ವಿರಾಟ್ ಕಿಂಗ್ ಕೊಹ್ಲಿ ಚಾಂಪಿಯನ್ ಆಟ; ಪಾಕ್ ಸದೆ ಬಡಿದ ಟೀಂ ಇಂಡಿಯಾ
ಏಷ್ಯಾಕಪ್ ಸೋಲಿನ ಸೇಡು, ಚೇಸಿಂಗ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತ. ಈ ಪಂದ್ಯದಲ್ಲೂ ಭಾರತಕ್ಕೆ ಸೋಲೇ ಗತಿ ಅನ್ನೋ ಪರಿಸ್ಥಿತಿ ಎದುರಾಗಿತ್ತು. ಆದರೆ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ನಡುವಿನ ಜೊತೆಯಾಟ ಪಂದ್ಯದ ಗತಿ ಬದಲಿಸಿತು. ಪಾಂಡ್ಯ ವಿಕೆಟ್ ಕೈಚೆಲ್ಲಿದರೂ, ಎಲ್ಲಾ ಜವಾಬ್ದಾರಿ ಹೆಗಲ ಮೇಲೆ ಹೊತ್ತ ವಿರಾಟ್ ಕೊಹ್ಲಿ ಹಳೇ ಆಟ ಪ್ರದರ್ಶಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಮೆಲ್ಬರ್ನ್(ಅ.23): ವಾವ್ಹ್ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ಅಭಿಮಾನಿಗಳು ಎಂದೆಂದೂ ನೆನಪಿನಲ್ಲಿಡುವ ಇನಿಂಗ್ಸ್ ಆಡಿದರು. ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ ರೋಚಕ ಜಯ ಸಾಧಿಸಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಾಕಿಸ್ತಾನ ನೀಡಿದ್ದ 160 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿತು. ಆದರೆ ಈ ಚೇಸಿಂಗ್ ಸುಲಭವಾಗಿರಲಿಲ್ಲ. ಇನ್ನೇನು ಗೆದ್ದೇ ಬಿಟ್ಟಿತು ಅನ್ನುವಷ್ಟರಲ್ಲೂ ವಿಕೆಟ್ ಪತನ ಟೀಂ ಇಂಡಿಯಾ ಆತಂಕಕ್ಕೆ ಕಾರಣವಾಗಿತ್ತು. ಆದರೆ ಕೊಹ್ಲಿಯ ಅತ್ಯುತ್ತಮ ಹೋರಾಟ, ಕೊನೆಯ ಎಸೆತದಲ್ಲಿ ಆರ್ ಅಶ್ವಿನ್ ಬೌಂಡರಿ ಭಾರತೀಯರ ದೀಪಾವಳಿ ಸಂಭ್ರಮ ಡಬಲ್ ಮಾಡಿತು.
ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ನೀಡಿದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಮತ್ತೊಮ್ಮೆ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆ ಎಲ್ ರಾಹುಲ್(4), ರೋಹಿತ್ ಶರ್ಮಾ(4) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲು ವಿಫಲರಾದರು. ಇನ್ನು ಇನ್‌ಫಾರ್ಮ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೇವಲ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಪವರ್ ಪ್ಲೇ ಅಂತ್ಯದ ವೇಳೆಗೆ ಭಾರತ 3 ವಿಕೆಟ್ ಕಳೆದುಕೊಂಡು 31 ರನ್ ಬಾರಿಸಿತ್ತು. ಇನ್ನು 7ನೇ ಓವರ್ ಮೊದಲ ಎಸೆತದಲ್ಲೇ ಅಕ್ಷರ್ ಪಟೇಲ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿದರು.
ವಿರಾಟ್ ಕೊಹ್ಲಿ-ಹಾರ್ದಿಕ್ ಪಾಂಡ್ಯ ಜುಗಲ್ಬಂದಿ: ಕೇವಲ 31 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ 5ನೇ ವಿಕೆಟ್‌ಗೆ ಜತೆಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ-ಹಾರ್ದಿಕ್ ಪಾಂಡ್ಯ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದರು. 5ನೇ ವಿಕೆಟ್‌ಗೆ ಈ ಜೋಡಿ 78 ಎಸೆತಗಳಲ್ಲಿ 113 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡ್ಯೊಯ್ದರು.
