ಬೆಂಗಳೂರು(ಅ.11):  2019ರ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ, 5ನೇ ಗೆಲುವು ದಾಖಲಿಸಿದೆ. ಗುರುವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎಲೈಟ್‌ ‘ಎ’ ಮತ್ತು ‘ಬಿ’ ಪಂದ್ಯದಲ್ಲಿ ಕರ್ನಾಟಕ, ಹಾಲಿ ಚಾಂಪಿಯನ್‌ ಮುಂಬೈ ವಿರುದ್ಧ 9 ರನ್‌ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಆಡಿರುವ 6 ಪಂದ್ಯಗಳಲ್ಲಿ 5 ಜಯ, 1 ಸೋಲು ಕಂಡಿರುವ ಮನೀಶ್‌ ಪಡೆ 20 ಅಂಕಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.

ಇದನ್ನೂ ಓದಿ: ಕೈಗೆ ಸಿಗುತ್ತಿಲ್ಲ ಧೋನಿ; ಜಾರ್ಖಂಡ್ ತಂಡಕ್ಕೆ ಹೊಸ ನಾಯಕ

ಕಳಪೆ ಆರಂಭ:
ಆತಿಥೇಯ ಕರ್ನಾಟಕ ನೀಡಿದ 313 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಮುಂಬೈ ಕಳಪೆ ಆರಂಭ ಪಡೆಯಿತು. ಆರಂಭಿಕ ಯಶಸ್ವಿ ಜೈಸ್ವಾಲ್‌ (22) ಮಿಥುನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿ ಹೊರನಡೆದರು. 2ನೇ ವಿಕೆಟ್‌ಗೆ ಆದಿತ್ಯ ತಾರೆ, ಸಿದ್ದೇಶ್‌ ಲಾಡ್‌ ಚೇತರಿಕೆ ನೀಡಿದರು. ಆದರೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ತಾರೆ (32) ಗೌತಮ್‌ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆದರು. 104 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡ ಮುಂಬೈ ಸಂಕಷ್ಟದಲ್ಲಿ ಸಿಲುಕಿತು.

ಇದನ್ನೂ ಓದಿ: ವಿಜಯ್ ಹಜಾರೆ ಟ್ರೋಫಿ: ರಾಜ್ಯ​ದ ವೇಳಾ​ಪಟ್ಟಿ ಇಲ್ಲಿದೆ

ದುಬೆ ಭರ್ಜರಿ ಶತಕ:
ಭರ್ಜರಿ ಬ್ಯಾಟಿಂಗ್‌ ನಡೆಸಿದ ದುಬೆ 67 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್‌ಗಳ ಸಹಿತ 118 ರನ್‌ಗಳಿಸಿದರು. 176.12 ಸ್ಟೆ್ರೖಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ದುಬೆ, ಕ್ರೀಸ್‌ನಲ್ಲಿದ್ದಷ್ಟುವೇಳೆ ಮುಂಬೈ ಗೆಲುವು ಪಕ್ಕಾ ಆಗಿತ್ತು. ದುಬೆ ರನ್ನು ಮಿಥುನ್‌ ಪೆವಿಲಿಯನ್‌ಗೆ ಅಟ್ಟಿದರು. ಕೊನೆಯಲ್ಲಿ ಶಾರ್ದೂಲ್‌ (26), ಧವಳ್‌ ಕುಲಕರ್ಣಿ (11) ರನ್‌ಗಳಿಸಿದರು. ಕರ್ನಾಟಕ ಪರ ಮಿಥುನ್‌, ಗೌತಮ್‌ ತಲಾ 3 ವಿಕೆಟ್‌ ಪಡೆದರು.

ಶತಕದ ಜೊತೆಯಾಟ:
ಇದಕ್ಕೂ ಮುನ್ನ ಮೊದಲ ವಿಕೆಟ್‌ಗೆ ಕರ್ನಾಟಕ ತಂಡ ಶತಕದ ಜೊತೆಯಾಟ ನಿರ್ವಹಿಸಿತು. ರಾಹುಲ್‌ (58) ಜೊತೆಯಾಟದಲ್ಲಿ ದೇವದತ್‌್ತ 137 ರನ್‌ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಮನೀಶ್‌ ಪಾಂಡೆ (62), ರೋಹನ್‌ ಕದಂ (32), ಶರತ್‌ (28), ಗೌತಮ್‌ (22) ರನ್‌ಗಳ ನೆರವಿನಿಂದ ಕರ್ನಾಟಕ 312 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು.

ಸ್ಕೋರ್‌: ಕರ್ನಾಟಕ 312/7, ಮುಂಬೈ 303/10