'ಪೂಜಾರ ರೀತಿ ಆಡುತ್ತಿದ್ದ ಬೇರ್‌ಸ್ಟೋವ್‌ರನ್ನು, ಕೊಹ್ಲಿ ಪಂತ್‌ರನ್ನಾಗಿ ಮಾಡಿದ್ರು..!'
* ಭಾರತ ಎದುರು ಸ್ಪೋಟಕ ಶತಕ ಸಿಡಿಸಿದ ಜಾನಿ ಬೇರ್‌ಸ್ಟೋವ್
* ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ 3 ಶತಕ ಚಚ್ಚಿದ ಇಂಗ್ಲೆಂಡ್ ಬ್ಯಾಟರ್
* ಜಾನಿ ಬೇರ್‌ಸ್ಟೋವ್ ಅವರನ್ನು ಸ್ಲೆಡ್ಜಿಂಗ್ ಮಾಡಿದ್ದ ವಿರಾಟ್ ಕೊಹ್ಲಿ
ಬರ್ಮಿಂಗ್‌ಹ್ಯಾಮ್(ಜು.04): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಎಜ್‌ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಮೂರನೇ ದಿನ ಇಂಗ್ಲೆಂಡ್ ಬ್ಯಾಟರ್ ಜಾನಿ ಬೇರ್‌ಸ್ಟೋವ್ ಅವರನ್ನು ಸ್ಲೆಡ್ಜ್ ಮಾಡಲು ಹೋಗಿ ಭಾರತ ಕೈಸುಟ್ಟುಕೊಂಡಿದೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಜಾನಿ ಬೇರ್‌ಸ್ಟೋವ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ಸ್ಪೋಟಕ ಬ್ಯಾಟಿಂಗ್ ನಡೆಸಿದ ಜಾನಿ ಬೇರ್‌ಸ್ಟೋವ್ ಆಕರ್ಷಕ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾಗೆ ಶಾಕ್ ನೀಡಿದರು. ಈ ಕುರಿತಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virender Sehwag), ಕೊಂಚ ಹಾಸ್ಯದ ಶೈಲಿಯಲ್ಲಿಯೇ ವಿರಾಟ್ ಕೊಹ್ಲಿ ಕಿವಿ ಹಿಂಡಿದ್ದಾರೆ.
ಎಜ್‌ಬಾಸ್ಟನ್ ಮೈದಾನದಲ್ಲಿ ಎರಡನೇ ದಿನದಾಟದಂತ್ಯದವರೆಗೂ ಸಾಕಷ್ಟು ರಕ್ಷಣಾತ್ಮಕ ಆಟವಾಡುತ್ತಿದ್ದ ಜಾನಿ ಬೇರ್‌ಸ್ಟೋವ್ (Jonny Bairstow), ಮೂರನೇ ದಿನದಾಟದ ಆರಂಭದಲ್ಲೇ ಬ್ಯಾಟಿಂಗ್ ಮಾಡುತ್ತಿದ್ದ ಬೇರ್‌ಸ್ಟೋವ್ ಹಾಗೂ ಫೀಲ್ಡಿಂಗ್ ನಿರತ ವಿರಾಟ್ ಕೊಹ್ಲಿ (Virat Kohli) ನಡುವೆ ತೀವ್ರ ವಾಗ್ವಾದ ನಡೆಯಿತು. ಬುಮ್ರಾ ಬೌಲಿಂಗ್ ವೇಳೆ ಕೊಹ್ಲಿ, ಬೇರ್‌ಸ್ಟೋವ್ ಮೇಲೆ ಕೋಪಗೊಂಡಿದ್ದಲ್ಲದೇ ಅವರನ್ನು ಹೆಚ್ಚು ಮಾತಾಡದೆ ಸುಮ್ಮನೆ ಬ್ಯಾಟ್ ಮಾಡುವಂತೆ ಹೇಳಿದರು. ಇದರ ಬೆನ್ನಲ್ಲೇ ಜಾನಿ ಬೇರ್‌ಸ್ಟೋಬ್, ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಸತತ ಮೂರನೇ ಟೆಸ್ಟ್ ಶತಕ ಸಿಡಿಸುವಲ್ಲಿ ಯಶಸ್ವಿಯಾದರು.
