ವಿಜಯ್ ಹಜಾರೆ ಟ್ರೋಫಿ: ದಾಖಲೆಯ ದ್ವಿಶತಕ ಚಚ್ಚಿದ ಪೃಥ್ವಿ ಶಾ..!
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ನಾಯಕ ಪೃಥ್ವಿ ಶಾ ದಾಖಲೆಯ ದ್ವಿಶತಕ ಬಾರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಜೈಪುರ(ಫೆ.25): ಟೀಂ ಇಂಡಿಯಾ ಯುವ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಕರ್ಷಕ ದ್ವಿಶತಕ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ. ಮುಂಬೈ ತಂಡದ ನಾಯಕರಾಗಿರುವ ಪೃಥ್ವಿ ಶಾ ಪುದುಚೆರಿ ವಿರುದ್ದ ಸಿಡಿಲಬ್ಬರದ ದ್ವಿಶತಕ ಚಚ್ಚುವ ಮೂಲಕ ಟೀಕಾಕಾರರಿಗೆ ತಮ್ಮ ಬ್ಯಾಟಿಂದಲೇ ಉತ್ತರ ನೀಡಿದ್ದಾರೆ.
ಹೌದು, 21 ವರ್ಷದ ಪೃಥ್ವಿ ಶಾ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದು, ಪುದುಚೆರಿ ವಿರುದ್ದ ಕೇವಲ 142 ಎಸೆತಗಳಲ್ಲಿ 140.85ರ ಸ್ಟ್ರೈಕ್‌ರೇಟ್‌ನಲ್ಲಿ ದ್ವಿಶತಕ ಪೂರ್ಣಗೊಳಿಸಿದ್ದಾರೆ. ಒಟ್ಟು 152 ಎಸೆತಗಳನ್ನು ಎದುರಿಸಿದ ಪೃಥ್ವಿ ಅಜೇಯ 227 ರನ್ ರನ್ ಸಿಡಿಸಿದರು. ಅವರ ಈ ಸೊಗಸಾದ ಇನಿಂಗ್ಸ್‌ನಲ್ಲಿ 27 ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್‌ಗಳು ಸೇರಿದ್ದವು. ಪೃಥ್ವಿ ಶಾ 227 ರನ್ ಚಚ್ಚುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ರನ್ ಬಾರಿಸಿದ ದಾಖಲೆ ಪೃಥ್ವಿ ಶಾ ಪಾಲಾಯಿತು. ಇದಷ್ಟೇ ಅಲ್ಲದೇ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು.
ಪೃಥ್ವಿ ಶಾ ದ್ವಿಶತಕ ಹಾಗೂ ಸೂರ್ಯಕುಮಾರ್ ಯಾದವ್ ಮಿಂಚಿನ ಶತಕ(58 ಎಸೆತ 133)ದ ನೆರವಿನಿಂದ ಮುಂಬೈ ತಂಡ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 457 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ವಿಜಯ್ ಹಜಾರೆ ಟ್ರೋಫಿ: ಪಡಿಕ್ಕಲ್ ಅಬ್ಬರದ ಶತಕ, ಕರ್ನಾಟಕ್ಕೆ ಭರ್ಜರಿ ಜಯ
ಪೃಥ್ವಿ ಶಾ ಇತ್ತೀಚೆಗಷ್ಟೇ ಮುಕ್ತಾಯವಾದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದುದರಿಂದ ಪೃಥ್ವಿ ಶಾ ಟೀಂ ಇಂಡಿಯಾದಿಂದ ಹೊರಬಿದ್ದಿದ್ದರು. ಪೃಥ್ವಿ ಸ್ಥಾನವನ್ನು ಶುಭ್‌ಮನ್ ಗಿಲ್ ಆಕ್ರಮಿಸಿಕೊಂಡಿದ್ದಾರೆ.