ವಿರಾಟ್ ಆರೋಗ್ಯದ ಬಗ್ಗೆ ಬಂತು ಬಿಗ್ ಅಪ್‌ಡೇಟ್... ಇಂಗ್ಲೆಂಡ್ ವಿರುದ್ಧ ಮುಂದಿನ ಟೆಸ್ಟ್ ಆಡ್ತಾರಾ ಕಿಂಗ್ ಕೊಹ್ಲಿ?
ವೈಜಾಗ್ ಟೆಸ್ಟ್‌ಅನ್ನು ತಪ್ಪಿಸಿಕೊಂಡಿರುವ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದು, ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ಗೆ ಲಭ್ಯರಾಗುವ ಸಾಧ್ಯತೆ ಇದೆ.
ನವದೆಹಲಿ (ಫೆ.7): ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಅಲಭ್ಯತೆ ಮುಂದುವರಿಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಹಾಗೂ ರಾಂಚಿಯಲ್ಲಿ ನಡೆಯಲಿರುವ 4ನೇ ಟೆಸ್ಟ್‌ಗೂ ಅಲಭ್ಯರಾಗುವ ಸಾಧ್ಯತೆ ಇದೆ. ಅದಲ್ಲದೆ, ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯಕ್ಕೂ ವಿರಾಟ್ ಕೊಹ್ಲಿ ಲಭ್ಯತೆಯ ಬಗ್ಗೆ ಗ್ಯಾರಂಟಿಯಿಲ್ಲ ಎನ್ನಲಾಗಿದೆ. ಮಾರ್ಚ್ 6 ರಂದು ಈ ಪಂದ್ಯ ನಡೆಯಲಿದೆ. ಇನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಮುಂದಿನ ಮೂರು ಪಂದ್ಯಗಳಿಗಾಗಿ ತಂಡವನ್ನು ಆಯ್ಕೆ ಮಾಡಲು ಈ ವಾರ ಸಭೆ ಸೇರಲಿದೆ. ಜನವರಿ 22 ರಂದು ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಕ್ಕೆ ಮೂರು ದಿನಗಳಿರುವಾಗ "ವೈಯಕ್ತಿಕ ಕಾರಣಗಳಿಗಾಗಿ" ಕೊಹ್ಲಿ ಮೊದಲ ಎರಡು ಟೆಸ್ಟ್‌ಗಳಿಂದ ಹಿಂದೆ ಸರಿದಿದ್ದಾರೆ ಎಂದು ಬಿಸಿಸಿಐ ಘೋಷಿಸಿತು. ಅದೇ ದಿನ ತಂಡವನ್ನು ಕೂಡಿಕೊಳ್ಳಲು ಕೊಹ್ಲಿ ಹೈದರಾಬಾದ್‌ಗೆ ಬಂದಿದ್ದರು. ಆದರೆ, ಅದೇ ದಿನ ಅವರು ವಾಪಾಸ್ ಮುಂಬೈಗೆ ತೆರಳಿದ್ದರು. ಆ ಬಳಿಕ ಕೊಹ್ಲಿಯ ಲಭ್ಯಯ ಬಗ್ಗೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ನಾಯಕ ರೋಹಿತ್ ಶರ್ಮ, ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆ ಸಮಿತಿಯ ಜೊತೆ ವಿರಾಟ್ ಕೊಹ್ಲಿ ಮಾತನಾಡಿದ್ದು, ದೇಶವನ್ನು ಪ್ರತಿನಿಧಿಸುವುದೇ ತಮ್ಮ ಮೊದಲ ಆದ್ಯತೆ ಎಂದಿದ್ದಾರೆ. ಆದರೆ, ಕೆಲವು ವೈಯಕ್ತಿಕ ಕಾರಣಗಳಿಗಾಗಿ ತಾವು ಸದ್ಯಕ್ಕೆ ಲಭ್ಯರಿಲ್ಲ ಎಂದು ತಿಳಿಸಿದ್ದಾಗಿ ಬಿಸಿಸಿಐ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿತ್ತು.
