ಸ್ಪಿನ್ನರ್‌ಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದ್ದ ಹೈದ್ರಾಬಾದ್‌ನ ಟೆಸ್ಟ್‌ಲ್ಲಿ ಭಾರತವನ್ನು 28 ರನ್‌ಗಳಿಂದ ಸೋಲಿಸಿದ್ದ ಇಂಗ್ಲೆಂಡ್‌ 1-0 ಮುನ್ನಡೆಯಲ್ಲಿದೆ. ವಿಶಾಖಪಟ್ಟಣಂ ಪಿಚ್‌ ಕೂಡಾ ಸ್ಪಿನ್ನರ್‌ಗಳಿಗೆ ಹೆಚ್ಚು ನೀಡುವ ಸಾಧ್ಯತೆಯಿದ್ದು, ಉಭಯ ತಂಡಗಳ ಸ್ಪಿನ್ನರ್‌ಗಳೇ ಮತ್ತೆ ಮೇಲುಗೈ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ.

ವಿಶಾಖಪಟ್ಟಣಂ(ಫೆ.01): ಭಾರತದ ಸ್ಪಿನ್‌ ಬಾಲ್‌ ಮತ್ತು ಇಂಗ್ಲೆಂಡ್‌ನ ಬಾಜ್‌ಬಾಲ್‌ ನಡುವಿನ ಮೊದಲ ಹಂತದ ಸೆಣಸಾಟ ಇಂಗ್ಲೆಂಡ್‌ನ ಅದ್ವಿತೀಯ ಜಯದೊಂದಿಗೆ ಅಂತ್ಯಗೊಂಡಿತ್ತು. ಈಗ ಉಭಯ ತಂಡಗಳ ನಡುವಿನ 2ನೇ ಸುತ್ತಿನ ಕದನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇತ್ತಂಡಗಳ ನಡುವಿನ 5 ಟೆಸ್ಟ್‌ಗಳ ಸರಣಿಯ 2ನೇ ಪಂದ್ಯ ಶುಕ್ರವಾರದಿಂದ ವಿಶಾಖಪಟ್ಟಣಂ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿ ಸರಣಿ ಸಮಬಲಗೊಳಿಸಲು ಭಾರತ ಕಾಯುತ್ತಿದ್ದರೆ, ಭಾರತವನ್ನು ಅವರದೇ ಮಣ್ಣಲ್ಲಿ ಸೋಲಿಸಿ ಮತ್ತೊಂದು ಜಯದೊಂದಿಗೆ ಸರಣಿ ಮುನ್ನಡೆ ಪಡೆಯುವ ಗುರಿ ಇಂಗ್ಲೆಂಡ್‌ನದ್ದು.

ಸ್ಪಿನ್ನರ್‌ಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದ್ದ ಹೈದ್ರಾಬಾದ್‌ನ ಟೆಸ್ಟ್‌ಲ್ಲಿ ಭಾರತವನ್ನು 28 ರನ್‌ಗಳಿಂದ ಸೋಲಿಸಿದ್ದ ಇಂಗ್ಲೆಂಡ್‌ 1-0 ಮುನ್ನಡೆಯಲ್ಲಿದೆ. ವಿಶಾಖಪಟ್ಟಣಂ ಪಿಚ್‌ ಕೂಡಾ ಸ್ಪಿನ್ನರ್‌ಗಳಿಗೆ ಹೆಚ್ಚು ನೀಡುವ ಸಾಧ್ಯತೆಯಿದ್ದು, ಉಭಯ ತಂಡಗಳ ಸ್ಪಿನ್ನರ್‌ಗಳೇ ಮತ್ತೆ ಮೇಲುಗೈ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ.

