Vijay Hazare Trophy: ಕರ್ನಾಟಕ vs ರಾಜಸ್ಥಾನ ಸೆಮೀಸ್ ಕದನ ಇಂದು
ಟೂರ್ನಿಯಲ್ಲಿ ಎರಡೂ ತಂಡಗಳಿಂದ ಪರಿಣಾಮಕಾರಿ ಪ್ರದರ್ಶನ ಮೂಡಿಬಂದಿದೆ. ಗುಂಪು ಹಂತದಲ್ಲಿ ಕರ್ನಾಟಕ ಒಂದು ಪಂದ್ಯ ಸೋತರೂ, ನೇರವಾಗಿ ಕ್ವಾರ್ಟರ್ ಪ್ರವೇಶಿಸಲು ಯಶಸ್ವಿಯಾಗಿತ್ತು. ಕ್ವಾರ್ಟರ್‌ನಲ್ಲಿ ವಿದರ್ಭ ವಿರುದ್ಧ ಸುಲಭವಾಗಿ ಗೆದ್ದು ಸೆಮೀಸ್‌ಗೇರಿತ್ತು.
ರಾಜ್‌ಕೋಟ್(ಡಿ.14): ವಿಜಯ್ ಹಜಾರೆ ಏಕದಿನ ಟೂರ್ನಿಯ ಸೆಮಿಫೈನಲ್‌ನಲ್ಲಿ ಗುರುವಾರ ಕರ್ನಾಟಕಕ್ಕೆ ರಾಜಸ್ಥಾನದ ಸವಾಲು ಎದುರಾಗಲಿದೆ. 4 ಬಾರಿಯ ಚಾಂಪಿಯನ್ ಕರ್ನಾಟಕ 5ನೇ ಬಾರಿ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದ್ದರೆ, 2006-07ರ ಬಳಿಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಟ್ರೋಫಿ ಗೆಲ್ಲುವ ಕನಸು ರಾಜಸ್ಥಾನದ್ದು.
ಟೂರ್ನಿಯಲ್ಲಿ ಎರಡೂ ತಂಡಗಳಿಂದ ಪರಿಣಾಮಕಾರಿ ಪ್ರದರ್ಶನ ಮೂಡಿಬಂದಿದೆ. ಗುಂಪು ಹಂತದಲ್ಲಿ ಕರ್ನಾಟಕ ಒಂದು ಪಂದ್ಯ ಸೋತರೂ, ನೇರವಾಗಿ ಕ್ವಾರ್ಟರ್ ಪ್ರವೇಶಿಸಲು ಯಶಸ್ವಿಯಾಗಿತ್ತು. ಕ್ವಾರ್ಟರ್‌ನಲ್ಲಿ ವಿದರ್ಭ ವಿರುದ್ಧ ಸುಲಭವಾಗಿ ಗೆದ್ದು ಸೆಮೀಸ್‌ಗೇರಿತ್ತು. ಲೀಗ್ ಹಂತದಲ್ಲಿ ಪ್ರಚಂಡ ಆಟವಾಡಿದ ದೇವದತ್ ಪಡಿಕ್ಕಲ್ ಹಾಗೂ ವೇಗಿ ವಿದ್ವತ್ ಕಾವೇರಪ್ಪ ಭಾರತ ‘ಎ’ ತಂಡದೊಂದಿಗೆ ದ.ಆಫ್ರಿಕಾಕ್ಕೆ ತೆರಳಿರುವ ಕಾರಣ, ಇವರಿಬ್ಬರ ಅನುಪಸ್ಥಿತಿಯಲ್ಲೇ ಆಡಬೇಕಿದೆ.
