ನವದೆಹಲಿ(ಫೆ.01): 2021ನೇ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬೆನ್ನಲ್ಲೇ ಬಿಸಿಸಿಐ ಇದೀಗ ವಿಜಯ್ ಹಜಾರೆ ಟ್ರೋಫಿ ಟೂರ್ನಮೆಂಟ್ ಆಯೋಜಿಸಲು ಸಿದ್ದತೆ ನಡೆಸುತ್ತಿದೆ. 2021ರ ಫೆಬ್ರವರಿ 18ರಿಂದ ವಿಜಯ್ ಹಜಾರೆ ಟೂರ್ನಮೆಂಟ್ ಆರಂಭವಾಗಲಿದ್ದು, ಮುಷ್ತಾಕ್ ಅಲಿ ಟೂರ್ನಿ ನಡೆದ ಮೈದಾನಗಳಲ್ಲೇ ವಿಜಯ್ ಹಜಾರೆ ಟೂರ್ನಿಯು ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮುಂಬೈ, ಬರೋಡಾ, ಕೋಲ್ಕತ, ಇಂದೋರ್, ಬೆಂಗಳೂರು ಜತೆಗೆ ಚೆನ್ನೈ ಬದಲಿಗೆ ಕೇರಳದಲ್ಲಿ ಲೀಗ್‌ ಹಂತದ ಪಂದ್ಯಗಳು ನಡೆಯುವ ಸಾಧ್ಯತೆಯಿದೆ. ಚೆನ್ನೈನಲ್ಲಿ ಭಾರತ-ಇಂಗ್ಲೆಂಡ್‌ ನಡುವೆ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಫೆಬ್ರವರಿ 05ರಿಂದ ಆರಂಭವಾಗಲಿದೆ. ಅದೇ ರೀತಿ ನಾಕೌಟ್ ಪಂದ್ಯಗಳು ಈ ಬಾರಿ ಅಹಮದಾಬಾದ್‌ನಲ್ಲಿ ನಡೆಯುವುದಿಲ್ಲ. ಕಾರಣ ಭಾರತ-ಇಂಗ್ಲೆಂಡ್‌ ನಡುವಿನ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಹಾಗೂ ಟಿ20 ಪಂದ್ಯಗಳಿಗೆ ಸರ್ದಾರ್ ವಲ್ಲಭಬಾಯ್ ಪಟೇಲ್ ಮೈದಾನ ಆತಿಥ್ಯ ವಹಿಸಿದೆ. 

ಭಾರತ-ಇಂಗ್ಲೆಂಡ್‌ 2ನೇ ಟೆಸ್ಟ್‌: ಪ್ರೇಕ್ಷಕರಿಗೆ ಪ್ರವೇಶ?

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ನಾಕೌಟ್ ಪಂದ್ಯಗಳಿಗೆ ಸರ್ದಾರ್ ವಲ್ಲಭಬಾಯ್ ಪಟೇಲ್ ಮೈದಾನ ಆತಿಥ್ಯ ವಹಿಸಿತ್ತು. ಮುಷ್ತಾಕ್‌ ಅಲಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬರೋಡಾ ತಂಡವನ್ನು ಮಣಿಸಿ ತಮಿಳುನಾಡು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.