ಸಿಡ್ನಿ(ನ.23): ಆಸ್ಪ್ರೇಲಿಯಾ ವಿರುದ್ಧದ ಸರಣಿಗಾಗಿ ಇಲ್ಲಿನ ಒಲಿಂಪಿಕ್‌ ಪಾರ್ಕ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ಟೀಂ ಇಂಡಿಯಾ, ಭಾನುವಾರ ಅಂತರ ತಂಡಗಳ ನಡುವೆ ಅಭ್ಯಾಸ ಪಂದ್ಯವನ್ನಾಡಿತು. 

ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಸಿ.ಕೆ. ನಾಯ್ಡು ಇಲೆವೆನ್‌, ಕೆ.ಎಲ್‌. ರಾಹುಲ್‌ ರಂಜಿತ್‌ಸಿನ್‌ಜಿ ಇಲೆವೆನ್‌ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿತು. 40 ಓವರ್‌ಗಳ ಪಂದ್ಯ ಇದಾಗಿದ್ದು, ಉಭಯ ತಂಡಗಳು ತಲಾ 40 ಓವರ್‌ ಆಟದಲ್ಲಿ ಭಾಗಿಯಾಗಿವೆ. ನ.27 ರಿಂದ ಆಸ್ಪ್ರೇಲಿಯಾ ವಿರುದ್ಧ ಸೀಮಿತ ಓವರ್‌ಗಳ ಸರಣಿ ನಡೆಯಲಿದೆ. ಹೀಗಾಗಿ ಪೂರ್ವಭಾವಿ ಅಭ್ಯಾಸಕ್ಕಾಗಿ ಭಾರತ ತಂಡ, ಈ ಅಭ್ಯಾಸ ಪಂದ್ಯವನ್ನಾಡಿದೆ.

ಕ್ವಾರಂಟೈನ್‌ನಲ್ಲಿ ಗಿಟಾರ್ ನುಡಿಸಿದ ದೀಪಕ್ ಚಹರ್

ರಾಹುಲ್‌ ಇಲೆವೆನ್‌ ಪರ ಮಯಾಂಕ್‌ ಅಗರ್‌ವಾಲ್‌ ಹಾಗೂ ಶಿಖರ್‌ ಧವನ್‌ ಆರಂಭಿಕರಾಗಿ ಕಣಕ್ಕಿಳಿದಿದ್ದರು. ರಾಹುಲ್‌ (83 ರನ್‌, 66 ಎಸೆತ) ಅತ್ಯದ್ಭುತ ಬ್ಯಾಟಿಂಗ್‌ ನೆರವಿನಿಂದ 235 ರನ್‌ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಮಾಡಿದ ಕೊಹ್ಲಿ ಪಡೆ, 26 ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ಕೊಹ್ಲಿ ತಂಡದ ಪರ ಪೃಥ್ವಿ ಶಾ ಹಾಗೂ ಶುಭ್‌ಮನ್‌ ಗಿಲ್‌ ಇನ್ನಿಂಗ್ಸ್‌ ಆರಂಭಿಸಿದರು. ನಾಯಕ ವಿರಾಟ್ ಕೊಹ್ಲಿ‌ 58 ಎಸೆತಗಳಲ್ಲಿ 91 ರನ್‌ ಚಚ್ಚುವ ಮೂಲಕ ಕೊಹ್ಲಿ ಪಡೆಗೆ ಜಯ ತಂದುಕೊಟ್ಟರು.