ರಾಹುಲ್-ಜಡೇಜಾ ಫಿಟ್: ಇನ್ನು 2ನೇ ಟೆಸ್ಟ್ ಪಂದ್ಯ ತಪ್ಪಿಸಿಕೊಂಡಿದ್ದ ಆಟಗಾರರ ಪೈಕಿ ಮೊಹಮದ್ ಸಿರಾಜ್ ಫಿಟ್ ಆಗಿದ್ದು ತಂಡಕ್ಕೆ ಮರಳುವ ಹಾದಿಯಲ್ಲಿದ್ದಾರೆ. ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಕೂಡ ಬೆಂಗಳೂರಿನಲ್ಲಿದ್ದು ಇಬ್ಬರೂ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ. ರಾಜ್‌ಕೋಟ್ ಟೆಸ್ಟ್‌ಗೆ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಇವರಿಬ್ಬರ ಫಿಟ್‌ನೆಸ್ ಕುರಿತು ಎನ್‌ಸಿಎ ಫಿಸಿಯೋ ಅವರಿಂದ ಅಂತಿಮ ರಿಪೋರ್ಟ್‌ಅನ್ನು ಬಿಸಿಸಿಐ ಕೇಳಿದೆ. ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೆ ಇನ್ನೂ ವಾರಗಳು ಇರುವ ಕಾರಣ, ರಾಹುಲ್ ಹಾಗೂ ಜಡೇಜಾ ಅವರ ಪೈಕಿ ಕನಿಷ್ಠ ಒಬ್ಬರಾದರೂ ತಂಡದಲ್ಲಿ ಸ್ಥಾನ ಪಡೆಯಬಹುದು ಎನ್ನಲಾಗಿದೆ.
ಮೊದಲ ಟೆಸ್ಟ್‌ನಲ್ಲಿ ರಾಹುಲ್ ಹಾಗೂ ಜಡೇಜಾ ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್ಸ್ ಎನಿಸಿದ್ದರು. ಇಬ್ಬರೂ ಕೂಡ ಶತಕವನ್ನು ತಪ್ಪಿಸಿಕೊಂಡಿದ್ದರು. ಕೊಹ್ಲಿಯಿಂದ ಖಾಲಿಯಾದ ನಾಲ್ಕನೇ ಕ್ರಮಾಂಕವನ್ನು ರಾಹುಲ್ ತುಂಬಿದ್ದರು.
ICC TEST RANKINGS: ನಂ.1 ಸ್ಥಾನಕ್ಕೇರಿದ ಜಸ್ಪ್ರೀತ್ ಬುಮ್ರಾ, ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ ವೇಗಿ
ಇನ್ನು ವರ್ಕ್‌ಲೋಡ್ ಕಾರಣಕ್ಕಾಗಿ ವಿಶ್ರಾಂತಿ ಪಡೆದಿದ್ದ ಮೊಹಮದ್ ಸಿರಾಜ್ ತಂಡಕ್ಕೆ ವಾಪಾಸಾಗುವ ಹಾದಿಯಲ್ಲಿದ್ದಾರೆ. ಜಸ್‌ಪ್ರೀತ್ ಬುಮ್ರಾ ಬೌಲಿಂಗ್ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವ ಭಾರತಕ್ಕೆ ಸಿರಾಜ್ ಅವರ ಮರಳುವಿಕೆ ಇನ್ನಷ್ಟು ಶಕ್ತಿ ತುಂಬಲಿದೆ.
8 ಟೆಸ್ಟ್, 7 ಸಲ ಐದಕ್ಕೂ ಅಧಿಕ ವಿಕೆಟ್..! ಲಂಕಾದಲ್ಲಿ ಮತ್ತೊಬ್ಬ ಸೂರ್ಯನ ಉದಯ..!