* ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ ಪಂದ್ಯ ಆರಂಭಕ್ಕೆ ಕ್ಷಣಗಣನೆ* ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಆರಂಭ* ಇಂಗ್ಲೆಂಡ್‌ ನೆಲದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಕಠಿಣ ಸವಾಲು

ನಾಟಿಂಗ್‌ಹ್ಯಾಮ್‌(ಆ.04): ವಿರಾಟ್‌ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾದ ಅತ್ಯಂತ ಕಠಿಣ ನಾಲ್ಕು ತಿಂಗಳ ಅವಧಿ ಬುಧವಾರದಿಂದ ಆರಂಭಗೊಳ್ಳಲಿದೆ. ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿಗೆ ಚಾಲನೆ ದೊರೆಯಲಿದ್ದು, ಮೊದಲ ಪಂದ್ಯಕ್ಕೆ ಇಲ್ಲಿನ ಟ್ರೆಂಟ್‌ಬ್ರಿಡ್ಜ್‌ ಕ್ರೀಡಾಂಗಣ ಆತಿಥ್ಯ ನೀಡಲಿದೆ. 2021-23ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯ ಇದಾಗಿದ್ದು, ಭಾರತ ಗೆಲುವಿನ ಆರಂಭ ಪಡೆಯುವ ವಿಶ್ವಾಸದಲ್ಲಿದೆ.

ಇಂಗ್ಲೆಂಡ್‌ ಸರಣಿ ಬಳಿಕ ಐಪಿಎಲ್‌ ನಡೆಯಲಿದ್ದು, ಆನಂತರ ಐಸಿಸಿ ಟಿ20 ವಿಶ್ವಕಪ್‌ ನಡೆಯಲಿದೆ. ಕೊಹ್ಲಿ ಪ್ರಶಸ್ತಿ ಗೆದ್ದು ತಮ್ಮ ನಾಯಕತ್ವ ಗುಣಗಳ ಬಗ್ಗೆ ಎದ್ದಿರುವ ಸಂಶಯಗಳಿಗೆ ಉತ್ತರಿಸಬೇಕಿದೆ.

2 ತಿಂಗಳ ಹಿಂದೆ ನಡೆದಿದ್ದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ವೇಳೆ ಒಂದು ದಿನ ಮೊದಲೇ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದ್ದ ಭಾರತ ಈ ಬಾರಿ ಆ ಸಾಹಸಕ್ಕೆ ಮುಂದಾಗಿಲ್ಲ. ಕಾರಣ, ತಂಡದ ಅಂತಿಮ 11ರ ಪಟ್ಟಿಯನ್ನು ನಿರ್ಧರಿಸುವುದು ಈ ಬಾರಿ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿಗೆ ಸವಾಲಾಗಿ ಪರಿಣಮಿಸಿದೆ. ಮಯಾಂಕ್‌ ಅಗರ್‌ವಾಲ್‌, ಶುಭ್‌ಮನ್‌ ಗಿಲ್‌ ಇಬ್ಬರೂ ಅಲಭ್ಯರಾಗಿರುವ ಕಾರಣ, ಆರಂಭಿಕರು ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ರೋಹಿತ್‌ ಶರ್ಮಾ ಜೊತೆ ಇನ್ನಿಂಗ್ಸ್‌ ಆರಂಭಿಸಲು ಕೆ.ಎಲ್‌.ರಾಹುಲ್‌, ಅಭಿಮನ್ಯು ಈಶ್ವರನ್‌ ಹಾಗೂ ಹನುಮ ವಿಹಾರಿ ನಡುವೆ ಪೈಪೋಟಿ ಇದೆ.

Scroll to load tweet…

IND vs ENG; ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತ, ಆರಂಭಿಕ ಔಟ್!

ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್‌ ಆಲ್ರೌಂಡರ್‌ ಸ್ಥಾನ ಸಹ ಖಾಲಿ ಇದೆ. ಆ ಜಾಗವನ್ನು ಶಾರ್ದೂಲ್‌ ಠಾಕೂರ್‌ಗೆ ನೀಡಲಾಗುತ್ತಾ? ಇಲ್ಲವೇ ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಡಿಸಿ ಕೇವಲ ನಾಲ್ವರು ಬೌಲರ್‌ಗಳೊಂದಿಗೆ ಭಾರತ ಕಣಕ್ಕಿಳಿಯುತ್ತಾ ಎನ್ನುವ ಕುತೂಹಲವೂ ಇದೆ. ರವೀಂದ್ರ ಜಡೇಜಾ ಹಾಗೂ ಆರ್‌.ಅಶ್ವಿನ್‌ ನಡುವೆ ಒಬ್ಬರಿಗೆ ಮಾತ್ರ ಸ್ಥಾನ ಸಿಗಬಹುದು. ವೇಗಿ ಮೊಹಮದ್‌ ಸಿರಾಜ್‌ಗೆ ಅವಕಾಶ ನೀಡುತ್ತಾರಾ? ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

Scroll to load tweet…

ಭಾರತ ಕಳೆದ 3 ಇಂಗ್ಲೆಂಡ್‌ ಪ್ರವಾಸಗಳಲ್ಲಿ ಆಡಿದ 14 ಟೆಸ್ಟ್‌ಗಳಲ್ಲಿ 11ರಲ್ಲಿ ಸೋತ್ತಿತ್ತು. ಈ ಬಾರಿ ಸರಣಿ ಗೆಲ್ಲುವ ಜವಾಬ್ದಾರಿ ಕೊಹ್ಲಿ ಪಡೆ ಮೇಲಿದೆ. ಮತ್ತೊಂದೆಡೆ ಇಂಗ್ಲೆಂಡ್‌ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದು, ಈ ಬಾರಿಯೂ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಾಡಲು ಜೇಮ್ಸ್‌ ಆ್ಯಂಡರ್‌ಸನ್‌ ಹಾಗೂ ಸ್ಟುವರ್ಟ್‌ ಬ್ರಾಡ್‌ ಸಿದ್ಧರಾಗಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸೋನಿ ಟೆನ್‌