ಡೆಲ್ಲಿ(ಮಾ.09): ನಾಯಕ ಪೃಥ್ವಿ ಶಾ ಸಿಡಿಲಬ್ಬರದ ಅಜೇಯ ಶತಕ(185)ದ ನೆರವಿನಿಂದ ಸೌರಾಷ್ಟ್ರ ಎದುರು ಮುಂಬೈ ತಂಡ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ವಿಜಯ್ ಹಜಾರೆ ಟೂರ್ನಿಯಲ್ಲಿ ಬಲಿಷ್ಠ ಮುಂಬೈ ತಂಡ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.
  
ಸೌರಾಷ್ಟ್ರ ನೀಡಿದ್ದ 285 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ತಂಡ ಭರ್ಜರಿ ಆರಂಭವನ್ನೇ ಪಡೆಯಿತು. ನಾಯಕ ಪೃಥ್ವಿ ಶಾ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 238 ರನ್‌ಗಳ ಜತೆಯಾಟ ಆಡುವ ಮೂಲಕ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಯಶಸ್ವಿ ಜೈಸ್ವಾಲ್ 104 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 75 ರನ್‌ ಬಾರಿಸಿ ಉನಾದ್ಕತ್‌ಗೆ ವಿಕೆಟ್‌ ಒಪ್ಪಿಸಿದರು. 

ಮತ್ತೆ ಅಬ್ಬರಿಸಿದ ಪೃಥ್ವಿ: ಪಾಂಡಿಚೆರಿ ವಿರುದ್ದ 227 ರನ್‌ ಚಚ್ಚಿದ್ದ ಮುಂಬೈ ನಾಯಕ ಪೃಥ್ವಿ ಶಾ ಇದೀಗ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಮತ್ತೊಂದು ಸಿಡಿಲಬ್ಬರದ ಶತಕ ಚಚ್ಚಿದ್ದಾರೆ. ಕೇವಲ 123 ಎಸೆತಗಳನ್ನು ಎದುರಿಸಿದ ಪೃಥ್ವಿ 21 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 185 ರನ್‌ ಚಚ್ಚಿದರು. ಪೃಥ್ವಿಗೆ ಕೊನೆಯಲ್ಲಿ ಉತ್ತಮ ಸಾಥ್ ನೀಡಿದ ಆದಿತ್ಯ ತಾರೆ ಅಜೇಯ 20 ರನ್ ಬಾರಿಸಿದರು.

ಸತತ 4 ಶತಕ, ಪಡಿಕ್ಕಲ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಕೊಡಿ: ನೆಟ್ಟಿಗರ ಆಗ್ರಹ

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸೌರಾಷ್ಟ್ರ ವಿಶ್ವರಾಜ್‌(53), ಸಮರ್ಥ್‌ ವ್ಯಾಸ್‌(90*) ಹಾಗೂ ಚಿರಾಗ್ ಜಾನಿ(53*) ಸಮಯೋಚಿತ ಅರ್ಧಶತಕದ ನೆರವಿನಿಂದ 284 ರನ್‌ ಕಲೆಹಾಕಿತ್ತು.

ಡೆಲ್ಲಿ ವಿರುದ್ದ ಉತ್ತರ ಪ್ರದೇಶ ದಿಗ್ವಿಜಯ: ಉತ್ತರ ಪ್ರದೇಶ ಹಾಗೂ ಡೆಲ್ಲಿ ನಡುವಿನ ಮತ್ತೊಂದು ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ದ 46 ರನ್‌ಗಳ ಅಂತರದ ಜಯ ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ ಹಾಗೂ ಮುಂಬೈ ತಂಡಗಳು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಂತೆ ಆಗಿದೆ.