್ಯಗಳಲ್ಲಿ 4 ಶತಕ ಪೂರೈಸುವಲ್ಲಿ ಯಶಸ್ವಿಯಾದರು. ಇದರ ಜತೆಗೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ 5ನೇ ಶತಕ ಸಿಡಿಸುವಲ್ಲಿ ವಾರ್ನರ್ ಯಶಸ್ವಿಯಾದರು. ಇನ್ನು ಮರು ಎಸೆತದಲ್ಲೇ ಮಿಚೆಲ್ ಮಾರ್ಷ್ ಕೂಡಾ ಶತಕ ಪೂರೈಸುವಲ್ಲಿ ಯಶಸ್ವಿಯಾದರು.

Warner and Marsh Powerful century helps Australia set 368 runs target to Pakistan in Bengaluru kvn
Author
First Published Oct 20, 2023, 6:02 PM IST

ಬೆಂಗಳೂರು(ಅ.20): ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ಗಳಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಅಕ್ಷರಶಃ ಚಿನ್ನಸ್ವಾಮಿ ಮೈದಾನದಲ್ಲಿ ಪಾಕಿಸ್ತಾನ ಬೌಲರ್‌ಗಳ ಚೆಂಡಾಡಿದ್ದಾರೆ. ವಾರ್ನರ್‌-ಮಾರ್ಷ್ ಸಿಡಿಲಬ್ಬರದ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 367 ರನ್ ಬಾರಿಸಿದ್ದು, ಪಾಕಿಸ್ತಾನಕ್ಕೆ ಕಠಿಣ ಗುರಿ ನೀಡಿದೆ.

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ನಿರೀಕ್ಷೆಯಂತೆಯೇ ರನ್ ಮಳೆಯೇ ಹರಿದಿದೆ. ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮೊದಲು ಬೌಲಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡರು. ಆದರೆ ಮೊದಲು ಬ್ಯಾಟಿಂಗ್ ಮಾಡಲಿಳಿದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಜೋಡಿ ಮೊದಲ ಓವರ್‌ನಿಂದಲೇ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಪಾಕ್ ನಾಯಕನ ನಿರ್ಧಾರವನ್ನು ತಲೆಕೆಳಗೆ ಮಾಡುವಂತೆ ಮಾಡುವ ಮುನ್ಸೂಚನೆ ನೀಡಿದರು. 

ಬರ್ತ್‌ಡೇ ಬಾಯ್ ಮಿಚೆಲ್ ಮಾರ್ಷ್‌ ಹಾಗೂ ಡೇವಿಡ್‌ ವಾರ್ನರ್, ಪಾಕಿಸ್ತಾನದ ಎಲ್ಲಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಡೇವಿಡ್ ವಾರ್ನರ್ ಕೇವಲ 85 ಎಸೆತಗಳನ್ನು ಎದುರಿಸಿ ಶತಕ ಪೂರೈಸುವಲ್ಲಿ ಯಶಸ್ವಿಯಾದರು. ಈ ಮೂಲಕ ಪಾಕಿಸ್ತಾನ ಎದುರು ಸತತ 4 ಏಕದಿನ ಪಂದ್ಯಗಳಲ್ಲಿ 4 ಶತಕ ಪೂರೈಸುವಲ್ಲಿ ಯಶಸ್ವಿಯಾದರು. ಇದರ ಜತೆಗೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ 5ನೇ ಶತಕ ಸಿಡಿಸುವಲ್ಲಿ ವಾರ್ನರ್ ಯಶಸ್ವಿಯಾದರು. ಇನ್ನು ಮರು ಎಸೆತದಲ್ಲೇ ಮಿಚೆಲ್ ಮಾರ್ಷ್ ಕೂಡಾ ಶತಕ ಪೂರೈಸುವಲ್ಲಿ ಯಶಸ್ವಿಯಾದರು.

ವಿರಾಟ್ ಕೊಹ್ಲಿ ಸ್ವಾರ್ಥಿ ನಾ? ಶತಕದ ಹಿಂದಿನ ಸೀಕ್ರೇಟ್ ಬಿಚ್ಚಿಟ್ಟ ಕನ್ನಡಿಗ ಕೆ ಎಲ್ ರಾಹುಲ್..!

ಮೊದಲ ವಿಕೆಟ್‌ಗೆ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಜೋಡಿಯು 33.5 ಓವರ್‌ಗಳನ್ನಾಡಿ 259 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಶಾಹೀನ್ ಅಫ್ರಿದಿ ಯಶಸ್ವಿಯಾದರು. ಮಿಚೆಲ್ ಮಾರ್ಷ್ 108 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 9 ಮುಗಿಲೆತ್ತರದ ಸಿಕ್ಸರ್ ಸಹಿತ 121 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಕ್ರೀಸ್‌ಗಿಳಿದ ಗ್ಲೆನ್ ಮ್ಯಾಕ್ಸ್ ಮೊದಲ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಯತ್ನಿಸಿ ಬಾಬರ್ ಅಜಂಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಸ್ಟೀವ್ ಸ್ಮಿತ್ ಕೇವಲ 7 ರನ್ ಗಳಿಸಿ ಉಸ್ಮಾನ್ ಮಿರ್‌ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.

ಒಂದು ಕಡೆ ಕೆಲವೇ ರನ್‌ಗಳ ಅಂತರದಲ್ಲಿ ವಿಕೆಟ್ ಪತನವಾದರು ಮತ್ತೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಡೇವಿಡ್ ವಾರ್ನರ್ 124 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 9 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 163 ರನ್ ಸಿಡಿಸಿ ಹ್ಯಾರಿಸ್ ರೌಫ್‌ಗೆ ವಿಕೆಟ್ ಒಪ್ಪಿಸಿದರು.

ಡೇವಿಡ್ ವಾರ್ನರ್ ವಿಕೆಟ್ ಪತನವಾಗುತ್ತಿದ್ದಂತೆಯೇ ಆಸೀಸ್‌ ರನ್‌ ವೇಗಕ್ಕೆ ಕಡಿವಾಣ ಬಿದ್ದಿತು. 43 ಓವರ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 330 ರನ್ ಗಳಿಸಿತ್ತು. ಇದಾದ ಬಳಿಕ ಕೊನೆಯ 7 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 37 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ ಆಸ್ಟ್ರೇಲಿಯಾ 400 ರನ್ ಗಡಿ ದಾಟಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇನಿಂಗ್ಸ್‌ನ ಕೊನೆಯಲ್ಲಿ ಪಾಕಿಸ್ತಾನ ಬೌಲರ್‌ಗಳು ಭರ್ಜರಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು.
 

Follow Us:
Download App:
  • android
  • ios