ನವದೆಹಲಿ(ಮಾ.11): ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಸೆಮಿಫೈನಲ್‌ ಪಂದ್ಯ ಗುರುವಾರ ಇಲ್ಲಿನ ಪಾಲಂ ಏರ್‌ಫೋರ್ಸ್‌ ಮೈದಾನದಲ್ಲಿ ನಡೆಯಲಿದ್ದು, ಫೈನಲ್‌ನಲ್ಲಿ ಸ್ಥಾನಕ್ಕಾಗಿ ಹಾಲಿ ಚಾಂಪಿಯನ್‌ ಕರ್ನಾಟಕ ಹಾಗೂ ಮುಂಬೈ ಎದುರಾಗಲಿವೆ. ಪ್ರತಿಭಾವಂತ, ಸ್ಫೋಟಕ ಆರಂಭಿಕರಾದ ಆರ್‌.ಸಮರ್ಥ್‍, ದೇವದತ್‌ ಪಡಿಕ್ಕಲ್‌ ಹಾಗೂ ಪೃಥ್ವಿ ಶಾ ನಡುವೆ ಭರ್ಜರಿ ಪೈಪೋಟಿ ಏರ್ಪಡಲಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಆರಂಭಿಕರೇ ಟ್ರಂಪ್‌ ಕಾರ್ಡ್ಸ್: ಪಡಿಕ್ಕಲ್‌ ಸತತ 4 ಶತಕ ಬಾರಿಸಿ ದಾಖಲೆ ಬರೆಯುವುದರ ಜೊತೆಗೆ ಟೂರ್ನಿಯಲ್ಲಿ ಬರೋಬ್ಬರಿ 673 ರನ್‌ ಕಲೆಹಾಕಿದ್ದಾರೆ. ಸಮರ್ಥ್ 605 ರನ್‌ ಗಳಿಸಿದ್ದು, ಟೂರ್ನಿಯಲ್ಲಿ 2ನೇ ಗರಿಷ್ಠ ರನ್‌ ಸರದಾರ ಎನಿಸಿದ್ದಾರೆ. ಒಂದು ದ್ವಿಶತಕ ಸಮೇತ ಒಟ್ಟು 3 ಶತಕ ದಾಖಲಿಸಿರುವ ಪೃಥ್ವಿ 589 ರನ್‌ ಕಲೆಹಾಕಿದ್ದು, 3ನೇ ಸ್ಥಾನದಲ್ಲಿದ್ದಾರೆ. ಈ ಮೂವರ ಆಟದ ಮೇಲೆ ಎಲ್ಲರ ಕಣ್ಣಿದೆ.

ಕರ್ನಾಟಕ ಸೆಮೀಸ್‌ಗೇರುವಲ್ಲಿ ಆರಂಭಿಕರ ಪಾತ್ರವೇ ಮಹತ್ವದಾಗಿದೆ. ಬಹುತೇಕ ರನ್‌ಗಳನ್ನು ಪಡಿಕ್ಕಲ್‌ ಹಾಗೂ ಸಮರ್ಥ್ ಇಬ್ಬರೇ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕ ಹೆಚ್ಚು ಪರೀಕ್ಷೆಗೆ ಒಳಪಟ್ಟಿಲ್ಲ. ಆದರೆ ಮನೀಶ್‌ ಪಾಂಡೆ ಸೇರ್ಪಡೆ ತಂಡದ ಬಲ ಹೆಚ್ಚಿಸಿರೋದು ಸುಳ್ಳಲ್ಲ. ಕೆ.ಗೌತಮ್‌ ಅಲ್ರೌಂಡ್‌ ಆಟ ತಂಡಕ್ಕೆ ನೆರವಾಗಲಿದೆ.

ಮುಂಬೈ ಮಧ್ಯಮ ಕ್ರಮಾಂಕ ಸಹ ನಿರೀಕ್ಷಿತ ಮಟ್ಟದಲ್ಲಿ ಆಡಿಲ್ಲ. ಪೃಥ್ವಿ ನಂತರ ಅತಿಹೆಚ್ಚು ರನ್‌ ಗಳಿಸಿರುವ ಇಬ್ಬರು ಪ್ರಮುಖ ಆಟಗಾರರಾದ ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌ ಭಾರತ ಟಿ20 ತಂಡ ಸೇರಿಕೊಂಡಿದ್ದು, ಇವರಿಬ್ಬರ ಅನುಪಸ್ಥಿತಿ ಸಹ ಕಾಡಲಿದೆ. ಆರಂಭಿಕ ಯಶಸ್ವಿ ಜೈಸ್ವಾಲ್‌ 6 ಪಂದ್ಯಗಳಲ್ಲಿ ಕೇವಲ 173 ರನ್‌ ಗಳಿಸಿದ್ದಾರೆ. ಆದಿತ್ಯ ತಾರೆ, ಸರ್ಫರಾಜ್‌ ಖಾನ್‌, ಶಿವಂ ದುಬೆ ಲಯದಲ್ಲಿಲ್ಲ. ಹೀಗಾಗಿ ಪೃಥ್ವಿ ಶಾ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ.

