ರಾಯಲ್ ಚಾಲೆಂಜರ್ಸ್ ಬೆಂಗಳೂರು 18ನೇ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ರೋಚಕ ಜಯದೊಂದಿಗೆ ಕೊಹ್ಲಿ ಕನಸು ನನಸಾಗಿದೆ. ರಜತ್ ಪಾಟೀದಾರ್ ನಾಯಕತ್ವದಲ್ಲಿ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿದೆ.

ಅಹಮದಾಬಾದ್: 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ತಂಡವು 6 ರನ್ ಅಂತರದ ರೋಚಕ ಜಯ ಸಾಧಿಸಿದೆ. ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆಯೇ ಇಡಿ ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ಹಾಗೂ ದೇಶದಾದ್ಯಂತ ಆರ್‌ಸಿಬಿ ಅಭಿಮಾನಿಗಳು ರಾತ್ರಿಯಿಡಿ ಗೆಲುವಿನ ಸಂಭ್ರಮಾಚರಣೆ ಮಾಡಿದ್ದಾರೆ.

ಚೊಚ್ಚಲ ಆವೃತ್ತಿಯ ಐಪಿಎಲ್‌ನಿಂದಲೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ವಿರಾಟ್ ಕೊಹ್ಲಿ ಪಾಲಿಗೆ ಐಪಿಎಲ್ ಕಪ್ ಎನ್ನುವುದು ಗಗನ ಕುಸುಮ ಎನಿಸಿಕೊಂಡಿತ್ತು. ಆದರೆ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ನನಸಾಗಿದೆ.

ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ರೋಚಕವಾಗಿ ಮಣಿಸುತ್ತಿದ್ದಂತೆಯೇ ವಿರಾಟ್ ಕೊಹ್ಲಿಯ ಸಂಭ್ರಮದ ಕಟ್ಟೆ ಒಡೆಯಿತು. ಮೈದಾನದಲ್ಲಿಯೇ ವಿರಾಟ್ ಕೊಹ್ಲಿ ಆನಂದಭಾಷ್ಪ ಸುರಿಸಿದರು. ಇದಾದ ಬಳಿಕ ವಿರಾಟ್ ಕೊಹ್ಲಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಪುಟ್ಟ ಮಗುವಿನಂತೆ ವಿರಾಟ್ ಕೊಹ್ಲಿ, ರವಿಶಾಸ್ತ್ರಿ ಬಳಿ ಓಡೋಡಿ ಅವರನ್ನು ಬಿಗಿದಪ್ಪಿ ಸಂಭ್ರಮಿಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಈ ಸಂಭ್ರಮವನ್ನು ಹತ್ತಿರದಲ್ಲೇ ಕಣ್ತುಂಬಿಕೊಳ್ಳುತ್ತಿದ್ದ ಅನುಷ್ಕಾ ಶರ್ಮಾ ಕೂಡಾ ಕೈಚಪ್ಪಾಳೆ ತಟ್ಟುತ್ತಾ ಆನಂದಭಾಷ್ಪ ಸುರಿಸಿದರು. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Scroll to load tweet…

ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಜೋಡಿ ಭಾರತ ಕ್ರಿಕೆಟ್ ತಂಡಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕ್ಯಾಪ್ಟನ್‌ ಆಗಿದ್ದಾಗ ರವಿಶಾಸ್ತ್ರಿ ಭಾರತ ತಂಡದ ಹೆಡ್‌ ಕೋಚ್ ಆಗಿದ್ದರು.

ಇನ್ನು ಐಪಿಎಲ್ ಫೈನಲ್ ಬಗ್ಗೆ ಹೇಳುವುದಾದರೇ, ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ರಜತ್ ಪಾಟೀದಾರ್ ತಮ್ಮ ಮೊದಲ ನಾಯಕತ್ವದಲ್ಲೇ ಆರ್‌ಸಿಬಿಗೆ ಕಪ್ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರಜತ್ ಪಾಟೀದಾರ್, 'ಇದು ನನಗೆ, ವಿರಾಟ್ ಕೊಹ್ಲಿಗೆ ಹಾಗೂ ವರ್ಷಗಳಿಂದ ನಿರಂತರವಾಗಿ ಬೆಂಬಲಿಸಿಕೊಳ್ಳುತ್ತಾ ಬಂದಿರುವ ಅಭಿಮಾನಿಗಳಿಗೆ ಇದು ವಿಶೇಷ ಅನುಭವ. ಇದಕ್ಕೆ ಅವರು ಅರ್ಹರು. ಕ್ವಾಲಿಫೈಯರ್ 1 ಪಂದ್ಯ ಗೆದ್ದ ಬಳಿಕ ನಮಗೆ ಈ ಸಲ ಕಪ್ ಗೆಲ್ಲುವ ವಿಶ್ವಾಸ ಮೂಡಿತು. 190 ರನ್ ಒಳ್ಳೆಯ ಸ್ಕೋರ್ ಆಗಿತ್ತು. ಬೌಲರ್‌ಗಳು ಅದ್ಭುತವಾಗಿ ಪ್ರದರ್ಶನ ತೋರಿದರು ಎಂದು ರಜತ್ ಪಾಟೀದಾರ್ ಹೇಳಿದ್ದಾರೆ.