ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಅವರದ್ದೇ ಮೈದಾನದಲ್ಲಿ ಸೋಲಿಸಿದೆ. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಶತಕದ ಜತೆಯಾಟವು ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೊಹ್ಲಿ, ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಟ್ರೋಲ್ ಮಾಡಿದ್ದಾರೆ.

ಮುಲ್ಲಾನ್‌ಪುರ: ಸೂಪರ್‌ ಸಂಡೆಯ ಮೊದಲ ಪಂದ್ಯದಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆತಿಥೇಯ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ. ಮೊದಲು ಬೌಲಿಂಗ್‌ನಲ್ಲಿ ಅದ್ಭುತ ದಾಳಿ ಸಂಘಟಿಸಿದ ಆರ್‌ಸಿಬಿ ತಂಡವು, ಆ ಬಳಿಕ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಶತಕದ ಜತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ಪಂಜಾಬ್ ಅವರನ್ನು ಅವರದ್ದೇ ಮೈದಾನದಲ್ಲಿ ಸೋಲಿಸಿದ ಬಳಿಕ ವಿರಾಟ್ ಕೊಹ್ಲಿ, ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸ್ಟೇಡಿಯಂನಲ್ಲಿಯೇ ಮುಟ್ಟಿ ನೋಡಿಕೊಳ್ಳುವಂತೆ ಟ್ರೋಲ್ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಹೌದು, ಈ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಳೆದ ಶುಕ್ರವಾರವಷ್ಟೇ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ತವರಿನಲ್ಲೇ ಸೋಲಿಸಿದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ವಿನೂತನವಾಗಿ ವಿಕ್ಟರಿ ಸೆಲಿಬ್ರೇಷನ್ ಮಾಡಿದ್ದರು. ಇದಕ್ಕೆ ವಿರಾಟ್ ಕೊಹ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಹಾಲಿ ಚಾಂಪಿಯನ್‌ ಕೆಕೆಆರ್‌ಗೆ ಬಲಿಷ್ಠ ಗುಜರಾತ್ ಟೈಟಾನ್ಸ್ ಚಾಲೆಂಜ್!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡವನ್ನು ಬೆಂಬಲಿಸಲು ಸಾಗರೋಪಾದಿಯಲ್ಲಿ ಅಭಿಮಾನಿಗಳು ನೆರೆದಿರುತ್ತಾರೆ. ಇಂತಹ ಸಂದರ್ಭದಲ್ಲಿ ಆರ್‌ಸಿಬಿ ತಂಡವನ್ನು ಅವರದ್ದೇ ಮೈದಾನದಲ್ಲಿ ಸೋಲಿಸಿದ ಬಳಿಕ ಈಗ ಆರ್‌ಸಿಬಿ ಬೆಂಬಲಿಗರ ಸೌಂಡ್ ಕೇಳುತ್ತಿಲ್ಲವಲ್ಲ ಎಂಬರ್ಥದಲ್ಲಿ ಶ್ರೇಯಸ್ ಅಯ್ಯರ್ ಸನ್ನೆ ಮಾಡಿದ್ದರು. 

ಇದನ್ನು ಗಮನಿಸಿದ್ದ ವಿರಾಟ್ ಕೊಹ್ಲಿ, ಪಂಜಾಬ್ ಮೈದಾನದಲ್ಲೇ ಅಕರ್ಷಕ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸುವುದರ ಜತೆಗೆ ಲೆಕ್ಕಾಚಾರ ಚುಕ್ತಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಪಂಜಾಬ್‌ಗೆ ನುಗ್ಗಿ ಹೊಡೆದ ಬೆಂಗಳೂರು ಬಾಯ್ಸ್; ತವರಿನಾಚೆ ಸತತ 5 ಮ್ಯಾಚ್ ಗೆದ್ದ ಆರ್‌ಸಿಬಿ!

ಹೀಗಿತ್ತು ನೋಡಿ ಆ ವಿಡಿಯೋ:

Scroll to load tweet…

ಇನ್ನು ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆತಿಥೇಯ ಪಂಜಾಬ್ ಕಿಂಗ್ಸ್ ತಂಡವು ಆರ್‌ಸಿಬಿ ಸ್ಪಿನ್ನರ್‌ಗಳಾದ ಕೃನಾಲ್ ಪಾಂಡ್ಯ ಹಾಗೂ ಸುಯಾಶ್ ಶರ್ಮಾ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಪಂಜಾಬ್ ತಂಡದ ಯಾವೊಬ್ಬ ಬ್ಯಾಟರ್ ಕೂಡಾ 35 ರನ್ ಬಾರಿಸಲು ಆರ್‌ಸಿಬಿ ಬೌಲರ್‌ಗಳು ಅವಕಾಶ ನೀಡಲಿಲ್ಲ. ನಿಗದಿತ 20 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವು 6 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ಕಿಂಗ್ಸ್‌ ಪರ ಆರಂಭಿಕ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್ 33 ರನ್ ಗಳಿಸಿದ್ದೇ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು. ಆರ್‌ಸಿಬಿ ಪರ ಸುಯಾಶ್ ಶರ್ಮಾ ಹಾಗೂ ಕೃನಾಲ್ ಪಾಂಡ್ಯ ಎರಡು ವಿಕೆಟ್ ಪಡೆದರೆ, ರೊಮ್ಯಾರಿಯೋ ಶೆಫರ್ಡ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಆರಂಭದಲ್ಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಆದರೆ ವಿರಾಟ್ ಕೊಹ್ಲಿ ಹಾಗೂ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಎರಡನೇ ವಿಕೆಟ್‌ಗೆ 103 ರನ್‌ಗಳ ಜತೆಯಾಟವಾಡುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಪಡಿಕ್ಕಲ್ 35 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 61 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 73 ರನ್ ಸಿಡಿಸಿದರು. ಅಂತಿಮವಾಗಿ ಆರ್‌ಸಿಬಿ ತಂಡವು ಕೇವಲ 3 ವಿಕೆಟ್ ಕಳೆದುಕೊಂಡು ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ ಅಂತರದ ಜಯ ಸಾಧಿಸಿದರು.