3ನೇ ಬಾರಿ ಏಷ್ಯನ್ ಕ್ರಿಕೆಟ್‌ ಸಂಸ್ಥೆಗೆ ಜಯ್ ಶಾ ಮುಖ್ಯಸ್ಥ

ಆಯ್ಕೆ ಗೊಂದಲ: ಮೊದಲ ಪಂದ್ಯ ಸೋತು ಸಂಕಷ್ಟದಲ್ಲಿರುವ ಟೀಂ ಇಂಡಿಯಾಗೆ 2ನೇ ಟೆಸ್ಟ್‌ಗೂ ಮುನ್ನ ಆಯ್ಕೆ ಗೊಂದಲ ಶುರುವಾಗಿದೆ. ಒಂದೆಡೆ ಕೆಲ ಆಟಗಾರರು ಲಯದಲ್ಲಿ ಇಲ್ಲ. ಮತ್ತೊಂದೆಡೆ ಕೆ.ಎಲ್‌.ರಾಹುಲ್‌, ರವೀಂದ್ರ ಜಡೇಜಾ ಈ ಪಂದ್ಯಕ್ಕೆ ಲಭ್ಯರಿಲ್ಲ. ರಾಹುಲ್‌ ಬದಲು ಮಧ್ಯಮ ಕ್ರಮಾಂಕದಲ್ಲಿ ರಜತ್‌ ಪಾಟೀದಾರ್‌, ಜಡೇಜಾ ಬದಲು ಕುಲ್ದೀಪ್‌ ಯಾದವ್‌ ಆಡುವ ಸಾಧ್ಯತೆ ಹೆಚ್ಚು.

ಇನ್ನು ದೇಸಿ ಕ್ರಿಕೆಟ್‌ನಲ್ಲಿ ಅಬ್ಬರಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಸರ್ಫರಾಜ್‌ ಖಾನ್‌, ಲಯದಲ್ಲಿರದ ಶುಭ್‌ಮನ್‌ ಗಿಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ಬದಲು ತಂಡದಲ್ಲಿ ಸ್ಥಾನ ಗಿಟ್ಟಿಸಿದರೂ ಅಚ್ಚರಿಯಿಲ್ಲ. ಅಥವಾ ರಾಹುಲ್‌ರ ಜಾಗದಲ್ಲೂ ಸರ್ಫರಾಜ್‌ರನ್ನು ಆಡಿಸಲೂ ಬಹುದು.

ಇನ್ನು ವಿಶಾಖಪಟ್ಟಣಂ ಪಿಚ್‌ ಮತ್ತೆ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇರುವುದರಿಂದ ಭಾರತ ಈ ಪಂದ್ಯದಲ್ಲಿ ಏಕೈಕ ವೇಗಿಯೊಂದಿಗೆ ಕಣಕ್ಕಿಳಿಯಬಹುದು ಎನ್ನಲಾಗುತ್ತದೆ. ಹಾಗಾದಲ್ಲಿ ಮೊಹಮದ್‌ ಸಿರಾಜ್‌ ಜಾಗಕ್ಕೆ ವಾಷಿಂಗ್ಟನ್‌ ಸುಂದರ್‌ ಆಯ್ಕೆಯಾಗುವ ಸಾಧ್ಯತೆ ಹೆಚ್ಚು. ಎಡಗೈ ಸ್ಪಿನ್ನರ್‌ ಸೌರಭ್‌ ಕುಮಾರ್‌ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ವಿರಾಟ್ ಕೊಹ್ಲಿ ಮೊದಲೆರಡು ಟೆಸ್ಟ್‌ನಿಂದ ಹೊರಗುಳಿದಿದ್ದೇಕೆ..? ಕೊನೆಗೂ ಬಯಲಾಯ್ತು ಸತ್ಯ..!

ಇಂಗ್ಲೆಂಡ್‌ನಲ್ಲಿ ನಾಲ್ವರು ಸ್ಪಿನ್ನರ್ಸ್‌?: ಆರಂಭಿಕ ಪಂದ್ಯದಲ್ಲಿ ಓರ್ವ ವೇಗಿ, ಮೂವರು ತಜ್ಞ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿ ಯಶಸ್ಸು ಸಾಧಿಸಿದ್ದ ಇಂಗ್ಲೆಂಡ್‌ ಈ ಪಂದ್ಯದಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಆಡಿಸಿದರೂ ಅಚ್ಚರಿಯಿಲ್ಲ. ಈ ಬಗ್ಗೆ ಈಗಾಗಲೇ ಇಂಗ್ಲೆಂಡ್‌ ಕೋಚ್‌ ಬ್ರೆಂಡನ್‌ ಮೆಕ್ಕಲಂ ಸುಳಿವು ನೀಡಿದ್ದು, ಅಗತ್ಯವಿದ್ದರೆ ನಾಲ್ವರು ಸ್ಪಿನ್ನರ್‌ಗಳನ್ನು ಆಡಿಸಲೂ ಹಿಂದೇಟು ಹಾಕುವುದಿಲ್ಲ ಎಂದಿದ್ದಾರೆ. ಆರಂಭಿಕ ಪಂದ್ಯದಲ್ಲಿ ಗಾಯಗೊಂಡಿರುವ ಅನುಭವಿ ಸ್ಪಿನ್ನರ್‌ ಜ್ಯಾಕ್‌ ಲೀಚ್‌ ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದ್ದು, ಯುವ ಸ್ಪಿನ್ನರ್‌ ಶೋಯೆಬ್‌ ಬಶೀರ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ಜೈಸ್ವಾಲ್‌, ಶುಭ್‌ಮನ್‌, ಶ್ರೇಯಸ್‌, ರಜತ್‌/ಸರ್ಫರಾಜ್‌, ಭರತ್‌, ಸುಂದರ್‌, ಅಕ್ಷರ್‌, ಅಶ್ವಿನ್‌, ಬೂಮ್ರಾ, ಕುಲ್ದೀಪ್‌