ಭಾರತ ಮಹಿಳಾ ತಂಡಕ್ಕೆ 3 ವರ್ಷಗಳ ಬಳಿಕ ಟೆಸ್ಟ್: ಇಂಗ್ಲೆಂಡ್ ಎದುರು ಆರಂಭಿಕ ಆಘಾತ
ಮತ್ತೊಂದೆಡೆ ರಾಜಸ್ಥಾನ ಗುಂಪು ಹಂತದಲ್ಲಿ ಆಡಿದ ಎಲ್ಲಾ 6 ಪಂದ್ಯಗಳಲ್ಲಿ ಜಯಭೇರಿ ಬಾರಿಸಿ, ಸೆಮೀಸ್‌ನಲ್ಲಿ ಕೇರಳವನ್ನು 200 ರನ್‌ಗಳಿಂದ ಬಗ್ಗುಬಡಿದಿತ್ತು. ದೀಪಕ್ ಹೂಡಾ, ಖಲೀಲ್ ಅಹ್ಮದ್, ಅನಿಕೇತ್ ಚೌಧರಿ, ರಾಹುಲ್ ಚಹರ್‌ರಂತಹ ಅನುಭವಿ ಆಟಗಾರರ ಬಲ ತಂಡಕ್ಕಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಜಿಯೋ ಸಿನಿಮಾ
ಚೊಚ್ಚಲ ಬಾರಿಗೆ ಫೈನಲ್‌ಗೇರಿದ ಹರ್ಯಾಣ ತಂಡ
ರಾಜ್‌ಕೋಟ್: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಹರ್ಯಾಣ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಬುಧವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ದಾಖಲೆಯ 5 ಬಾರಿಯ ಚಾಂಪಿಯನ್ ತಮಿಳುನಾಡು ವಿರುದ್ಧ 63 ರನ್‌ಗಳ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಹರ್ಯಾಣ, ಹಿಮಾಂಶು ರಾಣಾ (ಔಟಾಗದೆ 116)ರ ಶತಕ, ಯುವರಾಜ್ ಸಿಂಗ್ (65)ರ ಅರ್ಧಶತಕದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತದತ್ತ ಸಾಗಿತು. ಕೊನೆಯಲ್ಲಿ ಸುಮಿತ್ 30 ಎಸೆತದಲ್ಲಿ 48 ರನ್ ಸಿಡಿಸಿದ ಪರಿಣಾಮ ಹರ್ಯಾಣ 7 ವಿಕೆಟ್‌ಗೆ 293 ರನ್ ಗಳಿಸಿತು. ತಮಿಳುನಾಡು 47.1 ಓವರಲ್ಲಿ 230ಕ್ಕೆ ಆಲೌಟ್ ಆಯಿತು. ಅನ್ಶುಲ್ 4 ವಿಕೆಟ್ ಕಿತ್ತರು.
ಟಿ20 ರ್‍ಯಾಂಕಿಂಗ್: 46 ಸ್ಥಾನ ಜಿಗಿದ ರಿಂಕು!
ದುಬೈ: ಐಸಿಸಿ ಟಿ20 ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಯುವ ಬ್ಯಾಟಿಂಗ್ ತಾರೆ ರಿಂಕು ಸಿಂಗ್ ಬರೋಬ್ಬರಿ 46 ಸ್ಥಾನಗಳ ಏರಿಕೆ ಕಂಡಿದ್ದು, 59ನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಕರ್ಷಕ ಪ್ರದರ್ಶನ ತೋರಿದ್ದ ರಿಂಕು, ದ.ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಔಟಾಗದೆ 68 ರನ್ ಸಿಡಿಸಿ, ಅಂ.ರಾ.ಟಿ20ಯಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ್ದರು. ಇದೇ ವೇಳೆ ಸೂರ್ಯಕುಮಾರ್ ಯಾದವ್‌ರ ರೇಟಿಂಗ್ ಅಂಕ 865ಕ್ಕೆ ಏರಿಕೆಯಾಗಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 2ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮದ್ ರಿಜ್ವಾನ್ (787) ಗಿಂತ ಸೂರ್ಯ 78 ಅಂಕ ಮುಂದಿದ್ದಾರೆ.