ಐಪಿಎಲ್ 18ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್‌ಗಳಿಂದ ಸೋತಿದೆ. ಆರ್‌ಸಿಬಿ ಉತ್ತಮ ಆರಂಭ ಪಡೆದರೂ, ಫಿಲ್ ಸಾಲ್ಟ್ ರನೌಟ್‌ನಿಂದ ತಂಡದ ಕುಸಿತ ಆರಂಭವಾಯಿತು. ಆರ್‌ಸಿಬಿ 20 ಓವರ್‌ಗಳಲ್ಲಿ 163 ರನ್ ಗಳಿಸಿತು. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 32 ಬಾರಿ ರನೌಟ್‌ಗೆ ಸಾಕ್ಷಿಯಾಗಿದ್ದಾರೆ. ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. 

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಆದ ಒಂದು ರನೌಟ್ ಪಂದ್ಯದ ದಿಕ್ಕನ್ನೇ ಬದಲಿಸುವಂತೆ ಮಾಡಿತು. 

ಹೌದು, ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್‌ ಟೂರ್ನಿಯ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ಮೂರು ಓವರ್‌ನಲ್ಲೇ ಆರ್‌ಸಿಬಿ ತಂಡವು 53 ರನ್ ಬಾರಿಸುವ ಮೂಲಕ ಅತಿಕಡಿಮೆ ಎಸೆತಗಳಲ್ಲಿ ಮೊದಲ ವಿಕೆಟ್‌ಗೆ 50+ ರನ್ ದಾಖಲಿಸಿದ ಮೊದಲ ತಂಡ ಎನ್ನುವ ಹಿರಿಮೆಗೆ ಆರ್‌ಸಿಬಿ ಪಾತ್ರವಾಯಿತು. ಆದರೆ ಈ ಸಂಭ್ರಮ ಆರ್‌ಸಿಬಿ ಪಾಲಿಗೆ ಹೆಚ್ಚುಹೊತ್ತು ಉಳಿಯಲಿಲ್ಲ. ಕೇವಲ 17 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 37 ರನ್ ಸಿಡಿಸಿ ಅರ್ಧಶತಕ ಬಾರಿಸಿ ಮುನ್ನುಗ್ಗುತ್ತಿದ್ದ ಫಿಲ್ ಸಾಲ್ಟ್ ಅವರನ್ನು ವಿಪ್ರಾಜ್ ನಿಗಮ್ ಹಾಗೂ ಕೆ ಎಲ್ ರಾಹುಲ್ ಸೇರಿ ರನೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಫಿಲ್ ಸಾಲ್ಟ್ ಆಫ್‌ಸೈಡ್‌ನಲ್ಲಿ ಬಾರಿಸಿ ಒಂದು ರನ್ ಕದಿಯಲು ಮುಂದಾಗಿದ್ದರು, ಆದರೆ ಕೊನೆಯ ಕ್ಷಣದಲ್ಲಿ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದರಿಂದ ಫಿಲ್ ಸಾಲ್ಟ್ ಔಟ್ ಆಗಿ ಪೆವಿಲಿಯನ್ ಸೇರಬೇಕಾಗಿ ಬಂತು.

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್‌ಸಿಬಿ ಸೋಲಿಗೆ ಇಲ್ಲಿದೆ ಮೂರು ಮೇಜರ್ ಕಾರಣ!

ಫಿಲ್ ಸಾಲ್ಟ್ ಬ್ಯಾಟಿಂಗ್‌ ಮಾಡುವ ವೇಳೆಯಲ್ಲಿ ಆರ್‌ಸಿಬಿ ತಂಡವು ಅನಾಯಾಸವಾಗಿ 200+ ರನ್ ಕಲೆಹಾಕಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಫಿಲ್ ಸಾಲ್ಟ್‌ ವಿಕೆಟ್ ಪತನವಾಗುತ್ತಿದ್ದಂತೆಯೇ ಆರ್‌ಸಿಬಿ ತಂಡವು ನಾಟಕೀಯ ಕುಸಿತ ಕಂಡಿತು. ಡೆಲ್ಲಿ ಎದುರು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 163 ರನ್ ಗಳಿಸಲಷ್ಟೇ ಶಕ್ತವಾಯಿತು. 

ಅಂದಹಾಗೆ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ರನೌಟ್‌ಗೆ ಸಾಕ್ಷಿಯಾಗುತ್ತಿರುವುದು ಇದೇ ಮೊದಲೇನಲ್ಲ. ಆರ್‌ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ ಇದುವರೆಗೆ ಐಪಿಎಲ್ ಇತಿಹಾಸದಲ್ಲಿ 32 ಬಾರಿ ರನೌಟ್‌ಗೆ ಸಾಕ್ಷಿಯಾಗಿದ್ದಾರೆ. ಈ ಪೈಕಿ ವಿರಾಟ್ ಕೊಹ್ಲಿ ಕೇವಲ 8 ಬಾರಿ ಮಾತ್ರ ರನೌಟ್ ಆಗಿದ್ದಾರೆ. ಆದರೆ ಇನ್ನುಳಿದ 24 ಬಾರಿ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರರನ್ನು ರನೌಟ್ ಮಾಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ತಾವು ಔಟ್ ಆಗಿದ್ದಕ್ಕಿಂತ ಸಹ ಆಟಗಾರರನ್ನು ರನೌಟ್ ಮಾಡಿದ್ದೇ ಹೆಚ್ಚು ಎನ್ನುವುದು ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ RCB ಸೋಲಿಗೆ ಸಿದ್ದರಾಮಯ್ಯರನ್ನು ಟ್ರೋಲ್ ಮಾಡಿದ ನೆಟ್ಟಿಗರು!

ಇನ್ನು ಐಪಿಎಲ್ ವಿಚಾರಕ್ಕೆ ಬಂದರೆ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಸೋಲಿನ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಸದ್ಯ ಆರ್‌ಸಿಬಿ ತಂಡವು ಆಡಿದ 5 ಪಂದ್ಯಗಳಲ್ಲಿ 3 ಗೆಲುವು ಹಾಗೂ 2 ಸೋಲು ಸಹಿತ 6 ಅಂಕಗಳನ್ನು ಕಲೆಹಾಕಿದೆ. ಇದೀಗ ಆರ್‌ಸಿಬಿ ತಂಡವು ಏಪ್ರಿಲ್ 14ರಂದು ಜೈಪುರದ ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ತವರಿನಾಚೆಯೇ ಈವರೆಗೆ ಮೂರು ಪಂದ್ಯ ಗೆದ್ದಿರುವ ರಜತ್ ಪಾಟೀದಾರ್ ಪಡೆ, ಇದೀಗ ಮತ್ತೊಮ್ಮೆ ತವರಿನಾಚೆ ಗೆಲುವು ಸಾಧಿಸಲು ಎದುರು ನೋಡುತ್ತಿದೆ.