ಬಲಿಷ್ಠವಾಗಿದೆ ಕರ್ನಾಟಕದ ಬೌಲಿಂಗ್‌: ಕರ್ನಾಟಕದ ಬೌಲರ್‌ಗಳು ಸಮಾಧಾನಕರ ಪ್ರದರ್ಶನ ತೋರಿದ್ದಾರೆ. ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ 12 ವಿಕೆಟ್‌ ಕಬಳಿಸಿದ್ದರೆ, ಪ್ರಸಿದ್ಧ್ ಕೃಷ್ಣ 11 ವಿಕೆಟ್‌ ಕಿತ್ತಿದ್ದಾರೆ. ಗಾಯದ ಕಾರಣ ಕ್ವಾರ್ಟರ್‌ ಫೈನಲ್‌ ತಪ್ಪಿಸಿಕೊಂಡಿದ್ದ ಅನುಭವಿ ಅಭಿಮನ್ಯು ಮಿಥುನ್‌ ಈ ಪಂದ್ಯಕ್ಕೆ ಲಭ್ಯರಾಗಬಹುದು. ರೋನಿತ್‌ ಮೋರೆ ಕಳೆದ ಪಂದ್ಯದಲ್ಲಿ 5 ವಿಕೆಟ್‌ ಕಿತ್ತಿದ್ದರು.

ವಿಜಯ್ ಹಜಾರೆ ಟ್ರೋಫಿ: ಫೈನಲ್‌ಗಾಗಿ ಕರ್ನಾಟಕ-ಮುಂಬೈ ಫೈಟ್‌

ಮುಂಬೈಗೆ ಅನುಭವಿಗಳ ಕೊರತೆ: ಮತ್ತೊಂದೆಡೆ ಮುಂಬೈಗೆ ಅನುಭವಿಗಳ ಕೊರತೆ ಎದುರಾಗಲಿದೆ. 4 ಪಂದ್ಯಗಳಲ್ಲಿ 7 ವಿಕೆಟ್‌ ಕಿತ್ತಿದ್ದ ಶಾರ್ದೂಲ್‌ ಠಾಕೂರ್‌ ಭಾರತ ತಂಡ ಸೇರಿಕೊಂಡಿದ್ದಾರೆ. ಧವಳ್‌ ಕುಲ್ಕರ್ಣಿ ಕ್ವಾರ್ಟರ್‌ ಫೈನಲ್‌ನಲ್ಲಿ ಆಡಿರಲಿಲ್ಲ. ಈ ಪಂದ್ಯಕ್ಕೂ ಅವರು ಅನುಮಾನ ಎನ್ನಲಾಗಿದೆ. ಅನನುಭವಿ ಶಮ್ಸ್‌ ಮುಲಾನಿ, ಪ್ರಶಾಂತ್‌ ಸೋಲಂಕಿ, ತನುಶ್‌ ಕೋಟ್ಯಾನ್‌ ಕರ್ನಾಟಕದ ತಾರಾ ಬ್ಯಾಟಿಂಗ್‌ ಪಡೆಯ ವಿರುದ್ಧ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಬಲ್ಲರು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

5ನೇ ಬಾರಿಗೆ ಮುಖಾಮುಖಿ: ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಹಾಗೂ ಮುಂಬೈ ಈ ವರೆಗೂ 4 ಬಾರಿ ಮುಖಾಮುಖಿಯಾಗಿವೆ. ಕರ್ನಾಟಕ 2ರಲ್ಲಿ ಗೆದ್ದರೆ ಮುಂಬೈ 2ರಲ್ಲಿ ಗೆದ್ದಿದೆ. ಈ ಪೈಕಿ ನಾಕೌಟ್‌ ಹಂತದಲ್ಲಿ ನಡೆದ 2 ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ 1ರಲ್ಲಿ ಜಯಗಳಿಸಿವೆ. 5ನೇ ಬಾರಿಗೆ ಎದುರಾಗಲಿರುವ ತಂಡಗಳ ನಡುವೆ ಭರ್ಜರಿ ಪೈಪೋಟಿ ನಿರೀಕ್ಷಿಸಲಾಗಿದೆ.

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ

ಗುಜರಾತ್‌-ಉ.ಪ್ರದೇಶ ಸೆಮಿಫೈನಲ್‌ ಸೆಣಸಾಟ

ನವದೆಹಲಿ: ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಗುಜರಾತ್‌ ಹಾಗೂ ಉತ್ತರ ಪ್ರದೇಶ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಉತ್ತಮ ಲಯದಲ್ಲಿವೆ. 2015-16ರಲ್ಲಿ ಚಾಂಪಿಯನ್‌ ಆದ ಬಳಿಕ ಗುಜರಾತ್‌ ಫೈನಲ್‌ಗೇರಲು ಸಹ ವಿಫಲವಾಗಿದೆ. ಇನ್ನು ಉತ್ತರ ಪ್ರದೇಶ ಕೊನೆ ಬಾರಿಗೆ ಫೈನಲ್‌ನಲ್ಲಿ ಆಡಿದ್ದು 2005-06ರಲ್ಲಿ. ಹೀಗಾಗಿ ಫೈನಲ್‌ ಪ್ರವೇಶಿಸಲು ಎರಡೂ ತಂಡಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡಲಿದೆ.

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