Asianet Suvarna News Asianet Suvarna News

ಟೀಂ ಇಂಡಿಯಾ ಎದುರು ಅಬ್ಬರಿಸಿದ ನೇಪಾಳ ಆಟಗಾರನಿಗೆ ಪದಕ ತೊಡಿಸಿದ ಕೊಹ್ಲಿ..! ವಿಡಿಯೋ ವೈರಲ್

ನೇಪಾಳ ಎದುರು ಗೆದ್ದು ಬೀಗಿದ ಟೀಂ ಇಂಡಿಯಾ
ಸೂಪರ್ 4 ಹಂತಕ್ಕೆ ಅರ್ಹತೆ ಪಡೆದ ಭಾರತ ಕ್ರಿಕೆಟ್ ತಂಡ
ನೇಪಾಳ ಕ್ರಿಕೆಟಿಗರ ಪ್ರದರ್ಶನವನ್ನು ಶ್ಲಾಘಿಸಿದ ಭಾರತ ಕ್ರಿಕೆಟ್ ತಂಡ

Virat Kohli Gives Medal To Nepal Star After Asia Cup Clash video goes viral kvn
Author
First Published Sep 6, 2023, 12:55 PM IST

ಪಲ್ಲೆಕೆಲೆ(ಸೆ.06): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾವು ಪ್ರಸಕ್ತ ಏಷ್ಯಾಕಪ್ ಟೂರ್ನಿಯಲ್ಲಿ ನೇಪಾಳ ತಂಡವನ್ನು ಮಣಿಸಿ ಸೂಪರ್ 4 ಹಂತ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಏಷ್ಯಾಕಪ್ ಟೂರ್ನಿಯ ತಾನಾಡಿದ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆದರೆ ಮಳೆಯಿಂದಾಗಿ ಪಂದ್ಯ ಅರ್ಧಕ್ಕೆ ರದ್ದಾಗಿದ್ದರಿಂದ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡಿದ್ದವು. ಹೀಗಾಗಿ ನೇಪಾಳ ಎದುರು ಗೆಲ್ಲಲೇಬೇಕಾದ ಒತ್ತಡಕ್ಕೆ ಟೀಂ ಇಂಡಿಯಾ ಒಳಗಾಗಿತ್ತು.

ಕ್ರಿಕೆಟ್ ಶಿಶು ನೇಪಾಳ ಎದುರು ಟೀಂ ಇಂಡಿಯಾ 10 ವಿಕೆಟ್ ಭರ್ಜರಿ ಜಯ ಸಾಧಿಸುವ ಮೂಲಕ ಸೂಪರ್ 4ಗೆ ಲಗ್ಗೆಯಿಡುವಲ್ಲಿ ಭಾರತ ಯಶಸ್ವಿಯಾಗಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನೇಪಾಳ ತಂಡಕ್ಕೆ ಮೊದಲ ವಿಕೆಟ್‌ಗೆ ಕುಶಾಲ್ ಭುರ್ತೇಲ್ ಹಾಗೂ ಆಸಿಫ್ ಶೇಖ್‌ ಚುರುಕಾಗಿ ರನ್ ಗಳಿಸುವ ಭಾರತದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಮೊದಲ 5 ಓವರ್‌ನಲ್ಲಿ ಸಿಕ್ಕ 3 ಜೀವದಾನಗಳ ಲಾಭ ಪಡೆದ ಈ ಜೋಡಿ ಚುರುಕಾಗಿ ರನ್ ಗಳಿಸಲು ಹಿಂದೆ ಮುಂದೆ ನೋಡಲಿಲ್ಲ. ಮೊದಲಿಗೆ ಸ್ಲಿಪ್‌ನಲ್ಲಿದ್ದ ಶ್ರೇಯಸ್ ಅಯ್ಯರ್ ಕ್ಯಾಚ್ ಕೈಚೆಲ್ಲಿದರು. ಇದಾದ ಬಳಿಕ ಶಾರ್ಟ್‌ ಕವರ್‌ನಲ್ಲಿ ವಿರಾಟ್ ಕೊಹ್ಲಿ ಸುಲಭ ಕ್ಯಾಚ್ ಕೈಬಿಟ್ಟರು. ಇನ್ನು ವಿಕೆಟ್ ಕೀಪರ್ ಇಶಾನ್ ಕಿಶನ್ ಕೂಡಾ ಕ್ಯಾಚ್ ಡ್ರಾಪ್ ಮಾಡಿ ನಿರಾಸೆ ಅನುಭವಿಸಿದರು. ನೇಪಾಳ ತಂಡವು ಮೊದಲು ಬ್ಯಾಟ್ ಮಾಡಿ 230 ರನ್ ಬಾರಿಸಿ ಸರ್ವಪತನ ಕಂಡಿತು. ನೇಪಾಳ ಪರ ಆಸಿಫ್ ಶೇಖ್ 58 ರನ್ ಸಿಡಿಸಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು.