ಇಂಗ್ಲೆಂಡ್: ಜ್ಯಾಕ್‌ ಕ್ರಾವ್ಲಿ, ಡಕೆಟ್‌, ಓಲಿ ಪೋಪ್‌, ರೂಟ್‌, ಬೇರ್‌ಸ್ಟೋವ್‌, ಸ್ಟೋಕ್ಸ್‌, ಬೆನ್‌ ಫೋಕ್ಸ್‌, ರಿಹಾನ್‌, ಹಾರ್ಟ್ಲೆ, ಮಾರ್ಕ್‌ ವುಡ್‌, ಬಶೀರ್‌.

ಪಿಚ್‌ ರಿಪೋರ್ಟ್

ವಿಶಾಖಪಟ್ಟಣಂ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ಹರಿದು ಬರುವ ನಿರೀಕ್ಷೆಯಿದೆ. ಇಲ್ಲಿ ಸ್ಪಿನ್ನರ್‌ಗಳು ಕೂಡಾ ಹೆಚ್ಚಿನ ಪ್ರಾಬಲ್ಯ ಸಾಧಿಸಿದ ಉದಾಹರಣೆ ಇದೆ. ಪಂದ್ಯ ಸಾಗಿದಂತೆ ಪಿಚ್‌ ಹೆಚ್ಚಿನ ತಿರುವು ಪಡೆಯಲಿರುವ ಕಾರಣ ಸ್ಪಿನ್ನರ್‌ಗಳ ಪ್ರದರ್ಶನ ನಿರ್ಣಾಯಕ ಎನಿಸಿಕೊಳ್ಳಬಹುದು.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್‌ 18.

ಲೀಚ್‌ ಬದಲು ಬಶೀರ್‌?

ಇಂಗ್ಲೆಂಡ್‌ನ ಪ್ರಮುಖ ಸ್ಪಿನ್ನರ್‌ ಜ್ಯಾಕ್‌ ಲೀಚ್‌ ಆರಂಭಿಕ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಅವರು ಬುಧವಾರ ತಂಡದ ಜೊತೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿಲ್ಲ. ಅವರು 2ನೇ ಟೆಸ್ಟ್‌ಗೆ ಅಲಭ್ಯರಾಗುವ ಸಾಧ್ಯತೆಯಿದೆ. ಹೀಗಾಗಿ ಅವರ ಬದಲು 20ರ ಹರೆಯದ ಸ್ಪಿನ್ನರ್‌ ಶೋಯೆಬ್‌ ಬಶೀರ್‌ ಟೆಸ್ಟ್‌ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಆಡಿರುವ ಎರಡೂ ಪಂದ್ಯ ಗೆದ್ದಿರುವ ಟೀಂ ಇಂಡಿಯಾ

ಭಾರತ ವಿಶಾಖಪಟ್ಟಣಂ ಕ್ರೀಡಾಂಗಣದಲ್ಲಿ 2 ಟೆಸ್ಟ್‌ ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಗೆಲುವು ಸಾಧಿಸಿದೆ. 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 246 ರನ್‌ಗಳ ಬೃಹತ್‌ ಜಯ ದಾಖಲಿಸಿತ್ತು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ 2019ರಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಭಾರತ 203 ರನ್‌ಗಳಿಂದ ಗೆದ್ದು ಬೀಗಿತ್ತು.