ಶತಕ ಸಿಡಿಸಿದ ಬೆನ್ನಲ್ಲೇ ಮೈದಾನದಿಂದಲೇ ಮಡದಿಗೆ ವಿಡಿಯೋ ಕಾಲ್ ಮಾಡಿದ ವಿರಾಟ್ ಕೊಹ್ಲಿ..! ವಿಡಿಯೋ ವೈರಲ್
ಸನ್‌ರೈಸರ್ಸ್ ಹೈದರಬಾದ್ ಎದುರು ಶತಕ ಚಚ್ಚಿದ ವಿರಾಟ್ ಕೊಹ್ಲಿ
ಆರೆಂಜ್ ಆರ್ಮಿ ಎದುರು 8 ವಿಕೆಟ್ ಜಯ ಸಾಧಿಸಿದ ಆರ್‌ಸಿಬಿ
ಗೆಲುವಿನ ಬೆನ್ನಲ್ಲೇ ಪತ್ನಿಗೆ ವಿಡಿಯೋ ಕಾಲ್ ಮಾಡಿದ ವಿರಾಟ್ ಕೊಹ್ಲಿ
ಹೈದರಾಬಾದ್(ಮೇ.19): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಆಕರ್ಷಕ ಶತಕದ ಜತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 8 ವಿಕೆಟ್ ಜಯ ಸಾಧಿಸಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಈ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಹಾಗೂ ಒಟ್ಟಾರೆ ಆರನೇ ಐಪಿಎಲ್ ಶತಕ ಸಿಡಿಸಿ ಆರ್‌ಬಿಸಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಗೆಲ್ಲಲೇಬೇಕಾಗಿದ್ದ ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 62 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಸನ್‌ರೈಸರ್ಸ್ ಹೈದರಾಬಾದ್ ಎದುರು ಆರ್‌ಸಿಬಿ ತಂಡವು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ 34 ವರ್ಷದ ವಿರಾಟ್ ಕೊಹ್ಲಿ, ಮೈದಾನದಿಂದಲೇ ಮಡದಿ ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್ ಮಾಡಿ ಸಂತಸ ಹಂಚಿಕೊಂಡರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಕೆಆರ್ ಎದುರು ಮೋಹನ್ ಬಗಾನ್ ಜೆರ್ಸಿ ತೊಡಲಿರುವ ಜೈಂಟ್ಸ್! ಯಾಕೆ ಹೀಗೆ?
ಇನ್ನು ಅನುಷ್ಕಾ ಶರ್ಮಾ ಕೂಡಾ ಪತಿಯ ಭರ್ಜರಿ ಇನಿಂಗ್ಸ್ ಅನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಅನುಷ್ಕಾ ಶರ್ಮಾ, ವಿರಾಟ್ ಅವರ ಫೋಟೋ ಜತೆಗೆ ಎಂಥ ಇನಿಂಗ್ಸ್ ಇದು ಎಂದು ಗುಣಗಾನ ಮಾಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿತ್ತು. ವಿಕೆಟ್ ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಆಕರ್ಷಕ ಶತಕ ಸಿಡಿಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಸವಾಲಿನ ಮೊತ್ತ ಬೆನ್ನತ್ತಿದ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ ದಾಖಲೆಯ 172 ರನ್ ಜತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಐಪಿಎಲ್‌ನಲ್ಲಿ ಕೊಹ್ಲಿ 6ನೇ ಶತಕ: ಗೇಲ್ ದಾಖಲೆ ಸಮ!
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 6ನೇ ಶತಕ ದಾಖಲಿಸಿದ್ದು, ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಜೊತೆ ಜಂಟಿ ಮೊದಲ ಸ್ಥಾನ ಪಡೆದಿದ್ದಾರೆ. 2016ರ ಆವೃತ್ತಿಯಲ್ಲಿ 4 ಶತಕ ಸಿಡಿಸಿದ್ದ ವಿರಾಟ್, 2019ರಲ್ಲಿ 1 ಶತಕ ಬಾರಿಸಿದ್ದರು. ಇದೀಗ 1490 ದಿನಗಳ ಬಳಿಕ ಐಪಿಎಲ್‌ನಲ್ಲಿ ಮತ್ತೊಂದು ಶತಕ ದಾಖಲಿಸಿದ್ದಾರೆ.
ಟಿ20: ಕೊಹ್ಲಿ7 ಶತಕ!
ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಐಪಿಎಲ್‌ನಲ್ಲಿ 6, ಅಂ.ರಾ.ಟಿ20ಯಲ್ಲಿ 1 ಶತಕ ಬಾರಿಸಿದ್ದಾರೆ. ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ತಲಾ 6 ಶತಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
800+ ರನ್ ಜೊತೆಯಾಟ: ಕೊಹ್ಲಿ-ಫಾಫ್ ದಾಖಲೆ!
ಐಪಿಎಲ್ ಆವೃತ್ತಿಯೊಂದರಲ್ಲಿ ಮೊದಲ ವಿಕೆಟ್‌ಗೆ 800ಕ್ಕೂ ಹೆಚ್ಚು ರನ್ ಜೊತೆಯಾಟವಾಡಿದ ಮೊದಲ ಜೋಡಿ ಎನ್ನುವ ದಾಖಲೆಯನ್ನು ಕೊಹ್ಲಿ ಹಾಗೂ ಡು ಪ್ಲೆಸಿ ಬರೆದಿದ್ದಾರೆ. ಇವರಿಬ್ಬರು 13 ಪಂದ್ಯಗಳಲ್ಲಿ 871 ರನ್ ಕಲೆಹಾಕಿದ್ದು, ಲೀಗ್ ಹಂತದಲ್ಲಿ ಇನ್ನೂ ಒಂದು ಹಾಗೂ ಪ್ಲೇ-ಆಫ್‌ಗೇರಿದರೆ ಕನಿಷ್ಠ ಇನ್ನೊಂದು ಪಂದ್ಯ ಸಿಗುವ ಕಾರಣ 1000 ರನ್ ದಾಟಲು ಅವಕಾಶವಿದೆ. 2019ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ವಾರ್ನರ್ ಹಾಗೂ ಬೇರ್‌ಸ್ಟೋವ್ ಮೊದಲ ವಿಕೆಟ್‌ಗೆ 791 ರನ್ ಕಲೆಹಾಕಿದ್ದರು. ಆ ದಾಖಲೆಯನ್ನು ಕೊಹ್ಲಿ-ಫಾಫ್ ಮುರಿದಿದ್ದಾರೆ.