ಪಾಕಿಸ್ತಾನ ವೇಗಿಗೆ ಗಾಳ ಹಾಕಿದ ರಿಷಭ್ ಪಂತ್ ಪ್ರೇಯಸಿ..! ಊರ್ವಶಿ ಸ್ಟೇಟಸ್ ವೈರಲ್

ಇನ್ನು ಮಳೆಯಿಂದ ಭಾರತಕ್ಕೆ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 23 ಓವರ್‌ಗಳಲ್ಲಿ 145 ರನ್ ಗುರಿ ನೀಡಲಾಗಿತ್ತು. ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಇನ್ನೂ 17 ಎಸೆತ ಬಾಕಿ ಇರುವಂತೆಯೇ ಭಾರತ ತಂಡವನ್ನು ಯಾವುದೇ ಅಪಾಯವಿಲ್ಲದೇ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ನಾಯಕ ರೋಹಿತ್ ಶರ್ಮಾ ಅಜೇಯ 74 ರನ್ ಬಾರಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಅಜೇಯ 67 ರನ್ ಚಚ್ಚಿದರು.

ಇನ್ನು ಪಂದ್ಯ ಮುಕ್ತಾಯದ ಬಳಿಕ ಭಾರತ ಎದುರು ಮೊದಲ ಪಂದ್ಯವನ್ನಾಡಿ ದಿಟ್ಟ ಪ್ರದರ್ಶನ ತೋರಿದ ನೇಪಾಳಿ ಕ್ರಿಕೆಟಿಗರ ಆಟವನ್ನು ಭಾರತೀಯ ಕ್ರಿಕೆಟಿಗರು ಶ್ಲಾಘಿಸಿದರು. ಅದರಲ್ಲೂ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಭಾರತ ಎದುರು ದಿಟ್ಟ ಅರ್ಧಶತಕ ಸಿಡಿಸಿದ ಆಸಿಫ್ ಶೇಖ್ ಅವರ ಪ್ರದರ್ಶನವನ್ನು ಕೊಂಡಾಡಿದರು. ಜತೆಗೆ ಆಸಿಫ್ ಶೇಖ್‌ಗೆ ಪದಕ ಕೊರಳಿಗೆ ಹಾಕಿ ಗೌರವಿಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Breaking News: ವಿಶ್ವಕಪ್ ಟೂರ್ನಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ

ನೇಪಾಳ ಕ್ರಿಕೆಟ್‌ ತಂಡವು 2018ರಲ್ಲಿ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಲು ಐಸಿಸಿ ಮಾನ್ಯತೆ ಪಡೆದುಕೊಂಡಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೇಪಾಳ ತಂಡವು ತನ್ನದೇ ಆದ ಹೆಜ್ಜೆಗುರುತು ದಾಖಲಿಸುವ ನಿಟ್ಟಿನಲ್ಲಿ ದಿಟ್ಟ ಹೋರಾಟ ತೋರುತ್ತಿದೆ.

Follow Us:
Download App:
  • android
  • ios