ಬರ್ಮಿಂಗ್‌ಹ್ಯಾಮ್ ಟೆಸ್ಟ್ (Birmingham Test) ಪಂದ್ಯದಲ್ಲಿ ಜಾನಿ ಬೇರ್‌ಸ್ಟೋವ್ ಒಂದು ಹಂತದಲ್ಲಿ 65 ಎಸೆತಗಳನ್ನು ಎದುರಿಸಿ ಕೇವಲ 16 ರನ್ ಗಳಿಸಿದ್ದರು. ಆದರೆ ಕೊಹ್ಲಿ ಜತೆ ಮಾತಿನ ಚಕಮಕಿಯಾದ ಬಳಿಕ ಸಿಡಿದು ನಿಂತ ಬೇರ್‌ಸ್ಟೋವ್ 140 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 106 ರನ್ ಚಚ್ಚಿದರು. ಈ ಕುರಿತಂತೆ ಟ್ವೀಟ್ ಮಾಡಿದ್ದ ವೀರೂ, ಕೊಹ್ಲಿ ಸ್ಲೆಡ್ಜಿಂಗ್ ಮಾಡಿದ್ದರಿಂದಲೇ ಜಾನಿ ಬೇರ್‌ಸ್ಟೋವ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು ಎಂದಿದ್ದಾರೆ.
ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಮಾಡುವ ಮುನ್ನ ಜಾನಿ ಬೇರ್‌ಸ್ಟೋವ್ 21ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸುತ್ತಿದ್ದರು. ಸ್ಲೆಡ್ಜಿಂಗ್ ಬಳಿಕ ಸ್ಟ್ರೈಕ್‌ರೇಟ್ 150 ಆಯಿತು. ಜಾನಿ ಬೇರ್‌ಸ್ಟೋವ್ ಪೂಜಾರ ರೀತಿ ಆಡುತ್ತಿದ್ದರು. ಕೊಹ್ಲಿ ಸುಮ್ಮನೆ ಸ್ಲೆಡ್ಜಿಂಗ್ ಮಾಡಲು ಹೋಗಿ ಬೇರ್‌ಸ್ಟೋವ್ ಅವರನ್ನು ಪಂತ್‌ರನ್ನಾಗಿ ಮಾಡಿದರು ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಬೇರ್‌ಸ್ಟೋವ್ ಹ್ಯಾಟ್ರಿಕ್ ಶತಕ: ಇಂಗ್ಲೆಂಡ್‌ನ ಜಾನಿ ಬೇರ್‌ಸ್ಟೋವ್ ಹ್ಯಾಟ್ರಿಕ್ ಶತಕ ಬಾರಿಸಿದ್ದಾರೆ. ಭಾರತ ವಿರುದ್ಧ ಆಕರ್ಷಕ ಆಟವಾಡಿದ ಅವರು ಕಳೆದ ತಿಂಗಳು ತವರಿನಲ್ಲೇ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಕೊನೆ 2 ಟೆಸ್ಟ್‌ಗಳಲ್ಲೂ ಅಮೋಘ ಶತಕ ಬಾರಿಸಿ ತಂಡದ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2022ರಲ್ಲಿ ಈಗಾಗಲೇ 5 ಶತಕಗಳೊಂದಿಗೆ 850ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ.
Eng vs Ind ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತದ್ದೇ ಮೇಲುಗೈ
ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಭಾರತ ಮೇಲುಗೈ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಜಸ್ಪ್ರೀತ್ ಬುಮ್ರಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಎದುರಿನ 5ನೇ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಇನಿಂಗ್ಸ್‌ನಲ್ಲಿ 416 ರನ್ ಕಲೆಹಾಕಿದ್ದ ಟೀಂ ಇಂಡಿಯಾ, ಜಾನಿ ಬೇರ್‌ಸ್ಟೋವ್ ಶತಕದ ಹೊರತಾಗಿಯೂ ಇಂಗ್ಲೆಂಡ್ ತಂಡವನ್ನು 284 ರನ್‌ಗಳಿಗೆ ನಿಯಂತ್ರಿಸಿದೆ. ಮೊದಲ ಇನಿಂಗ್ಸ್‌ನಲ್ಲಿ 132 ರನ್‌ಗಳ ಮುನ್ನಡೆ ಸಾಧಿಸಿದ ಭಾರತ ಕ್ರಿಕೆಟ್ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 125 ರನ್ ಬಾರಿಸಿದ್ದು, ಒಟ್ಟಾರೆ 257 ರನ್‌ಗಳ ಮುನ್ನಡೆ ಸಾಧಿಸಿದೆ. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅಜೇಯ 50 ರನ್ ಹಾಗೂ ಮೊದಲ ಇನಿಂಗ್ಸ್‌ನಲ್ಲಿ ಸ್ಪೋಟಕ ಶತಕ ಸಿಡಿಸಿದ್ದ ರಿಷಭ್ ಪಂತ್ 30 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.