ಕೊನೆಯ ಮೂರು ಓವರ್‌ಗಳಲ್ಲಿ ಭಾರತ ಗೆಲ್ಲಲು 48 ರನ್‌ಗಳ ಅಗತ್ಯವಿತ್ತು. 18ನೇ ಓವರ್‌ನಲ್ಲಿ ಟೀಂ ಇಂಡಿಯಾ 17 ರನ್ ಬಾರಿಸುವ ಮೂಲಕ ಪಂದ್ಯಕ್ಕೆ ಮತ್ತಷ್ಟು ರೋಚಕತೆ ತಂದುಕೊಟ್ಟರು. ಇನ್ನು 19ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಎರಡು ಭರ್ಜರಿ ಸಿಕ್ಸರ್ ಚಚ್ಚುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ಗೆಲ್ಲಲು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದರು. ಹೀಗಾಗಿ ಕೊನೆಯ ಓವರ್‌ನಲ್ಲಿ ಭಾರತ ಗೆಲ್ಲಲು 16 ರನ್‌ಗಳ ಅಗತ್ಯವಿತ್ತು. 20ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತ ಮೊಹಮ್ಮದ್ ನವಾಜ್ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ವಿಕೆಟ್ ಕಬಳಿಸಿದರು. ಎರಡನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಒಂದು ರನ್ ತಂದುಕೊಟ್ಟರು. ಮೂರನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಎರಡು ರನ್ ತಂದುಕೊಟ್ಟರು. ಮರು ಎಸೆತದ ನೋಬಾಲ್‌ಗೆ ಕೊಹ್ಲಿ ಸಿಕ್ಸರ್ ಚಚ್ಚಿದರು. ಹೀಗಾಗಿ ಕೊನೆಯ ಮೂರು ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿತ್ತು. ಮರು ಎಸೆತ ವೈಟ್ ಆಯಿತು. ನಂತರ ನಾಲ್ಕನೇ ಎಸೆತದಲ್ಲಿ ಬೈ ಮೂಲಕ 3 ರನ್ ಗಳಿಸಿದರು. ಇನ್ನು ಕೊನೆಯ ಎರಡು ಎಸೆತಗಳಲ್ಲಿ 2 ರನ್‌ಗಳ ಅಗತ್ಯವಿತ್ತು. ಆದರೆ 5ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ರನೌಟ್ ಆದರು. ಕೊನೆಯ ಎಸೆತದಲ್ಲಿ ಭಾರತ ಗೆಲ್ಲಲು 2 ರನ್‌ಗಳ ಅಗತ್ಯವಿತ್ತು. ಮತ್ತೆ ನವಾಜ್ ವೈಡ್ ಎಸೆತದರು. ಹೀಗಾಗಿ ಕೊನೆಯ ಎಸೆತದಲ್ಲಿ ಒಂದು ರನ್ ಅಗತ್ಯವಿತ್ತು. ಅಶ್ವಿನ್ ನೇರವಾಗಿ ಬೌಂಡರಿ ಸಿಡಿಸುವ ಮೂಲಕ ಗೆಲುವಿನ ರನ್ ಬಾರಿಸಿದರು.
ಪಾಕಿಸ್ತಾನ ಇನ್ನಿಂಗ್ಸ್:
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕಿಸ್ತಾನ ತಂಡ ಆರ್ಶದೀಪ್ ಸಿಂಗ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ನಾಯಕ ಬಾಬರ್ ಅಜಂ ಖಾತೆ ತೆರೆಯುವ ಮುನ್ನವೇ ಎಲ್‌ಬಿ ಬಲೆಗೆ ಬಿದ್ದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 12 ಎಸೆತಗಳನ್ನು ಎದುರಿಸಿ ಕೇವಲ 4 ರನ್ ಬಾರಿಸಿ ಆರ್ಶದೀಪ್‌ಗೆ ಎರಡನೇ ಬಲಿಯಾದರು.
ಆಸರೆಯಾದರ ಇಫ್ತಿಕಾರ್-ಮಸೂದ್:
ಆರಂಭದಲ್ಲೇ ಬಾಬರ್ ಅಜಂ ಹಾಗೂ ರಿಜ್ವಾನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಶಾನ್ ಮಸೂದ್ ಹಾಗೂ ಇಫ್ತಿಕಾರ್ ಅಹಮ್ಮದ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 76 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು. ಟೀಂ ಇಂಡಿಯಾ ಪ್ರಮುಖ ಸ್ಪಿನ್ನರ್ ಅಕ್ಷರ್ ಪಟೇಲ್ ಒಂದೇ ಓವರ್‌ನಲ್ಲಿ 3 ಸಿಕ್ಸರ್ ಸಹಿತ 21 ರನ್ ಸಿಡಿಸಿದ ಇಫ್ತಿಕಾರ್ ಅಹಮ್ಮದ್ ಕೇವಲ 34 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 51 ರನ್ ಬಾರಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಇಫ್ತಿಕಾರ್ ವಿಕೆಟ್ ಪತನದ ಬಳಿಕ ಶಾನ್ ಮಸೂದ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಶಾನ್ ಮಸೂದ್ 42 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 52 ರನ್ ಬಾರಿಸಿ ಅಜೇಯರಾಗುಳಿದರು.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ತಂಡದ ಪರ ಇಫ್ತಿಕಾರ್ ಅಹಮ್ಮದ್(51), ಶಾನ್ ಮಸೂದ್(52*) ಹಾಗೂ ಶಾಹೀನ್ ಅಫ್ರಿದಿ(16) ಹೊರತುಪಡಿಸಿ ಪಾಕಿಸ್ತಾನದ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಭಾರತದ ಶಿಸ್ತುಬದ್ದ ದಾಳಿಗೆ ಪಾಕ್ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು.