ವಿಜಯ್ ಹಜಾರೆ ಟ್ರೋಫಿ 2019: ಗೋವಾ ಎದುರು ಕರ್ನಾಟಕ ಜಯಭೇರಿ!
ವಿಜಯ್ ಹಜಾರೆ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕರ್ನಾಟಕ ತಂಡವು ಗೋವಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಬೆಂಗಳೂರು[ಅ.17]: 2019-20ರ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಅದ್ಭುತ ಲಯದಲ್ಲಿರುವ ಕರ್ನಾಟಕ ತಂಡ, 6ನೇ ಗೆಲುವು ದಾಖಲಿಸಿದೆ. ಈಗಾಗಲೇ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ನ್ನು ಖಚಿತಪಡಿಸಿಕೊಂಡಿರುವ ಮನೀಶ್ ಪಡೆ, ಬುಧವಾರ ನಡೆದ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಗೋವಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆಡಿರುವ 7 ಪಂದ್ಯಗಳಲ್ಲಿ ಆತಿಥೇಯ ಕರ್ನಾಟಕ ತಂಡ 6 ಗೆಲುವು ಸಾಧಿಸಿದ್ದು ಎಲೈಟ್ ‘ಎ’ ಮತ್ತು ‘ಬಿ’ ಗುಂಪಿನಲ್ಲಿ 24 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.
ವಿಜಯ್ ಹಜಾರೆ: ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ!
ದೇವದತ್ ಪಡಿಕ್ಕಲ್ ಶತಕ:
ಆಲೂರು ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೋವಾ ನೀಡಿದ 172 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕೆ.ಎಲ್. ರಾಹುಲ್ (9) ವೇಗಿ ಲಕ್ಷ್ಯ ಗಾರ್ಗ್ ಬೌಲಿಂಗ್‌ನಲ್ಲಿ ವೈಭವ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಆರಂಭದಲ್ಲಿ ಬಿರುಸಿನ ಬ್ಯಾಟಿಂಗ್‌ಗೆ ಇಳಿದ ದೇವದತ್ ಅದ್ಭುತ ಲಯದಲ್ಲಿದ್ದರು. 2ನೇ ವಿಕೆಟ್‌ಗೆ ಕರುಣ್ ನಾಯರ್ ಜೊತೆ ದೇವದತ್ 65 ರನ್ ಸೇರಿಸಿದರು. ಇದರಿಂದಾಗಿ ಕರ್ನಾಟಕ ಚೇತರಿಸಿಕೊಂಡಿತು. ಅನುಭವಿ ಬ್ಯಾಟ್ಸ್‌ಮನ್ ಕರುಣ್ (21) ರಾಜ್ಯದ ಆಟಗಾರ, ಗೋವಾ ತಂಡದ ನಾಯಕ ಅಮಿತ್ ವರ್ಮಾ ಔಟ್ ಮಾಡಿದರು.
ಪ್ರೊ ಕಬಡ್ಡಿ 2019: ಬೆಂಗಾಲ್ ವಾರಿಯರ್ಸ್’ಗೆ ಟಿಕೆಟ್
ಮುರಿಯದ 3ನೇ ವಿಕೆಟ್‌ಗೆ ನಾಯಕ ಮನೀಶ್ ಪಾಂಡೆ ಜೊತೆಯಾದ ದೇವದತ್ ಅದ್ಭುತ ಆಟವಾಡಿದರು. ಗೋವಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ 72 ರನ್ ಸೇರಿಸಿತು. 116 ಎಸೆತಗಳನ್ನು ಎದುರಿಸಿದ ದೇವದತ್ 6 ಬೌಂಡರಿ, 5 ಸಿಕ್ಸರ್ ಸಹಿತ 102 ರನ್‌ಗಳಿಸಿದರು. ಇದು ವಿಜಯ್ ಹಜಾರೆ ಟೂರ್ನಿಯಲ್ಲಿ ದೇವದತ್ ಅವರ 2ನೇ ಶತಕವಾಗಿದೆ. 34 ಎಸೆತಗಳನ್ನು ಎದುರಿಸಿದ ಮನೀಶ್ ಪಾಂಡೆ 1 ಬೌಂಡರಿ, 3 ಸಿಕ್ಸರ್‌ನೊಂದಿಗೆ 34 ರನ್‌ಗಳಿಸಿದರು.
ದುಬೆ-ಸುಚಿತ್ ಸ್ಪಿನ್ ಮೋಡಿ:
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಗೋವಾ ಕಳಪೆ ಆರಂಭ ಪಡೆಯಿತು. 5 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಗೋವಾ 10 ಓವರ್‌ಗಳ ಮುಕ್ತಾಯಕ್ಕೆ ಕೇವಲ 29 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ 88 ರನ್‌ಗಳಿಗೆ ಅಗ್ರ ಕ್ರಮಾಂಕದ ಪ್ರಮುಖ ಐವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು. 130 ರಿಂದ 133 ರನ್ ಸೇರಿಸುವಷ್ಟರಲ್ಲಿ ಮತ್ತೆ 3 ವಿಕೆಟ್ ಉರುಳಿದವು. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಗೋವಾ ತಂಡಕ್ಕೆ ದರ್ಶನ್ ಮಿಸಲ್ ಅಜೇಯ 33 ರನ್‌ಗಳಿಸಿದರ ಪರಿಣಾಮ ಗೋವಾ 150 ರನ್‌ಗಳ ಗಡಿ ದಾಟಿತು. ಆರಂಭಿಕ ಆದಿತ್ಯ ಕೌಶಲ್ 75 ರನ್‌ಗಳಿಸಿದರು. ಪ್ರವೀಣ್ ದುಬೆ 3, ಜೆ. ಸುಚಿತ್ 2 ವಿಕೆಟ್ ಪಡೆದರು.
ಸ್ಕೋರ್:
ಗೋವಾ 171/10 (ಆದಿತ್ಯ 75, ದರ್ಶನ್ 33, ದುಬೆ 3-29)
ಕರ್ನಾಟಕ 177/2 (ದೇವದತ್ 102*, ಮನೀಶ್ 34*, ಲಕ್ಷ್ಯ 1-27)