Asianet Suvarna News Asianet Suvarna News

T20 World Cup: ಟೀಂ ಇಂಡಿಯಾ ವಿಶ್ವಕಪ್‌ ಟ್ರೋಫಿ ಗೆಲ್ಲುವ ಫೇವರಿಟ್ ಎಂದ ಆಸೀಸ್‌ ಕ್ರಿಕೆಟಿಗ..!

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ಭರ್ಜರಿ ಚಾಲನೆ

* ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿದೆ ಎಂದ ಸ್ಟೀವ್‌ ಸ್ಮಿತ್

* ಅಭ್ಯಾಸ ಪಂದ್ಯದಲ್ಲಿ ಆಸೀಸ್ ವಿರುದ್ದ ಗೆಲುವು ಸಾಧಿಸಿದ್ದ ಭಾರತ

Virat Kohli Led Team India favourites to win T20 World Cup Says Steve Smith kvn
Author
Bengaluru, First Published Oct 22, 2021, 1:26 PM IST
  • Facebook
  • Twitter
  • Whatsapp

ಮೆಲ್ಬರ್ನ್(ಅ.22)‌: ವಿರಾಟ್‌ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ (Team India) ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗುವ ಫೇವರಿಟ್‌ ಎಂದು ಆಸ್ಪ್ರೇಲಿಯಾದ ತಾರಾ ಆಟಗಾರ ಸ್ಟೀವ್‌ ಸ್ಮಿತ್‌ (Steve Smith) ಗುರುವಾರ ಅಭಿಪ್ರಾಯಪಟ್ಟಿದ್ದಾರೆ. 

‘ಭಾರತ ಶ್ರೇಷ್ಠ ತಂಡ. ತಂಡ ಎಲ್ಲ ವಿಭಾಗಗಳಲ್ಲಿ ಉತ್ತಮವಾಗಿದೆ ಹಾಗೂ ತಂಡದಲ್ಲಿ ಅತ್ಯುತ್ತಮ ಮ್ಯಾಚ್‌ ಫಿನಿಶರ್‌ಗಳಿದ್ದಾರೆ. ಅವರು ಕೆಲ ತಿಂಗಳುಗಳಿಂದ ಐಪಿಎಲ್‌ನಲ್ಲಿ ಇದೇ ವಾತಾವರಣದಲ್ಲಿ ಆಡಿದ್ದು, ವಿಶ್ವಕಪ್‌ನಲ್ಲೂ ಅದರ ಅನುಭವವನ್ನು ಬಳಸಿಕೊಳ್ಳಲಿದ್ದಾರೆ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಟೀಂ ಇಂಡಿಯಾ ಎರಡನೇ ಅಭ್ಯಾಸ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಿತ್ತು. ಆಸೀಸ್ ವಿರುದ್ದದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು 8 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ(60), ಕೆ.ಎಲ್. ರಾಹುಲ್ (39) ಹಾಗೂ ಸೂರ್ಯಕುಮಾರ್ ಯಾದವ್ (38) ಆಕರ್ಷಕ ಬ್ಯಾಟಿಂಗ್‌ ನಡೆಸುವ ಮೂಲಕ ಗಮನ ಸೆಳೆದಿದ್ದರು. ಆಸ್ಟ್ರೇಲಿಯಾ ವಿರುದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್‌ ಮಾಡಲಿಳಿಯಲಿಲ್ಲವಾದರೂ, ಎರಡು ಓವರ್‌ ಬೌಲಿಂಗ್ ಮಾಡಿ ಮಿಂಚಿದರು.  

T20 World Cup ಇಂಡೋ-ಪಾಕ್‌ ಪಂದ್ಯದ ಜಾಹೀರಾತು: 10 ಸೆಕೆಂಡ್‌ಗೆ 30 ಲಕ್ಷ ರೂ..!

ಟೀಂ ಇಂಡಿಯಾ ಆಟಗಾರರು ಕಳೆದ ಕೆಲವು ತಿಂಗಳುಗಳಿಂದಲೂ ಇದೇ ವಾತಾವರಣದಲ್ಲಿ ಆಡುತ್ತಿದ್ದು, ಇಲ್ಲಿನ ಹವಾಗುಣವನ್ನು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಅದ್ಭುತ ಫಾರ್ಮ್‌ನಲ್ಲಿರುವ ಟೀಂ ಇಂಡಿಯಾ ಈ ಬಾರಿಯ ಟಿ20 ವಿಶ್ವಕಪ್‌ (T20 World Cup) ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದೆ ಎಂದು ಸ್ಟೀವ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ. 

ಭಾರತ ವಿರುದ್ದ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್ 48 ಎಸೆತಗಳಲ್ಲಿ 57 ರನ್‌ ಬಾರಿಸಿ ಗಮನ ಸೆಳೆದಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಕೇವಲ 2 ಪಂದ್ಯಗಳನ್ನಷ್ಟೇ ಆಡಿದ್ದ ಸ್ಟೀವ್ ಸ್ಮಿತ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಸ್ಟೀವ್ ಸ್ಮಿತ್ ಮೊಣಕೈ ಗಾಯದ ಸಮಸ್ಯೆಯಿಂದ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ಪ್ರವಾಸದಿಂದ ಹಿಂದೆ ಸರಿದಿದ್ದರು. ಸದ್ಯ ಆ ಸಮಸ್ಯೆಯಿಂದ ಗುಣಮುಖವಾಗಿರುವುದಾಗಿ ತಿಳಿಸಿದ್ದಾರೆ.

2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಪಾಕಿಸ್ತಾನ ವಿರುದ್ದ ನಡೆದ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ದಾಖಲಿಸುವ ಮೂಲಕ ಚಾರಿತ್ರ್ಯಿಕ ಸಾಧನೆ ಮಾಡಿತ್ತು. ಇದಾದ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಬಿಸಿಸಿಐ ಈ ಟಿ20 ವಿಶ್ವಕಪ್ ಟೂರ್ನಿಯ ಮಟ್ಟಿಗೆ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರನ್ನು ಟೀಂ ಇಂಡಿಯಾ ಮೆಂಟರ್‌ ಆಗಿ ನೇಮಿಸಿದೆ. ಧೋನಿ ತಮ್ಮ ಮೆಂಟರ್ ಸೇವೆಗೆ ಬಿಸಿಸಿಐನಿಂದ ಒಂದು ರುಫಾಯಿ ಸಂಭಾವನೆಯನ್ನು ಪಡೆದಿಲ್ಲ. 

T20 World Cup: ಈ 4 ತಂಡಗಳು ಸೆಮಿಫೈನಲ್‌ಗೇರಲಿವೆ ಎಂದ ಬ್ರಾಡ್ ಹಾಗ್..!

ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli), ಕೆ.ಎಲ್ ರಾಹುಲ್‌ (KL Rahul), ರಿಷಭ್ ಪಂತ್ (Rishabh Pant) ಸೇರಿದಂತೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah), ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಕೂಡಾ ಉತ್ತಮ ಲಯದಲ್ಲಿದ್ದು, ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಅಕ್ಟೋಬರ್ 24ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಕೆಲದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಬಹುದು ಎಂದು ಭವಿಷ್ಯ ನುಡಿದಿದ್ದರು. 

 

Follow Us:
Download App:
  • android
  • ios