ಬೆಂಗಳೂರು(ಫೆ.26): ಕರ್ನಾಟಕದ ಯುವ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್ ಭರ್ಜರಿ ಫಾರ್ಮ್‌ನಲ್ಲಿದ್ದು, ವಿಜಯ್ ಹಜಾರೆ ಟೂರ್ನಿಯಲ್ಲಿ ಮತ್ತೊಂದು ಶತಕ ಚಚ್ಚುವ ಮೂಲಕ ರಾಜ್ಯ ತಂಡಕ್ಕೆ ಸುಲಭ ಜಯ ತಂದುಕೊಟ್ಟಿದ್ದಾರೆ. ಕೇರಳ ವಿರುದ್ದ ಕರ್ನಾಟಕ ತಂಡ 9 ವಿಕೆಟ್‌ಗಳ ಜಯ ಸಾಧಿಸಿ 'ಸಿ' ಗುಂಪಿನಲ್ಲಿ 12 ಅಂಕಗಳೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿದೆ.

ಕೇರಳ ನೀಡಿದ್ದ 278 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕರ್ನಾಟಕ ತಂಡ ಮತ್ತೊಮ್ಮೆ ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ರವಿಕುಮಾರ್‌ ಸಮರ್ಥ್‌ ಹಾಗೂ ದೇವದತ್‌ ಪಡಿಕ್ಕಲ್‌ ಜೋಡಿ 18.2 ಓವರ್‌ಗಳಲ್ಲಿ 99 ರನ್‌ಗಳ ಜತೆಯಾಟ ನಿಭಾಯಿಸಿತು. ಸಮರ್ಥ್‌ 51 ಎಸೆತಗಳಲ್ಲಿ 10 ಬೌಂಡರಿ ಸಹಿತ 62 ರನ್‌ ಬಾರಿಸಿ ಜಲಜಾ ಸಕ್ಸೆನಾಗೆ ವಿಕೆಟ್‌ ಒಪ್ಪಿಸಿದರು.

ಮತ್ತೆ ಅಬ್ಬರಿಸಿದ ಪಡಿಕ್ಕಲ್‌- ಸಿದ್ಧಾರ್ಥ್‌: ಒಡಿಶಾ ವಿರುದ್ದ 152 ರನ್‌ ಚಚ್ಚಿದ್ದ ಪಡಿಕ್ಕಲ್‌ ಇದೀಗ ಕೇರಳ ವಿರುದ್ದವೂ ಶತಕ ಬಾರಿಸುವ ಮೂಲಕ ಮುಂಬರುವ ಐಪಿಎಲ್‌ಗೆ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಭಾರತ ತಂಡದ ಆರಂಭಿಕ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪಡಿಕ್ಕಲ್‌ ಕೇವಲ 138 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 126 ರನ್‌ ಬಾರಿಸಿ ಅಜೇಯರಾಗುಳಿದರು. ಪಡಿಕ್ಕಲ್‌ಗೆ ಉತ್ತಮ ಸಾಥ್ ನೀಡಿದ ಕೃಷ್ಣಮೂರ್ತಿ ಸಿದ್ದಾರ್ಥ್‌ 84 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 86 ರನ್‌ ಬಾರಿಸಿ ಅಜೇಯರಾಗುಳಿದರು.

ವಿಜಯ್ ಹಜಾರೆ ಟ್ರೋಫಿ: ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಕೇರಳ 4 ರನ್‌ ಗಳಿಸುವಷ್ಟರಲ್ಲಿ ಸಂಜು ಸ್ಯಾಮ್ಸನ್‌ ಹಾಗೂ ರಾಬಿನ್ ಉತ್ತಪ್ಪ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವತ್ಸಲ್‌ ಗೋವಿಂದ್‌(95), ನಾಯಕ ಸಚಿನ್‌ ಬೇಬಿ(54) ಹಾಗೂ ಮೊಹಮ್ಮದ್ ಅಜರುದ್ದೀನ್‌(59) ಸ್ಪೋಟಕ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 277 ರನ್‌ ಕಲೆಹಾಕಿತು.