ಬೆಂಗಳೂರು(ಫೆ.24): ಯುವ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್‌(152) ಭರ್ಜರಿ ಶತಕ ಹಾಗೂ ಪ್ರಸಿದ್ಧ್ ಕೃಷ್ಣ ಹಾಗೂ ಶ್ರೇಯಸ್‌ ಗೋಪಾಲ್‌ ಮಿಂಚಿನ ಪ್ರದರ್ಶನದ ನೆರವಿನಿಂದ ಒಡಿಶಾ ವಿರುದ್ದ ವಿಜಯ್ ಹಜಾರೆ ಟ್ರೋಫಿ ಟೂರ್ನಮೆಂಟ್‌ನಲ್ಲಿ ಕರ್ನಾಟಕ 101 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 'ಸಿ' ಗುಂಪಿನಲ್ಲಿ ಕರ್ನಾಟಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಹೌದು, ಒಡಿಶಾ ಎದುರು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆ ಕರ್ನಾಟಕ ತಂಡಕ್ಕೆ ನಾಯಕ ರವಿಕುಮಾರ್ ಸಮರ್ಥ್ ಹಾಗೂ ದೇವದತ್ ಪಡಿಕ್ಕಲ್‌ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 140 ರನ್‌ಗಳ ಜತೆಯಾಟ ನಿಭಾಯಿಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಮರ್ಥ್ ಈ ಬಾರಿ 83 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 60 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಪಡಿಕ್ಕಲ್‌ ಹಾಗೂ ಕೆ ಸಿದ್ದಾರ್ಥ್‌ ಜೋಡಿ ಚುರುಕಿನ ಬ್ಯಾಟಿಂಗ್‌ ಮೊರೆಹೋಯಿತು. ಸಿದ್ದಾರ್ಥ್‌ 32 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 41 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಪಡಿಕ್ಕಲ್‌ ಸಿಡಿಲಬ್ಬರದ ಶತಕ: 14ನೇ ಆವೃತ್ತಿಯ ಐಪಿಎಲ್‌ಗೆ ಭರ್ಜರಿ ತಾಲೀಮು ನಡೆಯುತ್ತಿರುವ ದೇವದತ್ ಪಡಿಕ್ಕಲ್‌ ಮತ್ತೊಂದು ಸ್ಮರಣೀಯ ಇನಿಂಗ್ಸ್ ಕಟ್ಟಿದರು. ಕಳೆದ ಪಂದ್ಯದಲ್ಲಿ ಕೇವಲ 3 ರನ್‌ಗಳಿಂದ ಶತಕ ವಂಚಿತರಾಗಿದ್ದ ಪಡಿಕ್ಕಲ್ ಈ ಬಾರಿ ಆ ತಪ್ಪು ಮಾಡಲಿಲ್ಲ. ಬರೋಬ್ಬರಿ 140 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ 152 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

ವಿಜಯ್ ಹಜಾರೆ ಟ್ರೋಫಿ: ಮತ್ತೊಂದು ದೊಡ್ಡ ಜಯದ ನಿರೀಕ್ಷೆಯಲ್ಲಿ ಕರ್ನಾಟಕ

ಇನ್ನು ಕರುಣ್‌ ನಾಯರ್ 25 ಹಾಗೂ ಕೊನೆಯಲ್ಲಿ ಅಭಿಮನ್ಯು ಮಿಥುನ ಬಾರಿಸಿದ ಸ್ಫೋಟಕ 40 ರನ್‌(17 ಎಸೆತ, 5 ಸಿಕ್ಸರ್)ಗಳ ನೆರವಿನಿಂದ ಕರ್ನಾಟಕ ತಂಡವು ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 329 ರನ್‌ ಕೆಲಹಾಕಿತ್ತು.

ಇನ್ನು ಕರ್ನಾಟಕ ನೀಡಿದ್ದ 330 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಒಡಿಶಾ ತಂಡವು ಉತ್ತಮ ಆರಂಭ ಪಡೆಯಿತಾದರೂ ಆ ಬಳಿಕ ನಿರಂತರ ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿನತ್ತ ಮುಖ ಮಾಡಿತು. ಶುಬ್ರಾಂಶು ಸೇನಾಪತಿ(78) ಹಾಗೂ ಅಂಕಿತ್ ಯಾದವ್‌(56) ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಪರಿಣಾಮ ಒಡಿಶಾ 44 ಓವರ್‌ಗಳಲ್ಲಿ 228 ರನ್‌ ಬಾರಿಸಿ ಸರ್ವಪತನ ಕಂಡಿತು

ಕರ್ನಾಟಕ ತಂಡದ ಪರ ಪ್ರಸಿದ್ಧ್ ಕೃಷ್ಣ ಹಾಗೂ ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಪಡೆದರೆ, ವೈಶಾಕ್‌ ವಿಜಯ್ ಕುಮಾರ್ ಹಾಗೂ ಜೆ ಸುಚಿತ್ ತಲಾ ಒಂದೊಂದು ವಿಕೆಟ್ ಪಡೆದರು.