ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗಿ 43.5 ಓವರ್‌ಗಳಲ್ಲಿ 143ಕ್ಕೆ ಆಲೌಟಾಯಿತು. ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ದೇವದತ್‌ ಪಡಿಕ್ಕಲ್‌ ಭಾರತ ‘ಎ’ ತಂಡ ಸೇರಿಕೊಂಡಿದ್ದರಿಂದ ಈ ಪಂದ್ಯದಲ್ಲಿ ಆಡಲಿಲ್ಲ.

ಅಹಮದಾಬಾದ್‌(ಡಿ.04): ವಿಜಯ್‌ ಹಜಾರೆ ಏಕದಿನ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಕರ್ನಾಟಕದ ಕನಸಿಗೆ ಹಿನ್ನಡೆಯುಂಟಾಗಿದೆ. ಮೊದಲ 5 ಪಂದ್ಯ ಗೆದ್ದಿದ್ದ ರಾಜ್ಯಕ್ಕೆ ಭಾನುವಾರ ಹರ್ಯಾಣ ವಿರುದ್ಧ 5 ವಿಕೆಟ್‌ ಸೋಲು ಎದುರಾಯಿತು. ಹರ್ಯಾಣ(24 ಅಂಕ) 6ನೇ ಜಯದೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ಕರ್ನಾಟಕಕ್ಕೆ(20 ಅಂಕ) ಇನ್ನು ಮಿಜೋರಾಂ(ಡಿ.5) ವಿರುದ್ಧ ಪಂದ್ಯ ಬಾಕಿ ಇದ್ದು, ನೇರವಾಗಿ ಕ್ವಾರ್ಟರ್‌ಗೇರಬೇಕಿದ್ದರೆ ಆ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಜೊತೆಗೆ ಹರ್ಯಾಣ ಕೊನೆ ಪಂದ್ಯದಲ್ಲಿ ಸೋಲಬೇಕು.

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗಿ 43.5 ಓವರ್‌ಗಳಲ್ಲಿ 143ಕ್ಕೆ ಆಲೌಟಾಯಿತು. ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ದೇವದತ್‌ ಪಡಿಕ್ಕಲ್‌ ಭಾರತ ‘ಎ’ ತಂಡ ಸೇರಿಕೊಂಡಿದ್ದರಿಂದ ಈ ಪಂದ್ಯದಲ್ಲಿ ಆಡಲಿಲ್ಲ. ರಾಜ್ಯದ ಯಾವುದೇ ಬ್ಯಾಟರ್‌ಗೂ ಹರ್ಯಾಣದ ದಾಳಿ ಎದುರಿಸಲಾಗಲಿಲ್ಲ. 10ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ವೈಶಾಖ್‌ 54 ರನ್ ಸಿಡಿಸಿ ತಂಡವನ್ನು ಅಲ್ಪ ಮೇಲೆತ್ತಿದರು. ಸುಲಭ ಗುರಿಯನ್ನು ಹರ್ಯಾಣ 31.1 ಓವರ್‌ಗಳಲ್ಲಿ ಬೆನ್ನತ್ತಿತು. ಕೌಶಿಕ್‌ 6 ಓವರಲ್ಲಿ 9 ರನ್‌ಗೆ 2 ವಿಕೆಟ್‌ ಕಿತ್ತರು. 20 ಅಂಕ ಗಳಿಸಿರುವ ರಾಜ್ಯ ತಂಡ ಕೊನೆ ಪಂದ್ಯದಲ್ಲಿ ಮಂಗಳವಾರ ಮಿಜೋರಾಂ ವಿರುದ್ಧ ಆಡಲಿದೆ.

ಸ್ಕೋರ್‌: 
ಕರ್ನಾಟಕ 43.5 ಓವರಲ್ಲಿ 143/10 (ವೈಶಾಖ್‌ 54, ಮನೀಶ್‌ 24, ಸುಮಿತ್‌ 3-38)
ಹರ್ಯಾಣ 31.1 ಓವರಲ್ಲಿ 144/5 (ರೋಹಿತ್‌ 63, ಕೌಶಿಕ್‌ 2-9)

ಚಾಮುಂಡಿಬೆಟ್ಟಕ್ಕೆ ದ್ರಾವಿಡ್‌ ಭೇಟಿ

ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ ತಮ್ಮ ಪತ್ನಿ ಡಾ. ವಿಜೇತಾ ಅವರೊಂದಿಗೆ ಭಾನುವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

ಟಿ20: ಇಂಗ್ಲೆಂಡ್‌ ವಿರುದ್ಧ ಸರಣಿ ಸೋತ ಭಾರತ ‘ಎ’

ಮುಂಬೈ: ಇಂಗ್ಲೆಂಡ್‌ ‘ಎ’ ಮಹಿಳಾ ತಂಡದ ವಿರುದ್ಧ ಭಾರತ ‘ಎ’ ತಂಡ ಟಿ20 ಸರಣಿಯನ್ನು 1-2 ಅಂತರದಲ್ಲಿ ಕಳೆದುಕೊಂಡಿದೆ. ಭಾನುವಾರ ನಡೆದ 3ನೇ ಪಂದ್ಯದಲ್ಲಿ ಆತಿಥೇಯರಿಗೆ 2 ವಿಕೆಟ್‌ ಸೋಲು ಎದುರಾಯಿತು. ಮೊದಲು ಬ್ಯಾಟ್‌ ಮಾಡಿದ ಭಾರತ 19.2 ಓವರಲ್ಲಿ 101ಕ್ಕೆ ಆಲೌಟಾಯಿತು. ಉಮಾ ಚೆಟ್ರಿ 21, ದಿಶಾ ಕಸಟ್‌ 20 ರನ್‌ ಗಳಿಸಿದರು. ಸುಲಭ ಗುರಿಯನ್ನು ಬೆನ್ನತ್ತಲು ತಿಣುಕಾಡಿದ ಇಂಗ್ಲೆಂಡ್‌ 19.1 ಓವರಲ್ಲಿ ಜಯ ತನ್ನದಾಗಿಸಿಕೊಂಡಿತು. ನಾಯಕಿ ಮಿನ್ನು, ಕರ್ನಾಟಕದ ಶ್ರೇಯಾಂಕ ತಲಾ 2 ವಿಕೆಟ್ ಕಿತ್ತರು.