ಡೆಲ್ಲಿ(ಮಾ.11): ಮಹತ್ವದ ಪಂದ್ಯದಲ್ಲಿ ಮತ್ತೊಮ್ಮೆ ನಾಯಕನ ಆಟ ಪ್ರದರ್ಶಿಸಿದ ಪೃಥ್ವಿ ಶಾ 2020-21ನೇ ಸಾಲಿನ ವಿಜಯ್ ಹಜಾರೆ ಟೂರ್ನಿಯಲ್ಲಿ 4ನೇ ಶತಕ ಬಾರಿಸಿದ್ದಾರೆ. ಕರ್ನಾಟಕ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ 322 ರನ್‌ ಬಾರಿಸಿದ್ದು, ಹಾಲಿ ಚಾಂಪಿಯನ್ ಕರ್ನಾಟಕ ಮತ್ತೊಮ್ಮೆ ಫೈನಲ್‌ ಪ್ರವೇಶಿಸಲು ಕಠಿಣ ಗುರಿ ನೀಡಿದೆ.

ಹೌದು, ಇಲ್ಲಿನ ಪಾಲಂ ಎ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಮುಂಬೈ ಆರಂಭದಲ್ಲೇ ಯಶಸ್ವಿ ಜೈಸ್ವಾಲ್‌(6) ವಿಕೆಟ್‌ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಜತೆಯಾದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆದಿತ್ಯ ತಾರೆ ಜತೆ ನಾಯಕ ಪೃಥ್ವಿ ಶಾ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ತಾರೆ 16 ರನ್ ಬಾರಿಸಿ ಶ್ರೇಯಸ್‌ ಗೋಪಾಲ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಶಂಸ್‌ ಮುಲಾನಿ ಜತೆ ಪೃಥ್ವಿ ಶತಕದ ಜತೆಯಾಟ ನಿಭಾಯಿಸಿದರು. ಮುಲಾನಿ 45 ರನ್‌ ಬಾರಿಸಿ ಪೆವಿಲಿಯನ್ ಸೇರಿದರು.

ನಾಯಕನ ಆಟವಾಡಿದ ಪೃಥ್ವಿ: ಸೌರಾಷ್ಟ್ರ ವಿರುದ್ದ ಕ್ವಾರ್ಟರ್‌ ಫೈನಲ್‌ನಲ್ಲಿ ಅಜೇಯ 185 ರನ್‌ ಬಾರಿಸಿದ್ದ ಪೃಥ್ವಿ ಶಾ, ಇದೀಗ ಮಹತ್ವದ ಸೆಮಿಫೈನಲ್‌ ಪಂದ್ಯದಲ್ಲಿ ಶತಕ ಚಚ್ಚುವ ಮೂಲಕ ಪೃಥ್ವಿ ತಂಡಕ್ಕೆ ಆಸರೆಯಾಗಿದ್ದಾರೆ. ಕೇವಲ 122 ಎಸೆತಗಳನ್ನು ಎದುರಿಸಿದ ಮುಂಬೈ ನಾಯಕ ಪೃಥ್ವಿ 17 ಬೌಂಡರಿ ಹಾಗೂ 7 ಸಿಕ್ಸರ್‌ ನೆರವಿನಿಂದ 165 ರನ್‌ ಬಾರಿಸಿ ವೈಶಾಕ್‌ ವಿಜಯ್ ಕುಮಾರ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು. 

ವಿಜಯ್‌ ಹಜಾರೆ ಟ್ರೋಫಿ: ಟಾಸ್ ಗೆದ್ದ ಕರ್ನಾಟಕ ಬೌಲಿಂಗ್‌ ಆಯ್ಕೆ

ಪೃಥ್ವಿ ವಿಕೆಟ್‌ ಪತನದ ಬಳಿಕ ಕರ್ನಾಟಕ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡುವ ಯತ್ನದಲ್ಲಿ ಅಲ್ಪ ಯಶಸ್ಸನ್ನು ಗಳಿಸಿತು. ಪೃಥ್ವಿ ವಿಕೆಟ್ ಪತನದ ಬಳಿಕ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು 30+ ರನ್‌ ಬಾರಿಸಲು ಯಶಸ್ವಿಯಾಗಲಿಲ್ಲ. ಕರ್ನಾಟಕ ಪರ ವೇಗಿ ವೈಶಾಕ್ ವಿಜಯ್ ಕುಮಾರ್‌ 4 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 3, ರೋನಿತ್ ಮೋರೆ, ಶ್ರೇಯಸ್ ಗೋಪಾಲ್ ಹಾಗೂ ಕೃಷ್ಣಪ್ಪ ಗೌತಮ್‌ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್:
ಮುಂಬೈ: 322/10
ಪೃಥ್ವಿ ಶಾ: 165
ವೈಶಾಕ್ ವಿಜಯ್ ಕುಮಾರ್: 56/4